ಕೊಪ್ಪಳ: ಜೀವ ಭಯದಿಂದ ವ್ಯಕ್ತಿಯೊಬ್ಬ ನಾಪತ್ತೆಯಾದ ಘಟನೆ ಕೊಪ್ಪಳದಲ್ಲಿ ಬೆಳಕಿಗೆ ಬಂದಿದೆ.
ಕೊಪ್ಪಳ ತಾಲೂಕಿನ ಬೂದಗುಂಪಾ ನಿವಾಸಿ ಮುದಿಯಪ್ಪ ಡಂಬಾಳ ಎಂಬ ಯುವಕ ಕಳೆದ ಮೂರು ದಿನದಿಂದ ಕಾಣೆಯಾಗಿದ್ದು, ಮುದಿಯಪ್ಪ ಕುಟುಂಬ ಭಯದಲ್ಲಿ ಜೀವನ ನಡೆಸುತ್ತಿದ್ದಾರೆ. ಮುದಿಯಪ್ಪ ಕುಟುಂಬ ಭಯಪಡಲು ಮುಖ್ಯ ಕಾರಣ ಅದೇ ಗ್ರಾಮದ ಪ್ರಭಾವಿ ಮುಖಂಡ ಮತ್ತು ಗಂಗಾವತಿ ಕ್ಷೇತ್ರದ ಶಾಸಕ ಇಕ್ಬಾಲ್ ಅನ್ಸಾರಿ ಬಂಟ ಫಕೀರಪ್ಪ ಎಮ್ಮಿ ಎನ್ನಲಾಗಿದೆ. ಈತ ಮುದಿಯಪ್ಪನನ್ನು ಕೊಲ್ಲಲು ಸುಪಾರಿ ನೀಡಿದ್ದು ಬೆಳಕಿಗೆ ಬಂದಿದೆ.
ಸುಪಾರಿ ತೆಗೆದುಕೊಂಡ ವ್ಯಕ್ತಿ ಬಾಯಿಬಿಟ್ಟ ವಿಡಿಯೋ ಕೂಡ ಲಭ್ಯವಾಗಿದ್ದು, ನನ್ನ ಗಂಡನಿಗೆ ಜೀವ ಭಯವಿದೆ. ಇದರಿಂದ ಕಳೆದ ಮೂರು ದಿನಗಳಿಂದ ನನ್ನ ಪತಿ ಕಾಣೆಯಾಗಿದ್ದಾರೆ ಎಂದು ಮುದಿಯಪ್ಪ ಪತ್ನಿ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಮುದಿಯಪ್ಪ ಡಂಬಾಳ ಮತ್ತು ಫಕೀರಪ್ಪ ಎಮ್ಮಿ ಇಬ್ಬರೂ ಒಂದೇ ಗ್ರಾಮದವರಾಗಿದ್ದು, ಫಕೀರಪ್ಪ ಅನ್ಸಾರಿ ಬೆಂಬಲಿಗನಾಗಿದ್ದಾನೆ. ಮುದಿಯಪ್ಪ ಕರವೇ ಕಾರ್ಯಕರ್ತನಾಗಿದ್ದಾನೆ.
ಗ್ರಾಮದಲ್ಲಾಗುತ್ತಿರುವ ಅಕ್ರಮದ ಬಗ್ಗೆ ಮುದಿಯಪ್ಪ ಪ್ರಶ್ನೆ ಮಾಡುತ್ತಿದ್ದ. ಇದರಿಂದ ಬೇಸತ್ತ ಫಕೀರಪ್ಪ ಈತ ನಮಗೆ ಮುಳುವಾಗುತ್ತಾನೆ ಎಂದು ಅದೇ ಗ್ರಾಮದ ಯುವಕನಿಗೆ ಮುದಿಯಪ್ಪನನ್ನು ಹೊಡೀಬೇಕು, ಕೊಲೆ ಮಾಡಿ ಎಂದು 50 ಸಾವಿರ ರೂ. ನೀಡಿ ಸುಪಾರಿ ನೀಡಿದ್ದಾನೆ.
ಇದಕ್ಕೆ ಸಾಕ್ಷಿ ಎಂಬಂತೆ ಸುಪಾರಿ ತೆಗೆದುಕೊಂಡ ವ್ಯಕ್ತಿಯೇ ಈ ಬಗ್ಗೆ ಬಾಯಿ ಬಿಟ್ಟಿದ್ದಾನೆ. ಇದರಿಂದ ಮುದಿಯಪ್ಪ ಕುಟುಂಬ ಜೀವ ಭಯದಲ್ಲಿದ್ದಾರೆ. ನನ್ನ ಪತಿಗೆ ಏನಾಗಿದೆ ಎಂದು ಭಯ ಪಡುವಂತಾಗಿದೆ. ನಮಗೆ ರಕ್ಷಣೆ ಬೇಕು ಎಂದು ಮುದಿಯಪ್ಪ ಪತ್ನಿ ಬೇಡಿಕೊಳ್ಳುತ್ತಿದ್ದಾರೆ.