– ನೂರಾರು ಜನರ ಸಮ್ಮುಖದಲ್ಲೇ ಗುಂಡಿಕ್ಕಿ ಹತ್ಯೆ
ಢಾಕಾ: ಬಾಂಗ್ಲಾದೇಶದಲ್ಲಿ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲೇ ಹಿಂದೂಗಳ ಮೇಲಿನ ದೌರ್ಜನ್ಯ ಕ್ರೌರ್ಯ ಮುಂದುವರಿದಿದೆ. ಸೋಮವಾರ ಹಿಂದೂ ಯುವಕನೊಬ್ಬನನ್ನ ಗುಂಡಿಕ್ಕಿ ಕೊಲ್ಲಲಾಗಿದೆ. ಅದೇ ಸಮಯ ಮತ್ತೊಂದು ಕಡೆ ಹಿಂದೂ ವಿಧವೆಯೊಬ್ಬರ ಮೇಲೆ ದುಷ್ಕರ್ಮಿಳು ಅತ್ಯಾಚಾರ ಎಸಗಿ ಕ್ರೌರ್ಯ ಮೆರೆದಿದ್ದಾರೆ. ಇದು ಕಳೆದ 3 ವಾರಗಳಲ್ಲಿ ಅಲ್ಪಸಂಖ್ಯಾತರ ವಿರುದ್ಧ ನಡೆದ 5ನೇ ಹಿಂಸಾಚಾರ ಘಟನೆಯಾಗಿದೆ.
ಗುಂಡಿಕ್ಕಿ ಹಿಂದೂ ಯುವಕನ ಹತ್ಯೆ
ಬಾಂಗ್ಲಾದಲ್ಲಿಂದು ಸಂಜೆ 5:45ರ ಸುಮಾರಿಗೆ ಮತ್ತೊಬ್ಬ ಹಿಂದೂ ಯುವಕನನ್ನ ಗುಂಡಿಕ್ಕಿ ಹತ್ಯೆಗೈಯಲಾಗಿದೆ. ಮೃತನನ್ನ ರಾಣಾ ಪ್ರತಾಪ್ ಬೈರಾಗಿ (Rana Pratap Bairagi) ಎಂದು ಗುರುತಿಸಲಾಗಿದೆ. ಜೆಸ್ಸೋರ್ ಜಿಲ್ಲೆಯ ಮೊನಿರಾಂಪುರ ಉಪಜಿಲ್ಲೆಯಲ್ಲಿ ನೂರಾರು ಜನರ ಸಮ್ಮುಖದಲ್ಲೇ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ತಿಳಿದುಬಂದಿದೆ,
ಹಿಂದೂ ವಿಧವೆ ಮೇಲೆ ಅತ್ಯಾಚಾರ
ಬಾಂಗ್ಲಾದೇಶದ ಜೆನೈದಾ ಜಿಲ್ಲೆಯ ಕಲಿಗಂಜ್‌ನಲ್ಲಿ ಇಬ್ಬರು ದುಷ್ಕರ್ಮಿಗಳು 40 ವರ್ಷದ ಹಿಂದೂ ವಿಧವೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಅಷ್ಟೇ ಅಲ್ಲದೆ, ಅತ್ಯಾಚಾರದ ನಂತರ ಮರಕ್ಕೆ ಕಟ್ಟಿಹಾಕಿ, ಆಕೆಯ ಕೂದಲು ಕತ್ತರಿಸಿ, ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಶಾಹೀನ್ ಮತ್ತು ಆತನ ಸಹೋದರ ಹಸನ್ ಆರೋಪಿಗಳೆಂದು ಗುರುತಿಸಲಾಗಿದೆ.
ಈ ಘಟನೆ ಜೆನೈದಾ ಜಿಲ್ಲೆಯ ಕಲಿಗಂಜ್ ಉಪ-ಜಿಲ್ಲೆಯಲ್ಲಿ ನಡೆದಿದೆ. ಅತ್ಯಾಚಾರಕ್ಕೊಳಗಾದ ಮಹಿಳೆ, ಸುಮಾರು ಎರಡೂವರೆ ವರ್ಷಗಳ ಹಿಂದೆ ಶಾಹೀನ್ ಮತ್ತು ಆತನ ಸಹೋದರನಿಂದ ಜಾಗದೊಂದಿಗೆ 2 ಅಂತಸ್ತಿನ ಮನೆಯನ್ನು 20 ಲಕ್ಷ ಟಾಕಾಗೆ (ಬಾಂಗ್ಲಾದೇಶದ ಕರೆನ್ಸಿ) ಖರೀದಿಸಿದ್ದರು. ಮನೆ ಕೊಂಡು ಅದರಲ್ಲಿ ಜೀವನ ನಡೆಸುತ್ತಿದ್ದ ಆ ವಿಧವೆಯನ್ನ ಆಗಾಗ ಮಾತನಾಡಿಸಲು ಬರುತ್ತಿದ್ದ ಶಾಹೀನ್ ಆಕೆಗೆ ಲೈಂಗಿಕ ಕಿರುಕುಳ ನೀಡಲು ಪ್ರಾರಂಭಿಸಿದ್ದ. ಮಹಿಳೆ ವಿರೋಧಿಸಿದ್ದಾಳೆ. ಶನಿವಾರ ಶಾಹೀನ್, ಹಸನ್ ಇಬ್ಬರು ಮನೆಗೆ ನುಗ್ಗಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾರೆ. ಬಳಿಕ ಅವರಿಂದ 50,000 ಟಾಕಾ (ಸುಮಾರು 37,000 ರೂ.) ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ಮಹಿಳೆ ಕಿರುಚಲು ಪ್ರಾರಂಭಿಸಿದಾಗ, ಆಕೆಯನ್ನು ಮರಕ್ಕೆ ಕಟ್ಟಿಹಾಕಿ, ಆಕೆಯ ಕೂದಲು ಕತ್ತರಿಸಿ, ಆ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ದುಷ್ಕರ್ಮಿಗಳು ಮಹಿಳೆಯನ್ನು ಚಿತ್ರಹಿಂಸೆ ನೀಡಿದ್ದರಿಂದ ಆಕೆ ಅರೆ ಪ್ರಜ್ಞಾವಸ್ಥೆಗೆ ತಲುಪಿದ್ದಾಳೆ. ಸ್ಥಳೀಯರು ಆಕೆಯನ್ನು ರಕ್ಷಿಸಿ ಜೆನೈದಾ ಸದರ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರ ಬಳಿ ಸಂತ್ರಸ್ತೆ ಹೇಳಿದ ಬಳಿಕ ಅತ್ಯಾಚಾರ ನಡೆದಿರುವುದು ಗೊತ್ತಾಗಿದೆ.
ಮುಂದುವರಿದ ಹಿಂಸಾಚಾರ
ಇತ್ತೀಚೆಗಷ್ಟೇ, ಶರಿಯತ್‌ಪುರ ಜಿಲ್ಲೆಯಲ್ಲಿ ಹಿಂದೂ ವ್ಯಕ್ತಿ ಖೋಕಾನ್ ಚಂದ್ರ ದಾಸ್ ಅವರನ್ನ ಗುಂಪೊಂದು ಹಲ್ಲೆ ಮಾಡಿ ಬೆಂಕಿ ಹಚ್ಚಿ ಕೊಂದಿತ್ತು. ಖೋಕೊನ್ ದಾಸ್ ಅವರು ಕೆರೆಗೆ ಹಾರಿ ಪ್ರಾಣ ಉಳಿಸಿಕೊಂಡಿದ್ದರೂ, ಗಾಯಗಳಿಂದ ಶನಿವಾರ ಮೃತಪಟ್ಟಿದ್ದರು. ಡಿ. 24ರಂದು, ಕಲಿಮೊಹರ್ ಯೂನಿಯನ್‌ನಲ್ಲಿ ಮತ್ತೊಬ್ಬ ಹಿಂದೂ ಯುವಕ ಅಮೃತ್ ಮೊಂಡಲ್ ಅವರನ್ನು ಗುಂಪೊಂದು ಕೊಂದಿತ್ತು.


