ನವದೆಹಲಿ: ಕಪ್ಪು ಹಣವನ್ನು ಬಿಳಿ ಮಾಡಿಕೊಳ್ಳುವವರ ವಿರುದ್ಧ ಪ್ರಧಾನಿ ಮೋದಿ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ಬ್ಯಾಂಕ್ ನಗದು ವಹಿವಾಟು ನಡೆಸುವ ವೇಳೆ ಅಸಲಿ ದಾಖಲೆಗಳನ್ನು ತೋರಿಸುವುದು ಕಡ್ಡಾಯ ಎಂಬ ನಿಯಮವನ್ನು ಅಕ್ರಮ ನಗದು ಚಲಾವಣೆ ತಡೆ ಕಾಯ್ದೆ ನಿಯಮ 9ರ (ಪಿಎಂಎಲ್‍ಎ) ಅಡಿಯಲ್ಲಿ ಜಾರಿಗೆ ತರಲಾಗಿದೆ.
ಬ್ಯಾಂಕ್ ವ್ಯವಹಾರದ ವೇಳೆ 50 ಸಾವಿರ ರೂ.ಗಿಂತ ಹೆಚ್ಚಿನ ವಹಿವಾಟು ನಡೆಸುವವರು ಇನ್ನು ಕಡ್ಡಾಯವಾಗಿ ಅಸಲಿ ದಾಖಲೆಗಳನ್ನು ತೋರಿಸಬೇಕಾಗಿದ್ದು, ಬ್ಯಾಂಕ್ ಸಿಬ್ಬಂದಿ ದಾಖಲೆಗಳಲ್ಲಿನ ಮಾಹಿತಿಯನ್ನು ನಮೂದಿಸಿಕೊಳ್ಳಬೇಕಿದೆ. ಅಲ್ಲದೇ ಈ ಅಗತ್ಯ ಬಿದ್ದಲ್ಲಿ ಈ ಮಾಹಿತಿಯನ್ನು ಭಾರತದ ಆರ್ಥಿಕ ಗುಪ್ತಚರ ಘಟಕ(ಎಫ್‍ಐಯು-ಐಎನ್‍ಡಿ) ಕ್ಕೆ ಸಲ್ಲಿಸಬೇಕು ಎಂಬ ನಿಯಮವನ್ನು ಹಣಕಾಸು ಸಚಿವಾಲಯ ಜಾರಿಗೆ ತಂದಿದೆ.
ಕೇವಲ ಬ್ಯಾಂಕ್ ಮಾತ್ರವಲ್ಲದೇ ಹಣಕಾಸು ವ್ಯವಹಾರ ನಡೆಸುವ ಎಲ್ಲಾ ಸಂಸ್ಥೆಗಳು ಈ ನಿಯಮವನ್ನು ಪಾಲಿಸಬೇಕಾಗಿದ್ದು, ನಗದು ವರ್ಗಾವಣೆ ಮಾಡುವವರು ಹಣವನ್ನು ಯಾರು, ಯಾರಿಗೆ, ಯಾತಕ್ಕಾಗಿ, ಎಷ್ಟು ಎಂಬ ಮಾಹಿತಿಯನ್ನು ದಾಖಲಿಸಿಕೊಳ್ಳಬೇಕಿದೆ.
ಈ ಹಿಂದೆ ಬ್ಯಾಂಕ್ ಅಕೌಂಟ್‍ಗೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಲಿಂಕ್ ಮಾಡಬೇಕು ಎಂಬ ನಿಯಮವನ್ನು ಜಾರಿಗೆ ತಂದಿತ್ತು. ಅಲ್ಲದೇ 50 ರೂ. ಸಾವಿರಕ್ಕಿಂತ ಹೆಚ್ಚಿನ ಹಣವನ್ನು ವರ್ಗಾವಣೆ ಮಾಡಬೇಕಾದರೆ ಪಾನ್(ಪಾರ್ಮನೆಂಟ್ ಅಕೌಂಟ್ ನಂಬರ್) ನಂಬರ್ ಕಡ್ಡಾಯವಾಗಿ ನಮೂದಿಸಬೇಕು ಎಂದು ಹೇಳಿತ್ತು.
ಇದೀಗ ಆಧಾರ್, ಪಾನ್ ನಂಬರ್‍ನ ಮೂಲ ದಾಖಲಾತಿಗಳಲ್ಲಿ ವಿಳಾಸವನ್ನು ನವೀಕರಿಸಿದ್ದಾರೆ. ಅಂತಹ ಸಂದರ್ಭದಲ್ಲಿ ವಿದ್ಯುತ್ ಬಿಲ್, ಟೆಲಿಫೋನ್ ಬಿಲ್, ಪೋಸ್ಟ್ ಪೈಡ್ ಮೊಬೈಲ್ ಫೋನ್ ಮಾಹಿತಿ, ಗ್ಯಾಸ್ ಬಿಲ್, ಟ್ಯಾಕ್ಸ್ ಬಿಲ್, ಸರ್ಕಾರಿ ಅಧಿಕಾರಿಗಳ ಪಿಂಚಣಿ ಆದೇಶ ದಾಖಲೆಗಳನ್ನು ಸಲ್ಲಿಸಬಹುದಾಗಿದೆ. ಈ ದಾಖಲೆಗಳು 2 ತಿಂಗಳಿಗಿಂತ ಹಳೆಯ ದಾಖಲೆಗಳಾಗಿರಬಾರದು ಎಂಬ ನಿಯಮವನ್ನು ವಿಧಿಸಲಾಗಿದೆ.
ಇದನ್ನೂ ಓದಿ: ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ-ಆರ್‍ಬಿಐ ಸ್ಪಷ್ಟನೆ