ಮೈಸೂರು: ಮುಡಾದಲ್ಲಿ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ – MUDA) 50:50 ಹಗರಣ ಆಯ್ತು. ಈಗ ಪೌತಿ ಖಾತೆ ಕರ್ಮಕಾಂಡ ಬಗೆದಷ್ಟು ಬಯಲಾಗುತ್ತಿದೆ.
ನಕಲಿ ದಾಖಲೆ ಸೃಷ್ಟಿಸಿ ಮಾದರಿ ಮನೆಯ (Model House) ಪೌತಿ ಖಾತೆಯನ್ನು ಅಧಿಕಾರಿಗಳು ಮಾಡಿರುವುದು ದಾಖಲಾತಿಗಳಿಂದ ಬೆಳಕಿಗೆ ಬಂದಿದೆ.
ಮುಡಾ ವ್ಯವಸ್ಥಾಪಕ ಹಾಗೂ ತಹಶೀಲ್ದಾರ್ ಅಕ್ರಮವಾಗಿ ಪೌತಿ ಖಾತೆ ಮಾಡಿಕೊಟ್ಟಿದ್ದಾರೆ. ಈ ಸಂಬಂಧ ವ್ಯವಸ್ಥಾಪಕ ಸೋಮಸುಂದರ್ ಅವ್ರನ್ನ ಅಮಾನತುಗೊಳಿಸಿ ಮುಡಾ ಆಯುಕ್ತ ರಘುನಂದನ್ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಮುಡಾ ವಿಶೇಷ ತಹಶೀಲ್ದಾರ್ ಕೆ.ವಿ ರಾಜಶೇಖರ್ ವಿರುದ್ಧವೂ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಿದ್ದಾರೆ.
ಏನಿದು ಗೋಲ್ಮಾಲ್ ಕೇಸ್?
1982ರ ನವೆಂಬರ್ 2ರಂದು ಮೈಸೂರಿನ ಗೋಕುಲಂ 3ನೇ ಹಂತದಲ್ಲಿ ನಿರ್ಮಿಸಲಾಗಿದ್ದ ಮಾಡೆಲ್ ಹೌಸ್. ಮನೆ ಸಂಖ್ಯೆ 867 (30*40) ಅನ್ನು ಜಯಲಕ್ಷ್ಮೀಪುರಂನ ಲಿನಿಯನ್ ಶಾರದಾ ಜೋಸೆಫ್ ಎಂಬುವವರಿಗೆ ಮಂಜೂರು ಮಾಡಲಾಗಿತ್ತು. ಪೂರ್ಣ ಹಣ ಪಾವತಿಸಿಕೊಂಡು ಕರಾರು ಪತ್ರ, ದೃಢೀಕರಣ ಪತ್ರ ಸೇರಿದಂತೆ ಎಲ್ಲಾ ದಾಖಲೆಗಳನ್ನೂ ನೀಡಲಾಗಿತ್ತು.
ಮನೆ ಮಂಜೂರಾತಿದಾರರು 1983ರ ಸೆಪ್ಟೆಂಬರ್ 3ರಂದು ಮರಣ ಹೊಂದಿದ್ದರು. ಆದ್ರೆ 2024ರ ಮಾರ್ಚ್ 26ರಂದು ಮೃತರ ಕಾನೂನುಬದ್ಧ ವಾರಸುದಾರ ಅಲ್ಲದ ಸಿವಿಲ್ ಮಾರ್ಕಸ್ ಜೋಸೆಫ್ ಎಂಬವರಿಗೆ ನಕಲಿ ವಂಶವೃಕ್ಷ, ಆಧಾರ್ ಸೃಷ್ಟಿಸಿ ಪೌತಿ ಖಾತೆ. ಮಾಡಿ ಕೊಟ್ಟಿದ್ದಾರೆ. ಇದು ದಾಖಲಾತಿಗಳಲ್ಲಿ ಸಾಬೀತಾಗಿದೆ.