ಬೆಂಗಳೂರು: ರಾಜ್ಯ ಸರ್ಕಾರ ಉತ್ತರ ಕರ್ನಾಟಕ ಭಾಗವನ್ನು ಕಡೆಗಣಿಸಿದ್ರೆ, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ನಾನೇ ಮುಂದಾಳತ್ವ ವಹಿಸುತ್ತೇನೆ ಅಂತ ಹೇಳಿದ್ದ ಬಿಜೆಪಿ ಶಾಸಕ ಶ್ರೀರಾಮುಲು ಇದೀಗ ಉಲ್ಟಾ ಹೊಡೆದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ ಅವರು, ಅಖಂಡ ಕರ್ನಾಟಕವು ಯಾವುದೇ ಕಾರಣಕ್ಕೂ ವಿಭಜನೆಯಾಗಬಾರದು ಎನ್ನುವುದು ನನ್ನ ಸ್ಪಷ್ಟ ನಿಲುವು. ರಾಜ್ಯ ಒಡೆಯಲು ಕೆಲವು ಸಂಘಟನೆಗಳು ಕರೆ ನೀಡಿರುವ ಬಂದ್ಗೆ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ ಅಂತ ಹೇಳಿದ್ದಾರೆ.
ಇತ್ತೀಚೆಗೆ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ನೀನು ಮುಖ್ಯಮಂತ್ರಿಯಾಗಿ ಬಜೆಟ್ ಮಂಡಿಸಿದಾಗ ಹೈದ್ರಾಬಾದ್ ಕರ್ನಾಟಕಕ್ಕೇ ಏನು ಮಾಡಿದ್ದೀಯಾ? ಉತ್ತರ ಕರ್ನಾಟಕವನ್ನು ನೀನು ನಿರ್ಲಕ್ಷಿಸಿದ್ದೀಯಾ ಎಂದು ಪ್ರಶ್ನಿಸಿ ಸಿಎಂ ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದರು. ಈಗಾಗಲೇ ಪ್ರತ್ಯೇಕ ರಾಜ್ಯದ ಕೂಗು ಕೇಳಿಬರುತ್ತಿದೆ. ಇದೇ ರೀತಿ ತಾರತಮ್ಯ ಮಾಡಿದರೆ ಪ್ರತ್ಯೇಕ ರಾಜ್ಯದ ಕೂಗು ಹೆಚ್ಚಾಗುತ್ತೆ. ನನಗೆ ಅಖಂಡ ಕರ್ನಾಟಕ ಬೇಕಾಗಿದೆ. ಉತ್ತರ ಕರ್ನಾಟಕ ಭಾಗವನ್ನು ಕಡೆಗಣಿಸಿದ್ರೆ ನಾನೇ ಪ್ರತ್ಯೇಕ ರಾಜ್ಯದ ಮುಂದಾಳತ್ವ ವಹಿಸುತ್ತೇವೆ ಎಂದು ಎಚ್ಚರಿಸಿದ್ದರು.
ಅಖಂಡ ಕರ್ನಾಟಕವು ಯಾವುದೇ ಕಾರಣಕ್ಕೂ ವಿಭಜನೆಯಾಗಬಾರದು ಎನ್ನುವುದು ನನ್ನ ಸ್ಪಷ್ಟ ನಿಲುವು. ರಾಜ್ಯ ಒಡೆಯಲು ಕೆಲವು ಸಂಘಟನೆಗಳು ಕರೆ ನೀಡಿರುವ ಬಂದ್ಗೆ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ. pic.twitter.com/64rVUv5idQ
— B Sriramulu (@sriramulubjp) July 30, 2018
ಇಷ್ಟು ಮಾತ್ರವಲ್ಲದೇ ಇತ್ತೀಚೆಗೆ ವಿಧಾನಸಭಾ ಕಲಾಪದಲ್ಲಿ ಹಾಗೂ ಇತ್ತೀಚೆಗೆ ಮಾಧ್ಯಮಗಳ ಮುಂದೆ ಪ್ರತ್ಯೇಕ ರಾಜ್ಯದ ಕುರಿತಾಗಿ ಮಾತನಾಡಿದ್ದರು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಶಾಸಕ ಶ್ರೀರಾಮುಲು ಪರ ಹಾಗೂ ವಿರುದ್ಧ ಭಾರೀ ಆಕ್ರೋಶ ಕೇಳಿಬಂದಿತ್ತು. ಕನ್ನಡವನ್ನೇ ಸರಿಯಾಗಿ ಮಾತನಾಡಲು ಬಾರದ, ಆಂಧ್ರ ಪ್ರದೇಶದಿಂದ ಈ ವ್ಯಕ್ತಿ ಕರ್ನಾಟಕ ಎರಡು ಭಾಗವಾಗಬೇಕು ಎಂದಿದ್ದಾರೆ. ಎಂತಹ ಸುವರ್ಣ ಕಾಲ ಬಂದು ನೋಡಿ ಕನ್ನಡಿಗರಿಗೆ ಎಂದು ಶ್ರೀರಾಮುಲು ಚಿತ್ರ ಬಳಕೆ ಮಾಡಿ, ಬರೆದು ಅಮರನಾಥ್ ಎಂಬವರು ತಮ್ಮ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದರು.
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯ ವೇಳೆ ಶಾಸಕ ಬಿ.ಶ್ರೀರಾಮುಲು ಅವರು ಜೆಡಿಎಸ್ ಸೋತಿರುವ ಕ್ಷೇತ್ರಗಳ ಮೇಲೆ ಸೇಡನ್ನು ಬಜೆಟ್ ಮೂಲಕ ಸಿಎಂ ಎಚ್.ಡಿಕುಮಾರಸ್ವಾಮಿ ಅವರು ತೀರಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಹೀಗಾಗಿ ನಾನು ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಹೋರಾಟವನ್ನು ಬೆಂಬಲಿಸುತ್ತೇನೆ ಅಂತ ಹೇಳಿದ್ದರು.
ಚರ್ಚೆ ಜೋರಾಗುತ್ತಿದ್ದಂತೆ ಮಧ್ಯಪ್ರವೇಶಿಸಿದ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರು, ನಾವೆಲ್ಲ ಒಂದೇ. ಆದರೆ ಉತ್ತರ ಕರ್ನಾಟಕ ಭಾಗಕ್ಕೆ ಆಗಿರುವ ಅನ್ಯಾಯಕ್ಕೆ ಆಕ್ರೋಶ ವ್ಯಕ್ತಪಡಿಸಿ ಶ್ರೀರಾಮುಲು ಅವರು ಹಾಗೇ ಮಾತನಾಡಿದ್ದಾರೆ ಎಂದರು. ನಂತರ ರಾಜ್ಯ ವಿಭಜನೆಯ ಮಾತನ್ನು ಕಡತದಿಂದ ತೆಗೆಯುವಂತೆ ಉಪಸಭಾಧ್ಯಕ್ಷ ಕೃಷ್ಣಾರೆಡ್ಡಿ ಅವರಿಗೆ ಮನವಿ ಮಾಡಿಕೊಂಡರು. ವಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ ಅವರು ಪರಿಸ್ಥಿತಿಯನ್ನು ಸುಧಾರಿಸುತ್ತಿದ್ದಂತೆ, ಶ್ರೀರಾಮುಲು ತಮಗೂ ರಾಜ್ಯ ವಿಭಜನೆ ಬೇಕಿಲ್ಲ ಎಂದು ಒಪ್ಪಿಕೊಂಡಿದ್ದರು.