ಬೆಂಗಳೂರು: ಸಿಎಎ ಕಾಯ್ದೆಯ ವಿರುದ್ಧ ರಾಜ್ಯದ ಉದ್ದಗಲಕ್ಕೂ ಓಡಾಡಿ ಮಾತನಾಡಿದ್ದ ಕಾಂಗ್ರೆಸ್ ನಾಯಕರಿಗೆ ಈಗ ಪಜೀತಿ ಎದುರಾಗಿದೆ. ಎಲ್ಲಾ ಸಭೆಗಳಲ್ಲಿ ಸೆಕ್ಷನ್ ಬೈ ಸೆಕ್ಷನ್ ಹೇಳಿ ಮಾತನಾಡುತ್ತಿದ್ದ ನಾಯಕರುಗಳಿಗೆ ಈಗ ಪಾಕಿಸ್ತಾನ ಭೀತಿ ಎದುರಾಗಿದೆ. ಆ ಒಂದೇ ಕಾರಣಕ್ಕೆ ಸಾಕಪ್ಪ ಸಾಕು ಆ ಸಭೆ ಸಮಾವೇಶದ ಸಹವಾಸ ಅಂತ ಮಾಜಿ ಸಿಎಂ ಸಹ ಸೈಲೆಂಟಾಗಲು ಮುಂದಾಗಿದ್ದಾರೆ.
ಸಿಎಎ ಹಾಗೂ ಎನ್ ಆರ್ ಸ ವಿರೋಧಿಸಿ ನಡೆದ ಸಮಾವೇಶಗಳಲ್ಲಿ ಭಾಗವಹಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ನಡೆಯನ್ನು ಹಿಗ್ಗಾ ಮುಗ್ಗಾ ಟೀಕಿಸಿದ್ದರು. ಇದೆ ಫೆಬ್ರವರಿ 24 ರಂದು ವಿಜಯಪುರದಲ್ಲಿ ಸಿಎಎ ವಿರುದ್ಧ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ವಿಜಯಪುರದ ಜಾಯಿಂಟ್ ಆಕ್ಷನ್ ಕಮಿಟಿಯ ಸಂವಿಧಾನ ಉಳಿಸಿ ಅಭಿಯಾನದ ಭಾಗವಾಗಿ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಆಪ್ತ ಎಂ.ಬಿ.ಪಾಟೀಲ್ ಸಿದ್ದರಾಮಯ್ಯರನ್ನು ಫೆ.24ರ ಸಮಾವೇಶಕ್ಕೆ ಆಹ್ವಾನಿಸಿದ್ದಾರೆ. ಆದರೆ ಸಮಾವೇಶದಲ್ಲಿ ಭಾಗವಹಿಸಬೇಕಿದ್ದ ಸಿದ್ದರಾಮಯ್ಯ ಈಗ ಯು ಟರ್ನ್ ತಗೆದುಕೊಂಡಿದ್ದಾರೆ. ಅಂತಹ ಸಮಾವೇಶಗಳಲ್ಲಿ ಪಾಕಿಸ್ತಾನ ಜಿಂದಾಬಾದ್, ಅನ್ನೋ ದೇಶದ್ರೋಹಿ ಘೋಷಣೆ ಕೂಗಿ ಅಭಾಸ ಆಗಬಾರದು ಅನ್ನೋದು ಸಿದ್ದರಾಮಯ್ಯ ಆತಂಕ. ಆದ್ದರಿಂದ ವಿಜಯಪುರ ಸಮಾವೇಶಕ್ಕೆ ಹೋಗದಿರಲು ತೀರ್ಮಾನಿಸಿದ್ದಾರೆ. ಕಾರ್ಯಕ್ರಮದ ಆಯೋಜಕರು ಸಿದ್ದರಾಮಯ್ಯ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಆದರೆ ಕಳೆದ ಎರಡು ಮೂರು ದಿನಗಳ ಸಿಎಎ ಪ್ರತಿಭಟನೆಯ ಅಹ್ವಾನ ಕಂಡು ಮಾಜಿ ಸಿಎಂ ಆತಂಕಕ್ಕೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದೆ.
ದೇಶದ್ರೋಹಿಗಳ ಹುಚ್ಚು ಘೋಷಣೆಯ ಭೀತಿಗೆ ಸಿಎಎ ವಿರುದ್ಧ ಸಮಾವೇಶಕ್ಕೆ ಹೋಗೋದೆ ಬೇಡ ಅನ್ನೋ ತೀರ್ಮಾನಕ್ಕೆ ಸಿದ್ದರಾಮಯ್ಯ ಬಂದಿದ್ದಾರೆ. ಇದು ಕೇವಲ ಸಿದ್ದರಾಮಯ್ಯ ಒಬ್ಬರ ಕಥೆಯಲ್ಲ ಬಹುತೇಕ ಕಾಂಗ್ರೆಸ್ ನಾಯಕರುಗಳದ್ದು ಇದೇ ಸ್ಥಿತಿಯಾಗಿದೆ. ಒಟ್ಟಾರೆ ಇದುವರೆಗೆ ಯಾರಿಗೂ ಹೆದರದೇ ಎದುರೇಟು ನೀಡುತ್ತಿದ್ದ ಸಿದ್ದರಾಮಯ್ಯ ಈಗ ದೇಶದ್ರೋಹಿಗಳ ಹುಚ್ಚಾಟಕ್ಕೆ ಹೆದರಿ ಸಿಎಎ ಸಮಾವೇಶದಿಂದಲೇ ಅಂತರ ಕಾಯ್ದುಕೊಳ್ಳಲು ಮುಂದಾಗಿದ್ದಾರೆ. ಜೊತೆಗೆ ಇತರೆ ಕೈ ನಾಯಕರುಗಳು ಇದೆ ಆತಂಕದಲ್ಲಿದ್ದಾರೆ.