ವಸಂತ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ರಾಜ್ ಭಾರದ್ವಾಜ್ ನಿರ್ಮಿಸಿರುವ, ಅವಿನಾಶ್ ಎನ್ ನಿರ್ದೇಶನದ ಹಾಗೂ ಅನು ಪ್ರಭಾಕರ್ (Anu Prabhakar), ಹರ್ಷಿಕಾ ಪೂಣಚ್ಛ, ವೇಣು ಪ್ರಮುಖಪಾತ್ರದಲ್ಲಿ ನಟಿಸಿರುವ ‘ಹಗ್ಗ’ ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಇತ್ತೀಚಿಗೆ ನೆರವೇರಿತು. ಖ್ಯಾತ ನಿರ್ದೇಶಕ ಆರ್.ಚಂದ್ರು ಟೀಸರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ನಿರ್ಮಾಪಕರಾದ ಕೆ.ಮಂಜು, ದಯಾಳ್ ಅವರು ಸೇರಿದಂತೆ ಅನೇಕ ಗಣ್ಯರು ‘ಹಗ್ಗ’ (Hagga) ಚಿತ್ರದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಟೀಸರ್ ಬಿಡುಗಡೆ ನಂತರ ಮಾತನಾಡಿದ ನಿರ್ದೇಶಕ ಅವಿನಾಶ್, ನಾನು ಮೂಲತಃ ಮ್ಯಕಾನಿಕಲ್ ಎಂಜಿನಿಯರ್. ಸಿನಿಮಾ ನಿರ್ದೇಶನ ನನ್ನ ಕನಸು. ಆ ಕನಸು ‘ಹಗ್ಗ’ ಚಿತ್ರದ ಮೂಲಕ ಈಡೇರಿದೆ. ಈ ಚಿತ್ರದಲ್ಲಿ ಅನು ಪ್ರಭಾಕರ್, ವೇಣು, ಹರ್ಷಿಕಾ ಪೂಣಚ್ಛ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಆದರೆ ‘ಹಗ್ಗ’ನೇ ನಮ್ಮ ಚಿತ್ರದ ನಾಯಕ. ಹಾರರ್ ಜಾನರ್‌ನ ಚಿತ್ರವಾದರೂ, ಚಿತ್ರದಲ್ಲಿ ಒಂದು ಪ್ರಮುಖ ಸಂದೇಶ ಸಹ ಇದೆ ಎಂದರು.
ಚಿತ್ರಕ್ಕೆ ನಾನೇ ಕಥೆ ಬರೆದು ನಿರ್ಮಾಣ ಮಾಡಿದ್ದೇನೆ. ಅವಿನಾಶ್ ನಿರ್ದೇಶನ ಮಾಡಿದ್ದಾರೆ. ಟೀಸರ್ ಬಿಡುಗಡೆ ಬಂದಿರುವ ಎಲ್ಲಾ ಗಣ್ಯರಿಗೂ ಧನ್ಯವಾದ. ಈಗಾಗಲೇ ಮೋಷನ್ ಪೋಸ್ಟರ್ ಮೂಲಕ ‘ಹಗ್ಗ’ ಜನರ ಮನಸ್ಸಿಗೆ ಹತ್ತಿರವಾಗಿದೆ. ಈಗ ಟೀಸರ್ ಬಿಡುಗಡೆಯಾಗಿದೆ.
ಅವಿನಾಶ್ ಅವರು ಚಿತ್ರದ ಕುರಿತು ಹೇಳಿದಾಗ ನನ್ನ ಪಾತ್ರ ಬಹಳ ಇಷ್ಟವಾಯಿತು. ನನ್ನನ್ನು ಸೂಪರ್ ಹೀರೋ ಎಂದು ತೋರಿಸಿದ್ದಾರೆ. ಪಾತ್ರದ ಬಗ್ಗೆ ಹೆಚ್ಚು ಹೇಳುವ ಹಾಗಿಲ್ಲ. ಆದರೆ ಒಳ್ಳೆಯ ಪಾತ್ರ ಕೊಟ್ಟ ನಿರ್ದೇಶಕರಿಗೆ ಹಾಗೂ ನಿರ್ಮಾಪಕರಿಗೆ ಧನ್ಯವಾದ ಎಂದರು ನಟಿ ಅನು ಪ್ರಭಾಕರ್.
ನನ್ನದು ಈ ಚಿತ್ರದಲ್ಲಿ ಪತ್ರಕರ್ತೆಯ ಪಾತ್ರ. ಯಾವುದೋ ಒಂದು ವಿಷಯದ ಅನ್ವೇಷಣೆಗಾಗಿ ಹಳ್ಳಿಗೆ ಹೋಗುತ್ತೇನೆ. ಈ ಚಿತ್ರದಲ್ಲಿ ಜೀಪ್ ಕೂಡ ಡ್ರೈವ್ ಮಾಡಿದ್ದೇನೆ ಎಂದು ಹರ್ಷಿಕಾ ಪೂಣಚ್ಚ (Harshika Poonachcha) ತಿಳಿಸಿದರು. ಇದು ನನ್ನ ಮೊದಲ ಚಿತ್ರ. ನಟನೆಗೆ ತಬಲನಾಣಿ ಅವರು ಬಹಳ ಸಹಾಯ ಮಾಡಿದರು. ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು ನಾಯಕ ವೇಣು. ನಟ ತಬಲ ನಾಣಿ ಸಹ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು.
ನಿರ್ಮಾಪಕ ರಾಜ್ ಭಾರದ್ವಾಜ್ ಅವರೆ ‘ಹಗ್ಗ’ ಚಿತ್ರಕ್ಕೆ ಕಥೆ ಬರೆದಿದ್ದು,ಚಿತ್ರಕಥೆ ರಾಜ್ ಭಾರದ್ವಾಜ್, ಅವಿನಾಶ್ ಹಾಗೂ ಮನೋಹರ್ ಅವರದು. ಮ್ಯಾಥ್ಯೂಸ್ ಮನು ಸಂಗೀತ ನಿರ್ದೇಶನ, ಸಿನಿಟೆಕ್ ಸೂರಿ ಛಾಯಾಗ್ರಹಣ ಹಾಗೂ ಎನ್ ಎಂ ವಿಶ್ವ ಅವರ ಸಂಕಲನವಿರುವ ಈ ಚಿತ್ರಕ್ಕೆ ಮನೋಹರ್ ಎಸ್ ಪಿ ಸಂಭಾಷಣೆ ಬರೆದಿದ್ದಾರೆ.
ಅನು ಪ್ರಭಾಕರ್ ಜೊತೆ ವೇಣು, ಹರ್ಷಿಕಾ ಪೂಣಚ್ಛ, ತಬಲನಾಣಿ, ಅವಿನಾಶ್, ಭವಾನಿ ಪ್ರಕಾಶ್, ಸುಧಾ ಬೆಳವಾಡಿ, ಪ್ರಿಯ ಹೆಗ್ಡೆ, ಮೈಕೋ ಮಂಜು, ಸಂಜು ಬಸಯ್ಯ, ಸದಾನಂದ ಕಾಳಿ ಮುಂತಾದವರು ತಾರಾಬಳಗದಲ್ಲಿದ್ದಾರೆ.