ಕಿರುತೆರೆ ನಟಿ, ನಿರೂಪಕಿ ಅನುಪಮಾ ಗೌಡ ಮಾದರಿಯ ಕೆಲಸ ಮಾಡುವ ಮೂಲಕ ಇತರರಿಗೆ ಪ್ರೇರಣೆಯಾಗಿದ್ದಾರೆ. ವರ್ಷಗಳಿಂದ ಬೆಳೆಸಿದ್ದ ತಲೆಗೂದಲನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡುವ ಮೂಲಕ ಅವರ ಮುಖದಲ್ಲಿ ಮಂದಹಾಸ ಮೂಡಿಸಿದ್ದಾರೆ. ಈ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ‘ನನ್ನ ವೃತ್ತಿ ಜೀವನದಲ್ಲಿ ಉದ್ದನೆಯ ಜಡೆ ನನ್ನ ಆತ್ಮವಿಶ್ವಾಸದ ಕುರುಹು ಆಗಿತ್ತು. ಈ ತಲೆಗೂದಲನ್ನು ಪ್ರೀತಿಯಿಂದ ಪೋಷಣೆ ಮಾಡುತ್ತಾ ಬಂದಿದ್ದೆ. ಇದೀಗ ಅನೇಕರಿಗೆ ಈ ತಲೆಗೂದಲಿನ ಅವಶ್ಯಕತೆ ಇರುವುದು ಕಂಡು ಬಂತು. ಹಾಗಾಗಿ ನಾನು ಅವುಗಳನ್ನು ಕತ್ತರಿಸಿ, ಅಗತ್ಯವಿದ್ದರಿಗೆ ಕೊಡಲು ಮುಂದಾಗಿದ್ದೇನೆ. ಈ ಕೆಲಸ ಮಾಡಲು ನನಗೆ ಹೆಮ್ಮೆ ಅನಿಸುತ್ತಿದೆ’ ಎಂದು ಅವರು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ : ‘ಸಲಾರ್’ ಸಿನಿಮಾದಲ್ಲಿ ‘ಉಗ್ರಂ’ ಛಾಯೆ ಇದೆ: ಪ್ರಶಾಂತ್ ನೀಲ್
ತಾವು ತಲೆಗೂದಲನ್ನು ಕಟ್ ಮಾಡಿಸಿದ್ದರ ಫೋಟೋವನ್ನೂ ಕೂಡ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದು, ಇದೊಂದು ಚಿಕ್ಕ ಕೆಲಸವಾದರೂ, ತಲೆಗೂದಲು ಅವಶ್ಯವಿದ್ದವರ ಮುಖದಲ್ಲಿ ನಗು ನೋಡಿದಾಗ ಒಂದು ರೀತಿ ಸಾರ್ಥಕ ಭಾವ ಮೂಡುತ್ತದೆ ಎಂದೂ ಅವರು ಬರೆದುಕೊಂಡಿದ್ದಾರೆ. ತಾವು ಇಂಥದ್ದೊಂದು ಪೋಸ್ಟ್ ಹಾಕುತ್ತಿರುವುದು ಕೇವಲ ಬೇರೆಯವರಿಗೂ ಪ್ರೇರಣೆ ಆಗಲಿ ಎನ್ನುವ ಕಾರಣಕ್ಕಾಗಿಯೇ ಹೊರತು, ಯಾವುದೇ ಪ್ರಚಾರಕ್ಕಾಗಿ ಅಲ್ಲ’ ಎನ್ನುವುದನ್ನು ಅವರು ಸ್ಪಷ್ಟ ಪಡಿಸಿದ್ದಾರೆ. ಇದನ್ನೂ ಓದಿ : EXCLUSIVE INTERVIEW: ಗೆಲ್ಲಲು ಹೊರಟವನಿಗೆ ಸೋಲು ದೊಡ್ಡದಾಗಬಾರದು: ಯಶ್
ಹಳ್ಳಿ ದುನಿಯಾ ಶೋ ಮೂಲಕ ಟಿವಿ ರಂಗಕ್ಕೆ ಎಂಟ್ರಿ ಕೊಟ್ಟ ಅನುಪಮಾ ಗೌಡ, ಆ ನಂತರ ಧಾರಾವಾಹಿಗಳಲ್ಲಿ ನಟಿಸಿದರು. ನಂತರ ನಿರೂಪಣೆಯತ್ತ ಮುಖ ಮಾಡಿದರು. ಈಗ ಅನುಪಮಾ ಗೌಡ ಸ್ಟಾರ್ ನಿರೂಪಕಿ ಮತ್ತು ಬೇಡಿಕೆಯ ನಿರೂಪಕಿಯಾಗಿ ಬೆಳೆದಿದ್ದಾರೆ. ಕಷ್ಟದ ದಿನಗಳನ್ನು ಎದುರಿಸಿ ಇದೀಗ ತಮ್ಮಿಷ್ಟದಂತೆ ಬದುಕುವಷ್ಟು ಅನುಪಮಾ ಗೌಡ ವೃತ್ತಿ ಬದುಕನ್ನು ಕಟ್ಟಿಕೊಂಡಿದ್ದಾರೆ.
ಈ ಹಿಂದೆ ಅನೇಕ ತಾರೆಯರು ಕ್ಯಾನ್ಸರ್ ರೋಗಿಗಳಿಗಾಗಿಯೇ ತಮ್ಮ ತಲೆಗೂದಲನ್ನು ದಾನ ಮಾಡಿದ್ದಾರೆ. ಈ ಹಿಂದೆ ಕಾರುಣ್ಯ ರಾಮ್, ಕಾವ್ಯ ಶಾಸ್ತ್ರಿ ಸೇರಿದಂತೆ ಹಲವು ನಟಿಯರು ಇಂತಹ ಕೆಲಸ ಮಾಡುವ ಮೂಲಕ ಮಾದರಿಯಾಗಿದ್ದರು.