ಭೋಪಾಲ್: ಶಾಲೆಯಲ್ಲಿ ಶಿಕ್ಷಕರು ಹಾಜರಿ ಕೂಗಿದಾಗ ಮಕ್ಕಳು “ಎಸ್ ಸರ್, ಎಸ್ ಮೇಡಂ” ಎನ್ನುವಂತಿಲ್ಲ. ಅದರ ಬದಲಿಗೆ `ಜೈ ಹಿಂದ್’ ಎಂದು ಹೇಳಬೇಕು ಎನ್ನುವ ಆದೇಶವನ್ನು ಮಧ್ಯಪ್ರದೇಶ ಸರ್ಕಾರ ಹೊರಡಿಸಿದೆ.
2017ರ ಅಕ್ಟೋಬರ್ ತಿಂಗಳಿನಲ್ಲಿ ಸತ್ನಾ ಜಿಲ್ಲೆಯಲ್ಲಿರುವ ಶಾಲೆಗಳಲ್ಲಿ ಸರ್ಕಾರದ ಈ ಆದೇಶವನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿತ್ತು. ಈಗ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಿಗೆ ಅನ್ವಯವಾಗುವಂತೆ ಶಿಕ್ಷಣ ಇಲಾಖೆ ಆದೇಶವನ್ನು ಜಾರಿಗೊಳಿಸಿದೆ.
Advertisement
ಮಕ್ಕಳಲ್ಲಿ ದೇಶಭಕ್ತಿ ಮೂಡಿಸಲು ಹಾಗೂ ಬೆಳೆಸಲು ಈ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ ಎಂದು ರಾಜ್ಯ ಶಿಕ್ಷಣ ಮಂಡಳಿ ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ. ಸದ್ಯ 1.22 ಲಕ್ಷ ಸರ್ಕಾರಿ ಶಾಲೆಗಳು ಈ ಆದೇಶವನ್ನು ಪಾಲಿಸುತ್ತಿದ್ದು, ನಂತರ ಹಂತದಲ್ಲಿ ಖಾಸಗಿ ಶಾಲೆಗಳು ಅಳವಡಿಸಿಕೊಳ್ಳಲು ಸಲಹೆ ನೀಡುವುದಾಗಿ ಪ್ರಾಥಮಿಕ ಶಾಲಾ ಶಿಕ್ಷಣ ಸಚಿವ ವಿಜಯ್ ಶಾ ಹೇಳಿದ್ದಾರೆ.
Advertisement
ಮಕ್ಕಳು ದೇಶದ ಭವಿಷ್ಯ. ಅವರಲ್ಲಿ ದೇಶದ ಮೇಲೆ ಪ್ರೀತಿ ಗೌರವ ಹಾಗೂ ಭಕ್ತಿಯನ್ನು ಬೆಳಸಬೇಕು. ಆದ್ದರಿಂದ ಜೈ ಹಿಂದ್ ಹೇಳಬೇಕು ಎಂದು ತಮ್ಮ ನಿರ್ಧಾರವನ್ನು ಈ ಹಿಂದೆ ವಿಜಯ್ ಶಾ ಸಮರ್ಥಿಸಿಕೊಂಡಿದ್ದರು.
Advertisement
ಕೆಲವು ಸರ್ಕಾರಿ ಶಾಲೆಗಳಲ್ಲಿ ಶಿಕ್ಷರ ಕೊರತೆಯಿದ್ದು, ನೇಮಕಾತಿಗೆ ಸರ್ಕಾರ ಮುಂದಾಗಬೇಕು. ಶಿಕ್ಷಣ ಗುಣಮಟ್ಟಕ್ಕೆ ಗಮನ ನೀಡಬೇಕೇ ಹೊರತು, ಮಕ್ಕಳಲ್ಲಿ ಬಲವಂತವಾಗಿ ದೇಶಭಕ್ತಿ ಮೂಡಿಸಲು ಮುಂದಾಗಿರುವ ಈ ಕ್ರಮ ಸೂಕ್ತವಲ್ಲ. ಅಲ್ಲದೇ, ಇದನ್ನ ಕಡ್ಡಾಯಗೊಳಿಸಿರುವುದು ಎಷ್ಟು ಸರಿ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಕೆ.ಕೆ.ಮಿಶ್ರಾ ಅವರು ಪ್ರಶ್ನಿಸಿದ್ದಾರೆ.
Advertisement
ಬಿಜೆಪಿ ವಕ್ತಾರ ರಾಹುಲ್ ಕೊಠಾರಿ ಅವರು ಪ್ರತಿಕ್ರಿಯಿಸಿ, ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಮೂಡಿಸಲು ಉತ್ತಮ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ. ಈ ನಿರ್ಧಾರವನ್ನು ಧನಾತ್ಮಕವಾಗಿ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.
ಮಧ್ಯಪ್ರದೇಶ ಸರ್ಕಾರವು ಈಗಾಗಲೇ ಶಾಲೆಗಳಲ್ಲಿ ಪ್ರತಿದಿನ ತ್ರಿವರ್ಣ ಧ್ವಜ ಮತ್ತು ರಾಷ್ಟ್ರಗೀತೆಯನ್ನು ಹಾಡುವುದನ್ನು ಕಡ್ಡಾಯ ಮಾಡಿದೆ.