ಬೆಂಗಳೂರು: ಉದ್ಯಮಿ ಲೋಕನಾಥ್ ಪುತ್ರ ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಂತಿ ನಗರ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್ ಈಗಾಗಲೇ ಜೈಲಿನಲ್ಲಿದ್ದಾನೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಲೋಕೋಪಯೋಗಿ ಸಚಿವ ಮಹದೇವಪ್ಪ ಪುತ್ರ ಸುನೀಲ್ ಬೋಸ್ ಅವರನ್ನು ವಿಚಾರಣೆ ನಡೆಸಿದ್ದಾರೆ.
ಫೆಬ್ರವರಿ 17ರಂದು ನಗರದ ಫರ್ಜಿ ಕೆಫೆಯಲ್ಲಿ ನಲಪಾಡ್ ಕ್ಷುಲಕ ಕಾರಣಕ್ಕಾಗಿ ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದನು. ಹಲ್ಲೆ ನಡೆದ ವೇಳೆ ಫರ್ಜಿ ಕಫೆಯಲ್ಲಿ ಸಚಿವರ ಪುತ್ರ ಸುನೀಲ್ ಬೋಸ್ ಅಲ್ಲಿಯೇ ಪಾರ್ಟಿ ಮಾಡ್ತಿದ್ರು ಎಂಬುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಹಿನ್ನೆಲೆಯಲ್ಲಿ ನಲಪಾಡ್ ಪ್ರಕರಣದ ತನಿಖಾಧಿಕಾರಿ ಅಶ್ವಥ್ ಗೌಡ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕೇಂದ್ರ ಕಚೇರಿಯಲ್ಲಿ ಸುನಿಲ್ ಬೋಸ್ ಅವರ ವಿಚಾರಣೆಯನ್ನು ನಡೆಸಿದ್ದಾರೆ.
ಏನಿದು ಪ್ರಕರಣ?: ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರ ಮಗ ಮಹಮ್ಮದ್ ನಲಪಾಡ್ ಯುಬಿ ಸಿಟಿ ರೆಸ್ಟೊರೆಂಟ್ ನಲ್ಲಿ ಕಿರಿಕ್ ತೆಗೆದು ವಿದ್ವತ್ ಮೇಲೆ ಹಲ್ಲೆ ನಡೆಸಿದ್ದನು. ಫೆಬ್ರವರಿ 17ರ ರಾತ್ರಿ ಸುಮಾರು 11 ಗಂಟೆಗೆ ವಿದ್ವತ್ ಊಟಕ್ಕೆಂದು ಯುಬಿ ಸಿಟಿ ರೆಸ್ಟೊರೆಂಟ್ ಗೆ ತೆರಳಿದ್ದರು. ಈ ವೇಳೆ ವಿದ್ವತ್ ಮತ್ತು ಮಹಮ್ಮದ್ ನಲಪಾಡ್ ನಡುವೆ ಜಗಳ ನಡೆದಿತ್ತು. ಈ ಜಗಳ ತಾರಕಕ್ಕೇರಿ ನಲಪಾಡ್ ಮತ್ತು ಆತನ ಸ್ನೇಹಿತರು ವಿದ್ವತ್ ಮುಖಕ್ಕೆ ಪಂಚ್ ಕೊಟ್ಟು, ಮನಸ್ಸೋ ಇಚ್ಛೆ ಥಳಿಸಿದ್ದರು. ನಂತರ ಚಿಕಿತ್ಸೆಗೆಂದು ವಿದ್ವತ್ ಮಲ್ಯಾ ಆಸ್ಪತ್ರೆಗೆ ತೆರಳಿದಾಗ ಅಲ್ಲಿಗೂ ಹೋಗಿ ನಲಪಾಡ್ ಮತ್ತು ತಂಡ ಹಲ್ಲೆ ಮಾಡಿತ್ತು.
ಕೆಲವು ದಿನಗಳ ಹಿಂದೆ ಸಚಿವ ಮಹದೇವಪ್ಪ ಈ ಬಾರಿ ಚುನಾವಣೆಯಲ್ಲಿ ಪುತ್ರ ಸುನಿಲ್ ಬೋಸ್ ಗೆ ಟಿಕೆಟ್ ನೀಡಬೇಕೆಂದು ಕಾಂಗ್ರೆಸ್ ಹೈಕಮಾಂಡ್ ಮುಂದೆ ಬೇಡಿಕೆ ಇಟ್ಟಿದ್ದರು ಅಂತಾ ಹೇಳಲಾಗಿತ್ತು. ಆದ್ರೆ ಹೈಕಮಾಂಡ್ ಇಬ್ಬರಿಗೆ ಟಿಕೆಟ್ ನೀಡಿದ್ರೆ ಬೇರೆ ನಾಯಕರು ಅಸಮಾಧಾನಗೊಳ್ಳುವ ಸಾಧ್ಯತೆಗಳಿವೆ ಅಂತಾ ಹೇಳಿ ಟಿಕೆಟ್ ನೀಡಲು ನಿರಾಕರಿಸಿತ್ತು ಎಂಬ ಮಾಹಿತಿಗಳು ಕಾಂಗ್ರೆಸ್ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿತ್ತು. ಚುನಾವಣೆಯ ಸಮಯದಲ್ಲಿ ಸುನಿಲ್ ಬೋಸ್ ವಿಚಾರಣೆ ನಡೆಯುತ್ತಿರುವುದು ಮುಂದೆ ರಾಜಕೀಯ ತಿರುವು ಪಡೆದುಕೊಳ್ಳುವ ಸಾಧ್ಯತೆಗಳಿವೆ ಅಂತಾ ವಿಶ್ಲೇಷಣೆ ಮಾಡಲಾಗ್ತಿದೆ.