ಬಹು ನಿರೀಕ್ಷಿತ ಹಾಸ್ಯ ಚಿತ್ರ ಪೌಡರ್ (Powder) ತನ್ನ ಎರಡನೇ ಗೀತೆಯಾದ `ಪರಪಂಚ ಘಮ ಘಮ’ ಅನ್ನು ಬಿಡುಗಡೆ ಮಾಡುವ ಮೂಲಕ ಎಲ್ಲರ ಮನೆ ಮಾತಾಗಿದೆ. ಮೊದಲನೇ ಗೀತೆಯಾದ ಮಿಷನ್ ಘಮ ಘಮ ತನ್ನ ವಿಭಿನ್ನ ಟ್ಯೂನ್ ಮೂಲಕ ಎಲ್ಲರ ಗಮನ ಸೆಳೆದಿತ್ತು. ಇದೀಗ ಪರಪಂಚ ಘಮ ಘಮ ಅದೇ ರೀತಿಯ ಛಾಪನ್ನು ಮೂಡಿಸಲು ಸಜ್ಜಾಗಿದೆ.
ಖ್ಯಾತ ಜನಪದ ಗಾಯಕ, ಬ್ಲಾಕ್ ಬಸ್ಟರ್ ಗೀತೆಗಳಾದ ಟಗರು ಬಂತು ಟಗರು, ಸೂರಿ ಅಣ್ಣಾ ಖ್ಯಾತಿಯ ಆಂಟೋನಿ ದಾಸನ್ (Antony Dasan) ಈ ಹಾಡಿಗೆ ದನಿಯಾಗಿರುವುದು ವಿಶೇಷ ಸಂಗತಿ. ಮಾಸ್ ಗೀತೆಗಳಿಗೆ ಹೆಸರುವಾಸಿಯಾದ ಆಂಟೋನಿ ಮೊದಲ ಬಾರಿಗೆ ಪೌಡರ್ ಚಿತ್ರದ ಈ ಲಯ ಪ್ರಧಾನ ಗೀತೆಗೆ ದನಿಯಾಗಿರುವುದು ಸಿನಿ ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿದೆ.
ಪೌಡರ್ ಒಂದು ಹಾಸ್ಯಭರಿತ ಚಿತ್ರವಾಗಿದೆ.ಇಬ್ಬರು ಯುವಕರು ಒಂದು ನಿಗೂಢವಾದ ಪೌಡರ್ ಪ್ರಭಾವದಿಂದಾಗಿ ಧಿಡೀರನೇ ಸಿರಿವಂತರಾಗಲು ಮಾಡುವ ಪ್ರಯತ್ನಗಳು, ಅವರಿಗೆ ಎದುರಾಗುವ ಸಮಸ್ಯೆಗಳು ಇವೆಲ್ಲವನ್ನೂ ಎಳೆಯಾಗಿ ಬಿಚ್ಚಿಡುವ ಕಥೆಯೇ ಪೌಡರ್. ಆ ಯುವಕರು ಎಲ್ಲಾ ಸಮಸ್ಯೆಗಳನ್ನು ಮೀರಿ ನಿಲ್ಲುವರೇ? ಅವರ ಎಲ್ಲಾ ಕನಸುಗಳು ನನಸಾಹುವುದೇ? ಪೌಡರ್ ಹಿಂದಿನ ಪವರ್ ಅವರಿಗೆ ತಿಳಿಯುವುದೇ? ಇದುವೇ ಕಥೆಯ ಸಾರಾಂಶ.
ಜನಾರ್ದನ್ ಚಿಕ್ಕಣ್ಣ ನಿರ್ದೇಶನದ ಪೌಡರ್ ಚಿತ್ರದಲ್ಲಿ ದಿಗಂತ್ ಮಂಚಾಲೆ, ಧನ್ಯ ರಾಮ್ ಕುಮಾರ್, ಅನಿರುದ್ಧ್ ಆಚಾರ್ಯ, ಶರ್ಮಿಳಾ ಮಾಂಡ್ರೆ, ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ನಟಿಸಿರುತ್ತಾರೆ. ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡಿದ್ದು, ಕಾರ್ತಿಕ್ ಗೌಡ, ಯೋಗಿ ಜಿ ರಾಜ್ ಮತ್ತು ವಿಜಯ್ ಸುಬ್ರಹ್ಮಣ್ಯಂ ಕೆ.ಆರ್.ಜಿ.ಸ್ಟೂಡಿಯೋಸ್ ಬ್ಯಾನರ್ ಅಡಿಯಲ್ಲಿ ಹಾಗೂ ಅರುನಭ್ ಕುಮಾರ್ ಟಿ.ವಿ.ಎಫ್.ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿರುತ್ತಾರೆ.