ಮೈಸೂರು: ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರದಲ್ಲಿ ಕುಸಿದು ಬಿದ್ದು ಹೃದಯಾಘಾತದಿಂದ ಮೃತಪಟ್ಟ ವಿದ್ಯಾರ್ಥಿನಿ ಅನುಶ್ರೀ ಮನೆಯಲ್ಲಿ ಸೂತಕದ ಛಾಯೆ ದಟ್ಟವಾಗಿ ಮೂಡಿದೆ. ಆಕೆ ಪ್ರತಿಭಾನ್ವಿತಳು, ಪರೀಕ್ಷೆಗೆ ಹೆದರುವವಳಲ್ಲ. ಪರೀಕ್ಷಾ ಕೇಂದ್ರ ಬದಲಾಗಿದ್ದಕ್ಕೆ ಆಕೆ ಆಘಾತಕ್ಕೆ ಒಳಗಾಗಿದ್ದಾಳೆ ಎಂದು ಆಕೆಯ ಹೆತ್ತವರು ಕಣ್ಣೀರು ಹಾಕುತ್ತಿದ್ದಾರೆ.
ಟಿ. ನರಸೀಪುರದಿಂದ 12 ಕಿ.ಮಿ ದೂರದ ಅಕ್ಕೂರು ಗ್ರಾಮದ ಕೆಂಪರಾಜು ಮಗಳು ಅನುಶ್ರೀ. ಗಾರೆ ಕೆಲಸ ಮಾಡುವ ಕೆಂಪರಾಜು ಬಹಳ ಕಷ್ಟಪಟ್ಟು ಮಗಳನ್ನು ಓದಿಸುತ್ತಿದ್ದರು. ಈಗ ಮಗಳು ಈ ರೀತಿ ಸಾವನ್ನಪ್ಪಿರುವುದು ಸಹಜವಾಗಿಯೆ ಅವರನ್ನು ಆಘಾತಕ್ಕೆ ತಳ್ಳಿದೆ.
ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ ದುಃಖ ತೋಡಿಕೊಂಡ ಅನುಶ್ರೀ ಪೋಷಕರು, ಆಕೆಗೆ ಯಾವುದೇ ಆರೋಗ್ಯದ ಸಮಸ್ಯೆ ಇರಲಿಲ್ಲ. ಪರೀಕ್ಷೆಗೆ ಹೋದ ಸಂದರ್ಭದಲ್ಲೂ ಚೆನ್ನಾಗಿಯೇ ಇದ್ದಳು. ಪರೀಕ್ಷೆ ಬರೆದು ಬರುತ್ತೇನೆ ಎಂದು ಬೆಳಗ್ಗೆ ಹೇಳಿ ಹೋದ ಮಗು ಹಿಂತಿರುಗಿ ಬರಲೇ ಇಲ್ಲ ಎಂದು ಗದ್ಗದಿತರಾದರು.
ನಾನು ಕೆಲಸ ಮಾಡುತ್ತಿದ್ದಾಗ ನನ್ನ ತಮ್ಮನ ಕರೆ ಬಂತು. ಮಗಳಿಗೆ ಹುಷಾರಿಲ್ಲ, ಬೇಗ ಅವಳನ್ನು ನೋಡಿಕೊಂಡು ಬಾ ಎಂದ. ಬಳಿಕ ನಾನು ಆಸ್ಪತ್ರೆಗೆ ಧಾವಿಸಿದೆ. ಆದರೆ ಅನುಶ್ರೀ ಜೀವಂತವಾಗಿಯೇ ಇರಲಿಲ್ಲ ಎಂದು ಅಳಲು ತೋಡಿಕೊಂಡರು. ಇದನ್ನೂ ಓದಿ: ಮುಸ್ಲಿಂ ಶಿಲ್ಪಿಗಳನ್ನು ಯಾವಾಗ ಬಹಿಷ್ಕರಿಸುತ್ತೀರಿ: ಹೆಚ್‌ಡಿಕೆ ಪ್ರಶ್ನೆ
ಪ್ರತೀ ದಿನ ಆಕೆ ಕಷ್ಟಪಟ್ಟು ಚೆನ್ನಾಗಿಯೇ ಓದುತ್ತಿದ್ದಳು. ಆಕೆಯನ್ನು ಡಾಕ್ಟರ್ ಇಲ್ಲವೇ ಎಂಜಿನಿಯರ್ ಓದಿಸಬೇಕೆಂಬ ಕನಸಿತ್ತು. ಆದರೆ ಈಗ ಅವಳೇ ಇಲ್ಲ. ಪರೀಕ್ಷೆ ದಿನ ಅವಳನ್ನು ನಾನೇ ಬೆಳಗ್ಗೆ ಆಟೋ ಹತ್ತಿಸಿದ್ದೆ. ಆದರೆ ಬರುವಾಗ ಆಕೆ ಹೆಣವಾಗಿ ಬಂದಳು ಎಂದು ಅನುಶ್ರೀ ತಾಯಿ ಆಕ್ರಂದಿಸಿದರು.
ಶಿಕ್ಷಕರ ನಿರ್ಲಕ್ಷವೇ ಕಾರಣ:
ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿನಿ ಅನುಶ್ರೀ ಹೃದಯಾಘಾತದಿಂದ ಮೃತಪಟ್ಟ ಪ್ರಕರಣದಲ್ಲಿ ಶಿಕ್ಷಕರ ನಿರ್ಲಕ್ಷ್ಯವಿದೆ ಎಂದು ಹೇಳಲಾಗುತ್ತಿದೆ. ಅನುಶ್ರೀ ತನಗೆ ನಿಗದಿ ಪಡಿಸಿದ ಪರೀಕ್ಷಾ ಕೇಂದ್ರ ಬಿಟ್ಟು ಪಕ್ಕದ ಕಟ್ಟಡದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದಾಳೆ.
ಪರೀಕ್ಷೆ ಆರಂಭವಾದ ಮುಕ್ಕಾಲು ಗಂಟೆ ಬಳಿಕ ಪರೀಕ್ಷಾ ಮೇಲ್ವಿಚಾರಕರು ಇದು ನಿನ್ನ ಪರೀಕ್ಷಾ ಕೇಂದ್ರವಲ್ಲ. ಪಕ್ಕದ ಕೇಂದ್ರ ನಿನ್ನದು ಎಂದು ಹೇಳಿ ಉತ್ತರ ಪತ್ರಿಕೆ ಹಿಂದಕ್ಕೆ ಪಡೆದು ಬೇರೆ ಕೇಂದ್ರಕ್ಕೆ ಕಳುಹಿಸಿದ್ದಾರೆ. ಪರೀಕ್ಷೆ ಪ್ರಾರಂಭವಾಗಿ ಮುಕ್ಕಾಲು ಗಂಟೆ ಬಳಿಕ ಪರೀಕ್ಷಾ ಮೇಲ್ವಿಚಾರಕರು ಎಚ್ಚೆತ್ತುಕೊಂಡಿದ್ದಾರೆ. ಅವರ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣ ಎಂಬ ಆರೋಪ ಕೇಳಿ ಬರುತ್ತಿದೆ. ಇದನ್ನೂ ಓದಿ: 40% ಕಮಿಷನ್ – ಈಶ್ವರಪ್ಪ ವಿರುದ್ಧ ಮೋದಿಗೆ ಪತ್ರ ಬರೆದ ಗುತ್ತಿಗೆದಾರ
ಘಟನೆಯಲ್ಲಿ ನಡೆದಿದ್ದೇನು?
ಅನುಶ್ರೀ ಪರೀಕ್ಷೆ ಬರೆಯಬೇಕಿದ್ದ ಕೇಂದ್ರ ವಿದ್ಯೋದಯ ಹೈಸ್ಕೂಲ್‌ನಲ್ಲಿ. ಆದರೆ ಅನುಶ್ರೀ ಇದೇ ಶಾಲೆಯ ಕಟ್ಟಡಕ್ಕೆ ಹೊಂದಿಕೊಂಡಿರುವ ವಿದ್ಯೋದಯ ಹಿರಿಯ ಪ್ರಾಥಮಿಕ ಶಾಲೆಗೆ ಹೋಗಿ ಪರೀಕ್ಷೆ ಬರೆದಿದ್ದಾಳೆ. ಅಲ್ಲಿ ಆಕೆಯ ನೋಂದಣಿ ಸಂಖ್ಯೆ ಹೋಲುವ ನಂಬರ್ ಇದ್ದ ಕಾರಣ ಅಲ್ಲೇ ಕುಳಿತು ಪರೀಕ್ಷೆ ಬರೆದಿದ್ದಾಳೆ. ಪರೀಕ್ಷೆ ಪ್ರಾರಂಭವಾಗಿ ಮುಕ್ಕಾಲು ಗಂಟೆಯ ಬಳಿಕ ಪರೀಕ್ಷಾ ಮೇಲ್ವಿಚಾರಕರು ಆಕೆಯನ್ನು ಪರೀಕ್ಷೆಯಿಂದ ಎಬ್ಬಿಸಿ, ಇನ್ನೊಂದೆಡೆಗೆ ಕಳುಹಿಸಿದ್ದಾರೆ. ಈ ಗೊಂದಲಗಳಿಂದ ಅನುಶ್ರೀ ಒತ್ತಡಕ್ಕೊಳಗಾಗಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ.