LatestMain PostNational

ಮುಂಬೈನಲ್ಲಿ ಭಯೋತ್ಪಾದನಾ ನಿಗ್ರಹ ದಳ ಸ್ಥಾಪಿಸಿದ ಮಾಜಿ ಐಪಿಎಸ್ ಅಧಿಕಾರಿ ಇನ್ನಿಲ್ಲ

ಮುಂಬೈ: ನಗರದಲ್ಲಿ ಪೊಲೀಸ್ ಭಯೋತ್ಪಾದನಾ ನಿಗ್ರಹ ದಳವನ್ನು ಸ್ಥಾಪಿಸಿದ್ದ ನಿವೃತ್ತ ಐಪಿಎಸ್ ಅಧಿಕಾರಿ ಅಫ್ತಾಬ್ ಅಹ್ಮದ್ ಖಾನ್ ಶುಕ್ರವಾರ ನಿಧನರಾಗಿದ್ದಾರೆ.

ಮೂರು ದಶಕಗಳ ಹಿಂದೆ ಮುಂಬೈ ಪೊಲೀಸ್ ಇಲಾಖೆಯಲ್ಲಿ ಭಯೋತ್ಪಾದನಾ ನಿಗ್ರಹ ದಳವನ್ನು ಸ್ಥಾಪಿಸಿದ ಕೀರ್ತಿ ಹೊಂದಿರುವ ಅಫ್ತಾಬ್ ಅಹ್ಮದ್ ಖಾನ್ ತಮ್ಮ 81ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.

ಅಫ್ತಾಬ್ ಒಬ್ಬ ಹೆಸರಾಂತ ಪೊಲೀಸ್ ಅಧಿಕಾರಿಯಾಗಿದ್ದು, ತಮ್ಮ ಅಧಿಕಾರ ಅವಧಿಯಲ್ಲಿ ಮುಂಬೈನ ದರೋಡೆಕೋರರು ಹಾಗೂ ಭಯೋತ್ಪಾದಕರ ವಿರುದ್ಧ ಹಲವಾರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಅಫ್ತಾಬ್ ತಮ್ಮ ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಇದನ್ನೂ ಓದಿ: ವಿಮಾನ ಪ್ರಯಾಣಿಕರು ಇನ್ಮುಂದೆ ಒಬ್ಬರು ಒಂದೇ ಹ್ಯಾಂಡ್ ಬ್ಯಾಗ್ ಒಯ್ಯಬೇಕು!

ಕೆಲವು ದಿನಗಳ ಹಿಂದೆ ಖಾನ್‌ರಿಗೆ ಕೋವಿಡ್ ಸೋಂಕು ತಗುಲಿತ್ತು. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅವರು ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯೂ ಹೊಂದಿದ್ದರು. ಶುಕ್ರವಾರ ಅವರಿಗೆ ಮತ್ತೆ ಅನಾರೋಗ್ಯ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

1963ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದ ಖಾನ್, 1995ರಲ್ಲಿ ಮಹಾರಾಷ್ಟ್ರದ ಪೊಲೀಸ್ ಇನ್‌ಸ್ಪೆಕ್ಟರ್ ಜನರಲ್ ಹುದ್ದೆಗೆ ರಾಜೀನಾಮೆ ನೀಡಿದ್ದರು. 1990ರಲ್ಲಿ ಖಾನ್ ಮುಂಬೈನಲ್ಲಿ ಭಯೋತ್ಪಾದನಾ ನಿಗ್ರಹ ಸಂಸ್ಥೆಯನ್ನು ಸ್ಥಾಪಿಸಿದ್ದು, ಅದು ದೇಶದಲ್ಲೇ ಸ್ಥಾಪಿತವಾದ ಮೊದಲ ಭಯೋತ್ಪಾದನಾ ನಿಗ್ರಹ ಸಂಘಟನೆಯಾಗಿತ್ತು ಎಂದು ಹೇಳಲಾಗಿದೆ. ಇದನ್ನೂ ಓದಿ: ಐಎಸ್‌ಐ ಮಾರ್ಕ್ ಇಲ್ಲದ 70 ಲಕ್ಷ ಮೌಲ್ಯದ ಚೀನಾ ಆಟಿಕೆ ವಶ

Leave a Reply

Your email address will not be published.

Back to top button