ಯಾದಗಿರಿ: ಬಾಲಕಿ ಜೊತೆ ಅನುಚಿತವಾಗಿ ವರ್ತಿಸಿದ ಆರೋಪದಡಿ ದಾಖಲಾಗಿದ್ದ ಪೋಕ್ಸೋ ಪ್ರಕರಣದಲ್ಲಿ (POCSO Case) ಮಲ್ಲಿಕಾರ್ಜುನ ಮುತ್ಯಾಗೆ (Mallikarjun Mutya) ಮತ್ತೆ ಸಂಕಷ್ಟ ಎದುರಾಗಿದೆ. ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯ ವಜಾಗೊಳಿಸಿದೆ.
ಮಲ್ಲಿಕಾರ್ಜುನ ಮುತ್ಯಾ ನಿರೀಕ್ಷಣಾ ಜಾಮೀನಿಗಾಗಿ ಕೋರ್ಟ್ ಮೊರೆ ಹೋಗಿದ್ದರು. ಈ ಸಂಬಂಧ ಇಂದು (ಮಾ.9) ವಿಚಾರಣೆ ನಡೆಸಿದ ಯಾದಗಿರಿ ಜಿಲ್ಲಾ ಪ್ರಧಾನ ಸತ್ರ ನ್ಯಾಯಲಯ ಅರ್ಜಿಯನ್ನು ವಜಾಗೊಳಿಸಿದೆ. ಅರ್ಜಿ ವಜಾ ಬೆನ್ನಲ್ಲೇ ಇದೀಗ ಮುತ್ಯಾ ಭಕ್ತರು ಕಲಬುರಗಿ ಹೈಕೋರ್ಟ್ ಪೀಠದಲ್ಲಿ ಜಾಮೀನು ಪಡೆಯಲು ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಇದನ್ನೂ ಓದಿ: ಬಾಲಕಿ ಜೊತೆ ಅನುಚಿತ ವರ್ತನೆ – ಪ್ರಕರಣ ರದ್ದು ಕೋರಿ ಕೋರ್ಟ್ ಮೆಟ್ಟಿಲೇರಿದ ಮಲ್ಲಿಕಾರ್ಜುನ ಮುತ್ಯಾ
ಬಾಲಕಿಯ ಜೊತೆ ಮಲ್ಲಿಕಾರ್ಜುನ ಮುತ್ಯಾ ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದರ ಬೆನ್ನಲ್ಲೇ ಮುತ್ಯಾನ ವಿರುದ್ಧ ಕ್ರಮ ಜರುಗಿಸಲು ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ದೂರು ದಾಖಲಿಸಿಕೊಂಡಿತ್ತು. ಯಾದಗಿರಿ ಎಸ್ಪಿ ಅವರಿಗೆ ಪತ್ರವನ್ನೂ ಬರೆದಿದ್ದರು. ಅದರಂತೆ ಗೋಗಿ ಪೊಲೀಸ್ ಠಾಣೆಯಲ್ಲಿ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿತ್ತು. ಈಗಾಗಲೇ ಪೊಲೀಸ್ ಠಾಣೆಗೆ ಹಾಜರಾಗಿ ಮಲ್ಲಿಕಾರ್ಜುನ ಮುತ್ಯಾ ತನಿಖೆಗೆ ಸಹಕರಿಸಿದ್ದಾರೆ.

