ಬೆಂಗಳೂರು: ವರ್ಷದ ನಂತರ ನಟಿ ಅನು ಪ್ರಭಾಕರ್ ಮತ್ತೆ ಸ್ಯಾಂಡಲ್‍ವುಡ್‍ಗೆ ರೀ ಎಂಟ್ರಿ ಕೊಟ್ಟಿದ್ದು, ಕಾದಂಬರಿ ಆಧರಿತ ಚಿತ್ರದ ಮೂಲಕ ಕಮ್ ಬ್ಯಾಕ್ ಆಗಿದ್ದಾರೆ. ಅನುಪ್ರಭಾಕರ್ ಅಭಿಮಾನಿಗಳಲ್ಲಿ ಇದು ಅತೀವ ಸಂತಸವನ್ನುಂಟುಮಾಡಿದ್ದು, ತಮ್ಮ ನೆಚ್ಚಿನ ನಟಿಯನ್ನು ತೆರೆಯ ಮೇಲೆ ನೋಡುವ ಕಾತರದಿಂದ ಕಾಯುತ್ತಿದ್ದಾರೆ. ಅಷ್ಟೇ ವೇಗದಲ್ಲಿ ಸಿನಿಮಾ ಸಹ ಪೂರ್ಣಗೊಂಡಿದ್ದು, ಆಗಲೇ ಡಬ್ಬಿಂಗ್ ಹಂತದಲ್ಲಿದೆ.
ಆರಂಭದಲ್ಲಿ ತಕ್ಕ ಪಾತ್ರಗಳು ಸಿಗಲಿಲ್ಲ ಎಂದು ಸಿನಿಮಾದಿಂದ ದೂರ ಉಳಿದರೆ, ನಂತರ ಸಂಸಾರ, ಮಕ್ಕಳ ಜವಾಬ್ದಾರಿಯ ಕಾರಣ ನಟನೆಗೆ ಕೆಲವು ವರ್ಷಗಳ ಬಿಡುವು ನೀಡಿದ್ದರು. ಇದೀಗ ಮತ್ತೆ ಪೂರ್ಣ ಪ್ರಮಾಣದಲ್ಲಿ ಅನುಪ್ರಭಾಕರ್ ನಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಲೇಖಕಿ ಸಾರಾ ಅಬೂಬಕರ್ ಅವರ ‘ವಜ್ರಗಳು’ ಕಾದಂಬರಿ ಆಧಾರಿತ ಚಿತ್ರ ಇದಾಗಿದ್ದು, ಸಿನಿಮಾಗೆ ‘ಸಾರಾವಜ್ರ’ ಎಂದು ಹೆಸರಿಡಲಾಗಿದೆ. ನಿರ್ದೇಶಕಿ ಆರ್ನಾ ಸಾಧ್ಯ (ಶ್ವೇತಾ ಶೆಟ್ಟಿ) ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಾರಾವಜ್ರ ಮೂಲಕ ಅನುಪ್ರಭಾಕರ್ ನಟನೆಗೆ ಮರಳಿದ್ದಾರೆ. ಕಳೆದ ವರ್ಷ ‘ಅನುಕ್ತಾ’ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ ಅವರ ಕೊನೆಯ ಸಿನಿಮಾ. ಆದರೆ ವಜ್ರಗಳು ಕಾದಂಬರಿಯ ಜೀವಾಳ `ನಫಿಜಾ’ ಪಾತ್ರ. ಅದೇ ಪಾತ್ರದಲ್ಲಿ ಅನು ಮಿನುಗಿದ್ದಾರೆ ಎನ್ನಲಾಗಿದೆ.
ಚಿತ್ರ ಡಬ್ಬಿಂಗ್ ಹಂತದಲ್ಲಿದ್ದು, ಸದ್ಯದಲ್ಲೇ ಚಿತ್ರದ ಒಂಬತ್ತು ಹಾಡುಗಳು ಬಿಡುಗಡೆಯಾಗುವ ನಿರೀಕ್ಷೆ ಇದೆ. ಬಾಲನಟಿಯಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ ಅನು ಪ್ರಭಾಕರ್ ಎರಡು ದಶಕಗಳಲ್ಲಿ ಸುಮಾರು 80 ಚಿತ್ರಗಳಲ್ಲಿ ನಟಿಸಿದ್ದಾರೆ. ನಟ ರಘು ಮುಖರ್ಜಿಯವರನ್ನು ಕೈಹಿಡಿದಿರುವ ಅವರಿಗೆ ಒಂದೂವರೆ ವರ್ಷದ ಮಗಳಿದ್ದಾಳೆ. ತಾಯ್ತನದ ಖುಷಿಯಲ್ಲಿರುವ ಅವರಿಗೆ, ಈಗ ಮುಸ್ಲಿಮ್ ಕುಟುಂಬವೊಂದರ ಕಥೆ ಹೇಳುವ ‘ನಫಿಜಾ’ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರದ ಕುರಿತು ಮಾತನಾಡಿರುವ ಅನು ಪ್ರಭಾಕರ್, ಖ್ಯಾತ ಲೇಖಕಿಯ ಕಾದಂಬರಿಯ ಕಥಾವಸ್ತುವಿಗೆ ನಟನೆಯ ಮೂಲಕ ನ್ಯಾಯ ಸಲ್ಲಿಸಲು ಸಾಧ್ಯವೇ ಎನ್ನುವ ಅಳುಕು ಆರಂಭದಲ್ಲಿತ್ತು. ಆದರೆ ಇಂತಹ ಪಾತ್ರವೊಂದು ವೃತ್ತಿ ಬದುಕಿನಲ್ಲಿ ಸಿಗುತ್ತಿರುವುದು ಸೌಭಾಗ್ಯ ಹೀಗಾಗಿ ಪಾತ್ರ ಒಪ್ಪಿಕೊಂಡೆ ಎಂದರು.
ಈ ಚಿತ್ರದಲ್ಲಿ ಪೋಷಕ ನಟರಾಗಿ ಕಾಣಿಸಿಕೊಂಡಿರುವ ಹಿರಿಯ ನಟ ರಮೇಶ್ ಭಟ್ ಮಾತನಾಡಿ, ಸಿನಿಮಾ ಮೂಲಕ ಕಾದಂಬರಿಗೆ ನ್ಯಾಯ ಕೊಡುವುದು ಕಷ್ಟದ ಕೆಲಸ. ಅದನ್ನು ನಿರ್ದೇಶಕಿ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಈ ಚಿತ್ರವು ಕನ್ನಡ ಚಿತ್ರರಂಗಕ್ಕೆ ಅತ್ಯುತ್ತಮ ಕೊಡುಗೆ ಎನಿಸಲಿದೆ ಎಂದಿದ್ದಾರೆ.
ನಟ, ನಿರೂಪಕ ರೆಹಮಾನ್ ಹಾಸನ್, ಈ ಚಿತ್ರದಲ್ಲಿ ಬದ್ರುದ್ದಿನ್ ಪಾತ್ರ ನಿಭಾಯಿಸಿದ್ದಾರೆ. ದೇವೇಂದ್ರ ರೆಡ್ಡಿ ಸಂಭ್ರಮ ಡ್ರೀಮ್ ಹೌಸ್ ಲಾಂಛನದಡಿ ಚಿತ್ರ ನಿರ್ಮಿಸಲಾಗಿದೆ. ನರೇಂದ್ರ ಬಾಬು ಚಿತ್ರಕಥೆ, ಪತ್ರಕರ್ತ ಬಿ.ಎಂ. ಹನೀಫ್ ಸಾಹಿತ್ಯ ಹಾಗೂ ಪರಂ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಒಂಬತ್ತು ಹಾಡುಗಳಿಗೆ ವಿ.ಮನೋಹರ್ ಸಂಗೀತ ಸಂಯೋಜನೆ ಇದೆ.