ರಾಯಚೂರು: ಜಿಲ್ಲೆಯಲ್ಲಿ ಬಾಣಂತಿಯರ ಸರಣಿ ಸಾವು ಮುಂದುವರೆದಿದ್ದು, ಇದೀಗ ಮತ್ತೋರ್ವ ಬಾಣಂತಿ ಸಾವನ್ನಪ್ಪಿರುವುದು (Maternal Death) ಬೆಳಕಿಗೆ ಬಂದಿದೆ. ಈ ಪೈಕಿ ಮೂರು ತಿಂಗಳಲ್ಲಿ ಒಟ್ಟು 10 ಬಾಣಂತಿಯರು ಸಾವನ್ನಪ್ಪಿದ್ದಾರೆ.
ಮೃತ ಬಾಣಂತಿಯನ್ನು ರಾಯಚೂರು (Raichuru) ತಾಲೂಕಿನ ಗಾರಲದಿನ್ನಿಯ (Garaldinni) ಮೂಲದ ಈಶ್ವರಿ (32) ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಪಾನಿಪುರಿ, ಗೋಬಿ ಮಂಚೂರಿ ಮಾರುವವರೇ ನಮಗಿಂತ ಸುಖವಾಗಿದ್ದಾರೆ: ಸರ್ಕಾರಿ ನೌಕರಿ ಬಗ್ಗೆ ತಹಸೀಲ್ದಾರ್ ಬೇಸರ
ಕಳೆದ ಭಾನುವಾರ (ಡಿ.8) ಈಶ್ವರಿಗೆ ಮಟಮಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಹಜ ಹೆರಿಗೆಯಾಗಿತ್ತು. ಹೆರಿಗೆಯಾಗಿ ಮನೆಗೆ ತೆರಳಿದಾಗ ರಕ್ತಸ್ರಾವ, ಜ್ವರ ಹಾಗೂ ಆಯಾಸದಿಂದಾಗಿ ಮತ್ತೆ ಮಟಮಾರಿ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಆದರೆ, ಅಲ್ಲಿನ ಸಿಬ್ಬಂದಿ ನಿರ್ಲಕ್ಷ್ಯ ಮಾಡಿದ್ದ ಹಿನ್ನೆಲೆ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಶುಕ್ರವಾರ (ಡಿ.13) ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಸದ್ಯ ಮೃತಳ ಕುಟುಂಬಸ್ಥರು ಮಾನ್ವಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಮುಂದಾಗಿದ್ದು, ರಿಮ್ಸ್ (RIMS) ಆಸ್ಪತ್ರೆಗೆ ರವಾನಿಸುವ ಮುನ್ನ ಮಟಮಾರಿ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ಸಿಬ್ಬಂದಿ ನಿರ್ಲಕ್ಯ ಮಾಡಿದ್ದಾರೆ. ಸರಿಯಾಗಿ ಸ್ಪಂದಿಸದ ಕಾರಣ ಸಾವನ್ನಪ್ಪಿರುವುದಾಗಿ ಆರೋಪಿಸಿದ್ದಾರೆ.
ಸಿಂಧನೂರಿನ (Sindhanuru) ನಾಲ್ವರು ಬಾಣಂತಿಯರ ಸಾವಿನ ಬಳಿಕ ಕಳೆದ ಮೂರು ತಿಂಗಳಲ್ಲಿ ಜಿಲ್ಲೆಯಲ್ಲಿ ಒಟ್ಟು 9 ಬಾಣಂತಿಯರು ಸಾವನ್ನಪ್ಪಿರುವುದು ಬೆಳಕಿಗೆ ಬಂದಿತ್ತು. ಇದೀಗ ಮತ್ತೋರ್ವ ಬಾಣಂತಿ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 10ಕ್ಕೆ ಏರಿದಂತಾಗಿದೆ.ಇದನ್ನೂ ಓದಿ: 46 ವರ್ಷ ಹಳೆ ಕಾಲದ ಹಿಂದೂ ದೇವಾಲಯ ಪತ್ತೆ; ಸಂಭಲ್ ಮಸೀದಿ ಸುತ್ತ ಮುಂದುವರಿದ ತೆರವು ಕಾರ್ಯ