Connect with us

Cinema

ಅಭಿಮಾನಿಗೆ ಲೆಫ್ಟ್ ರೈಟ್ ತೆಗೆದುಕೊಂಡ ನಟಿ ಅನು ಪ್ರಭಾಕರ್

Published

on

ಬೆಂಗಳೂರು: ನಟಿ ಅನು ಪ್ರಭಾಕರ್ ಅಭಿಮಾನಿಯೊಬ್ಬನ ಮೇಲೆ ಗರಂ ಆಗಿ ಲೆಫ್ಟ್ ರೈಟ್ ತೆಗೆದುಕೊಂಡು ಕ್ಲಾಸ್ ಮಾಡಿದ್ದಾರೆ.

ಫೆ.26 ರಂದು ಅನು ಪ್ರಭಾಕರ್ “ಮತ್ತೆ ಕ್ಯಾಮೆರಾ ಮುಂದೆ” ಎಂದು ಬರೆದು ಟ್ವೀಟ್ ಮಾಡಿ ಫೋಟೋ ಹಾಕಿದ್ದರು. ಈ ಟ್ವೀಟ್ ಗೆ ಮುಧುಸೂಧನ್ ಎಂಬವರು, “ಸ್ವಲ್ಪ ವಯಸ್ಸಗಿದೆ ಬಿಡಿ ಸಾಕು” ಎಂದು ಕಮೆಂಟ್ ಮಾಡಿದ್ದರು.

ಈ ಕಮೆಂಟ್ ನೋಡಿ ಗರಂ ಆದ ಅನು ಪ್ರಭಾಕರ್, “ವಯಸ್ಸು ಆದ್ರೆ ಕೆಲಸ ನಿಲ್ಲಿಸಬೇಕಾ ಮಧು? ನೀವು ನನ್ನ ಸಿನಿಮಾ ನೋಡೋ ಅವಶ್ಯಕತೆ ಇಲ್ಲ ಬಿಡಿ. ಕಲಾವಿದರಾಗಿ ನಮ್ಮನ್ನು ಇಷ್ಟ ಪಡುವವರು ನೋಡುತ್ತಾರೆ” ಎಂದು ಬರೆದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಖಾರವಾಗಿ ಬರೆದಿದ್ದು ಅಲ್ಲದೇ ಈ ಟ್ವೀಟ್ ಅನ್ನು ಪಿನ್ ಮಾಡಿದ್ದಾರೆ.

ಅನು ಪ್ರಭಾಕರ್ ಅವರ ಈ ಟ್ವೀಟ್ ಗೆ ಹಲವು ಮಂದಿ ಬೆಂಬಲ ಸೂಚಿಸಿದ್ದಾರೆ. ಭರತಶ್ರೀ ಎಂಬವರು,”ಕಲೆಗೆ ಮತ್ತು ಕಲಾವಿದನಿಗೆ ಸಾವಿಲ್ಲ. ನೀವು ಚಿತ್ರರಂಗಕ್ಕೆ ಬರಬೇಕು ಮೇಡಂ. ಚಿಕ್ಕವನಿದ್ದಾಗ ನಿಮ್ಮ ಶ್ರೀರಸ್ತು ಶುಭಮಸ್ತು ತುಂಬಾ ಇಷ್ಟಪಟ್ಟಿದ್ದೆ. ದೊಡ್ಡವನಾದಾಗ ಸವಾರಿ ಇಷ್ಟಪಟ್ಟೆ. ನೀವು ಮತ್ತೆ ಚಿತ್ರ ಮಾಡಬೇಕು, ಪರದೆ ಮೇಲೆ ಬರಬೇಕು. ಇದೇ ನಮ್ಮ ಹಾರೈಕೆ. ಶುಭವಾಗಲಿ” ಎಂದು ಬರೆದು ಬೆಂಬಲ ಸೂಚಿಸಿದ್ದಾರೆ.

ವಿದ್ಯಾ ಎಂಬವರು,”ಸರಿಯಾಗಿ ಹೇಳಿದ್ದೀರಿ ಮೇಡಂ. ನಮ್ಮ ಜನಕ್ಕೆ ಹೀರೋ ಮುಖದ ಮೇಲೆ ನೆರಿಗೆ ಬಂದರೂ, ತಲೆ ಕೂದಲು ಬೆಳ್ಳಗಾದರೂ, ಮಗಳ ವಯಸ್ಸಿನ ನಾಯಕಿ ಜೊತೆ ನಟಿಸಿದ್ರು ಇಷ್ಟ. ಅದೇ ನಾಯಕಿಯರು ಮದುವೆ ಆದಕೂಡಲೇ ವಯಸ್ಸಾಯ್ತು ಅಂತಾರೆ. ನಾಯಕಿಯ ವಯಸ್ಸಿಗೆ ಮಾತ್ರ ಬೆಲೆನಾ. ಕಲೆಗೆ ಬೆಲೆಯೇ ಇಲ್ವಾ? ಏನ್ ಜನಾನೋ. ನೀವು ನಟಿಸಿ ಆಲ್ ದಿ ಬೆಸ್ಟ್” ಎಂದು ಕಮೆಂಟ್ ಮಾಡಿ ಪ್ರೋತ್ಸಾಹಿಸಿದ್ದಾರೆ.

ವರ್ಷದ ನಂತರ ನಟಿ ಅನು ಪ್ರಭಾಕರ್ ಮತ್ತೆ ಸ್ಯಾಂಡಲ್‍ವುಡ್‍ಗೆ ರೀ ಎಂಟ್ರಿ ಕೊಟ್ಟಿದ್ದು, ಕಾದಂಬರಿ ಆಧರಿತ ಚಿತ್ರದ ಮೂಲಕ ಕಮ್ ಬ್ಯಾಕ್ ಆಗಿದ್ದಾರೆ. ಅನುಪ್ರಭಾಕರ್ ಅಭಿಮಾನಿಗಳಲ್ಲಿ ಇದು ಅತೀವ ಸಂತಸವನ್ನುಂಟುಮಾಡಿದ್ದು, ತಮ್ಮ ನೆಚ್ಚಿನ ನಟಿಯನ್ನು ತೆರೆಯ ಮೇಲೆ ನೋಡುವ ಕಾತರದಿಂದ ಕಾಯುತ್ತಿದ್ದಾರೆ. ಅಷ್ಟೇ ವೇಗದಲ್ಲಿ ಸಿನಿಮಾ ಸಹ ಪೂರ್ಣಗೊಂಡಿದ್ದು, ಆಗಲೇ ಡಬ್ಬಿಂಗ್ ಹಂತದಲ್ಲಿದೆ.

ಆರಂಭದಲ್ಲಿ ತಕ್ಕ ಪಾತ್ರಗಳು ಸಿಗಲಿಲ್ಲ ಎಂದು ಸಿನಿಮಾದಿಂದ ದೂರ ಉಳಿದರೆ, ನಂತರ ಸಂಸಾರ, ಮಕ್ಕಳ ಜವಾಬ್ದಾರಿಯ ಕಾರಣ ನಟನೆಗೆ ಕೆಲವು ವರ್ಷಗಳ ಬಿಡುವು ನೀಡಿದ್ದರು. ಇದೀಗ ಮತ್ತೆ ಪೂರ್ಣ ಪ್ರಮಾಣದಲ್ಲಿ ಅನುಪ್ರಭಾಕರ್ ನಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಲೇಖಕಿ ಸಾರಾ ಅಬೂಬಕರ್ ಅವರ `ವಜ್ರಗಳು’ ಕಾದಂಬರಿ ಆಧಾರಿತ ಚಿತ್ರ ಇದಾಗಿದ್ದು, ಸಿನಿಮಾಗೆ `ಸಾರಾವಜ್ರ’ ಎಂದು ಹೆಸರಿಡಲಾಗಿದೆ. ನಿರ್ದೇಶಕಿ ಆರ್ನಾ ಸಾಧ್ಯ (ಶ್ವೇತಾ ಶೆಟ್ಟಿ) ಆಕ್ಷನ್ ಕಟ್ ಹೇಳಿದ್ದಾರೆ. ಸಾರಾವಜ್ರ ಮೂಲಕ ಅನುಪ್ರಭಾಕರ್ ನಟನೆಗೆ ಮರಳಿದ್ದಾರೆ. ಕಳೆದ ವರ್ಷ `ಅನುಕ್ತಾ’ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ ಅವರ ಕೊನೆಯ ಸಿನಿಮಾ. ಆದರೆ ವಜ್ರಗಳು ಕಾದಂಬರಿಯ ಜೀವಾಳ `ನಫಿಜಾ’ ಪಾತ್ರ. ಅದೇ ಪಾತ್ರದಲ್ಲಿ ಅನು ಮಿನುಗಿದ್ದಾರೆ. ಚಿತ್ರ ಡಬ್ಬಿಂಗ್ ಹಂತದಲ್ಲಿದ್ದು, ಸದ್ಯದಲ್ಲೇ ಚಿತ್ರದ ಒಂಬತ್ತು ಹಾಡುಗಳು ಬಿಡುಗಡೆಯಾಗುವ ನಿರೀಕ್ಷೆ ಇದೆ.

ಬಾಲನಟಿಯಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ ಅನು ಪ್ರಭಾಕರ್ ಎರಡು ದಶಕಗಳಲ್ಲಿ ಸುಮಾರು 80 ಚಿತ್ರಗಳಲ್ಲಿ ನಟಿಸಿದ್ದಾರೆ. ನಟ ರಘು ಮುಖರ್ಜಿಯವರನ್ನು ಕೈಹಿಡಿದಿರುವ ಅವರಿಗೆ ಒಂದೂವರೆ ವರ್ಷದ ಮಗಳಿದ್ದಾಳೆ. ತಾಯ್ತನದ ಖುಷಿಯಲ್ಲಿರುವ ಅವರಿಗೆ, ಈಗ ಮುಸ್ಲಿಮ್ ಕುಟುಂಬವೊಂದರ ಕಥೆ ಹೇಳುವ `ನಫಿಜಾ’ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಚಿತ್ರದ ಕುರಿತು ಮಾತನಾಡಿರುವ ಅನು ಪ್ರಭಾಕರ್, ಖ್ಯಾತ ಲೇಖಕಿಯ ಕಾದಂಬರಿಯ ಕಥಾವಸ್ತುವಿಗೆ ನಟನೆಯ ಮೂಲಕ ನ್ಯಾಯ ಸಲ್ಲಿಸಲು ಸಾಧ್ಯವೇ ಎನ್ನುವ ಅಳುಕು ಆರಂಭದಲ್ಲಿತ್ತು. ಆದರೆ ಇಂತಹ ಪಾತ್ರವೊಂದು ವೃತ್ತಿ ಬದುಕಿನಲ್ಲಿ ಸಿಗುತ್ತಿರುವುದು ಸೌಭಾಗ್ಯ ಹೀಗಾಗಿ ಪಾತ್ರ ಒಪ್ಪಿಕೊಂಡೆ ಎಂದಿದ್ದರು.

ಈ ಚಿತ್ರದಲ್ಲಿ ಪೋಷಕ ನಟರಾಗಿ ಕಾಣಿಸಿಕೊಂಡಿರುವ ಹಿರಿಯ ನಟ ರಮೇಶ್ ಭಟ್ ಮಾತನಾಡಿ, ಸಿನಿಮಾ ಮೂಲಕ ಕಾದಂಬರಿಗೆ ನ್ಯಾಯ ಕೊಡುವುದು ಕಷ್ಟದ ಕೆಲಸ. ಅದನ್ನು ನಿರ್ದೇಶಕಿ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಈ ಚಿತ್ರವು ಕನ್ನಡ ಚಿತ್ರರಂಗಕ್ಕೆ ಅತ್ಯುತ್ತಮ ಕೊಡುಗೆ ಎನಿಸಲಿದೆ ಎಂದಿದ್ದಾರೆ.

ನಟ, ನಿರೂಪಕ ರೆಹಮಾನ್ ಹಾಸನ್, ಈ ಚಿತ್ರದಲ್ಲಿ ಬದ್ರುದ್ದಿನ್ ಪಾತ್ರ ನಿಭಾಯಿಸಿದ್ದಾರೆ. ದೇವೇಂದ್ರ ರೆಡ್ಡಿ ಸಂಭ್ರಮ ಡ್ರೀಮ್ ಹೌಸ್ ಲಾಂಛನದಡಿ ಚಿತ್ರ ನಿರ್ಮಿಸಲಾಗಿದೆ. ನರೇಂದ್ರ ಬಾಬು ಚಿತ್ರಕಥೆ, ಪತ್ರಕರ್ತ ಬಿ.ಎಂ. ಹನೀಫ್ ಸಾಹಿತ್ಯ ಹಾಗೂ ಪರಂ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಒಂಬತ್ತು ಹಾಡುಗಳಿಗೆ ವಿ.ಮನೋಹರ್ ಸಂಗೀತ ಸಂಯೋಜನೆ ಇದೆ.

Click to comment

Leave a Reply

Your email address will not be published. Required fields are marked *