Connect with us

Bengaluru City

ಇವಿಎಂ ಬಗ್ಗೆ ಅಪಪ್ರಚಾರ, ಸುಳ್ಳು ಆರೋಪ ಮಾಡಿದ್ರೆ ಮಾನನಷ್ಟ ಕೇಸ್- ಚುನಾವಣಾ ಆಯೋಗ ಎಚ್ಚರಿಕೆ

Published

on

ಬೆಂಗಳೂರು: ಮಾಧ್ಯಮದಲ್ಲಿ ಸುಮ್ಮನೆ ಇವಿಎಮ್ ಮತ್ತು ವಿವಿಪ್ಯಾಟ್ ಬಗ್ಗೆ ಅಪಪ್ರಚಾರ ಮತ್ತು ಸುಖಾ ಸುಮ್ಮನೆ ಚರ್ಚೆ ಮಾಡಲಾಗುತ್ತಿದೆ. ಈ ರೀತಿಯಾಗಿ ಮಾಧ್ಯಮದಲ್ಲಿ ಚರ್ಚೆ ಮಾಡಿದ್ರೆ, ಸುಳ್ಳು ಆರೋಪ ಮಾಡಿದ್ರೆ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುತ್ತದೆ ಎಂದು ರಾಜ್ಯ ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ.

ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಸಂಜೀವ್ ಕುಮಾರ್, ಐದು ರಾಜ್ಯಗಳಿಂದ ಕರ್ನಾಟಕಕ್ಕೆ ಇವಿಎಂ ಯಂತ್ರಗಳು ಬಂದಿವೆ. ಗುಜರಾತ್, ಉತ್ತರಪ್ರದೇಶ, ಜಾರ್ಖಂಡ್, ಮಹಾರಾಷ್ಟ್ರ ದಿಂದ ಸುಮಾರು 85,600 ಇವಿಎಂಗಳು ಬಂದಿವೆ. ಅಲ್ಲಿ ಬಳಸಲಾಗಿರುವ ಇವಿಎಂ ಯಂತ್ರಗಳೇ ಇಲ್ಲಿಗೆ ಬಂದಿವೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಗುಜರಾತ್ ಮತ್ತು ಉತ್ತರ ಪ್ರದೇಶಗಳಲ್ಲಿ ಬಳಸಿರುವ ಇವಿಎಂ ಗಳು ಕರ್ನಾಟಕಕ್ಕೆ ಬಂದಿವೆ ಎಂಬ ಅನುಮಾನದ ಗ್ರಹಿಕೆ ಬೇಡ. ಇದರ ಬಗ್ಗೆ ತಪ್ಪು ಮಾಹಿತಿ ಹರಡಿದ್ರೆ ಕ್ರಿಮಿನಲ್ ಸ್ವರೂಪದ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುತ್ತದೆ ಎಂದು ಹೇಳಿದ್ರು.

ಕರ್ನಾಟಕಕ್ಕೆ ಯಾವುದೋ ಒಂದು ರಾಜ್ಯದಿಂದ ಇವಿಎಂ ಯಂತ್ರ ಬಂದಿಲ್ಲ. ಐದು ರಾಜ್ಯಗಳಿಂದ ಇವಿಎಂ ಯಂತ್ರ ಗಳು ಬಂದಿವೆ. ಈ ರೀತಿ ಬಿಂಬಿಸುವುದು ಬೇಡ ಅಂತಾ ಚುನಾವಣಾ ಆಯೋಗ ಮನವಿ ಮಾಡಿದೆ. ಬೆಂಗಳೂರು ಸೇರಿದಂತೆ ಹಲವು ಕಡೆ ಹೊಸ ಇವಿಎಂ ಗಳನ್ನು ಬಳಕೆ ಮಾಡಲಾಗುತ್ತದೆ ಎಂದು ಸಂಜೀವ್ ಕುಮಾರ್ ತಿಳಿಸಿದ್ದಾರೆ.

ರಾಜ್ಯ ಚುನಾವಣೆಗಾಗಿ ಈ ಬಾರಿ ಒಟ್ಟು 73,850 ವಿವಿಪ್ಯಾಟ್ ಗಳನ್ನ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅದರಲ್ಲಿ 56,290 ಹೊಸ ವಿವಿಪ್ಯಾಟ್ ಗಳನ್ನ ಬಿಇಎಲ್ ನಿಂದ ಈಗಾಗಲೇ ತರಲಾಗಿದೆ. ಇನ್ನುಳಿದ 17,560 ವಿವಿಪ್ಯಾಟ್ ಗಳನ್ನ ಬಿಇಎಲ್ ಮತ್ತು ಗುಜರಾತ್ ನಿಂದ ತರಿಸಲಾಗುತ್ತದೆ. 13,000 ಗುಜರಾತ್ ನಿಂದ ಮತ್ತು 4 ಸಾವಿರ ಬಿಇಎಲ್ ನಿಂದ ತರಲಾಗುತ್ತದೆ. ಚುನಾವಣೆಗೆ 85,170 ಬಿಯು(ಬ್ಯಾಲೆಟ್ ಯುನಿಟ್) ಬೇಕಿದ್ದು, 70,190 ಬಿಯು ರಾಜ್ಯಕ್ಕೆ ಬಂದಿದೆ. ಸಿಯು(ಕಂಟ್ರೋಲ್ ಯುನಿಟ್) 70990 ಬೇಕಿದ್ದು, ಅದರಲ್ಲಿ 52110 ಸಿಯು ರಾಜ್ಯಕ್ಕೆ ಬಂದಿದೆ. ಒಟ್ಟು 5 ರಾಜ್ಯದಿಂದ ಮೆಷೀನ್ ಗಳು ಬರುತ್ತಿವೆ ಎಂದು ತಿಳಿಸಿದ್ರು.

ಮಾಧ್ಯಮದಲ್ಲಿ ಸುಮ್ಮನೆ ಇವಿಎಮ್ ಮತ್ತು ವಿವಿಪ್ಯಾಟ್ ಬಗ್ಗೆ ಅಪಪ್ರಚಾರ ಮತ್ತು ಸುಖಾ ಸುಮ್ಮನೆ ಚರ್ಚೆ ಮಾಡಲಾಗುತ್ತಿದೆ. ಈ ರೀತಿಯಾಗಿ ಮಾಧ್ಯಮದಲ್ಲಿ ಚರ್ಚೆ ಮಾಡಿದ್ರೆ, ಸುಳ್ಳು ಆರೋಪ ಮಾಡಿದ್ರೆ ಮಾನನಷ್ಟ ಕೇಸ್ ದಾಖಲಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ರು.

ಈವರೆಗೆ 30 ಕೋಟಿ ರೂ. ಹಣ ಖರ್ಚು: ಈ ಬಾರಿ ವಿವಿಪ್ಯಾಟ್ ಗಳನ್ನ ಬಳಕೆ ಮಾಡುತ್ತಿರುವುದರಿಂದ ಮ್ಯಾನ್ ಪವರ್ ಹೆಚ್ಚು ಬೇಕು. 25% ಹೆಚ್ಚಿನ ಸಿಬ್ಬಂದಿ ಬೇಕಾಗುತ್ತದೆ. ಕಳೆದ ಬಾರಿ ಪೋಲಿಸರನ್ನ ಹೊರತುಪಡಿಸಿ 2.75 ಲಕ್ಷ ಸಿಬ್ಬಂದಿಯನ್ನ ಬಳಸಲಾಗಿತ್ತು. ಆದ್ರೆ ಈ ಬಾರಿ 3.25 ಲಕ್ಷ ಸಿಬ್ಬಂದಿಯನ್ನ ಬಳಸಲಾಗುತ್ತದೆ. ಇಲ್ಲಿಯವರೆಗೆ 30 ಕೋಟಿ ಹಣವನ್ನ ಖರ್ಚು ಮಾಡಲಾಗಿದೆ. ಒಂದು ಕ್ಷೇತ್ರಕ್ಕೆ 1.14 ಕೋಟಿ ಹಣದಂತೆ 224 ಕ್ಷೇತ್ರಕ್ಕೆ ಖರ್ಚಾಗಬಹುದು ಎಂದು ಸಂಜೀವ್ ಕುಮಾರ್ ಹೇಳಿದ್ರು.

ತಪ್ಪು ಆಕ್ಷೇಪಣೆ ಸಲ್ಲಿಸಿದ್ರೆ ಕ್ರಮ: ಮತ ಚಲಾಯಿಸುವುದರ ಬಗ್ಗೆ ಅನುಮಾನ ವಿಚಾರವಾಗಿ ಮಾತನಾಡಿದ ಅವರು, ಮತ ಚಲಾಯಿಸಿದ ಮೇಲೆ ಮತ ಬೇರೆಯವರಿಗೆ ಹೋಗಿದೆ ಎಂದು ಅನುಮಾನ ಬಂದ್ರೆ ಆ ಮತದಾರ ಆಕ್ಷೇಪಣೆ ಸಲ್ಲಿಸಬಹುದು. ಆಕ್ಷೇಪಣೆಯಲ್ಲಿ ಯಾವುದೇ ಲೋಪದೋಷಗಳು ಕಂಡುಬಂದಿಲ್ಲ ಅಂದ್ರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಮತದಾನ ಮಾಡಿದ ನಂತರ ಮತದಾರ ಪರಿಶೀಲನೆ ಮಾಡಬಹುದು. ಯಾರಿಗೆ ಮತ ಚಲಾಯಿಸಿದ್ದೇವೆಂದು 7 ಸೆಕೆಂಡ್‍ಗಳ ಕಾಲ ವೀಕ್ಷಿಸಬಹುದು ಎಂದು ಹೇಳಿದ್ರು.

ರಾಜ್ಯದಲ್ಲಿ ಒಟ್ಟು 4,96,56,059 ಮತದಾರರಿದ್ದಾರೆ. 4,552 ತೃತೀಯಲಿಂಗಿಗಳು, 2,51,79,219 ಪುರುಷರು ಹಾಗೂ 2,44,72,288 ಮಹಿಳಾ ಮತದಾರರಿದ್ದಾರೆ. 15.42 ಲಕ್ಷ ಹೊಸ ಮತದಾರರ ಸೇರ್ಪಡೆಯಾಗಿದೆ. ಶೃಂಗೇರಿ ಅತ್ಯಂತ ಕಡಿಮೆ ಮತದಾರರು ಹೊಂದಿರುವ ವಿಧಾನಸಭಾ ಕ್ಷೇತ್ರವಾಗಿದ್ದು, 1,62,108 ಮತದಾರರು ಇದ್ದಾರೆ. ಬೆಂಗಳೂರು ದಕ್ಷಿಣ ಅತೀ ಹೆಚ್ಚು ಮತದಾರರು ಹೊಂದಿರುವ ವಿಧಾನಸಭಾ ಕ್ಷೇತ್ರವಾಗಿದ್ದು, 5,81,408 ಮತದಾರರಿದ್ದಾರೆ. ಹಾಗೂ ಬೆಂಗಳೂರು ದಕ್ಷಿಣ ಅತೀ ಹೆಚ್ಚು ಮಹಿಳಾ ಮತದಾರರು ಹೊಂದಿರುವ ಕ್ಷೇತ್ರವಾಗಿದ್ದು, 2,69,878 ಮಹಿಳಾ ಮತದಾರರು ಈ ಕ್ಷೇತ್ರದಲ್ಲಿದ್ದಾರೆ. ಫೆಬ್ರವರಿ 28ರಿಂದ ಪುನಃ ಮತದಾರರ ತಿದ್ದುಪಡಿ/ಸೇರ್ಪಡೆ ಮತ್ತು ತೆಗೆದುಹಾಕುವಿಕೆಗೆ ಅರ್ಜಿ ಸಲ್ಲಿಸಬಹುದು ಎಂದು ಮಾಹಿತಿ ನೀಡಿದ್ರು.

Click to comment

Leave a Reply

Your email address will not be published. Required fields are marked *