ಸ್ಯಾಂಡಲ್ ವುಡ್ ಹೆಸರಾಂತ ನಟಿ ಶ್ರೀಲೀಲಾ (Srileela) ತಾಯಿ ಸ್ವರ್ಣಲತಾ ವಿರುದ್ಧ ಮತ್ತೊಂದು ಎಫ್.ಐ.ಆರ್ ದಾಖಲಾಗಿದೆ. ಕೆಲ ದಿನಗಳ ಹಿಂದೆ ಖಾಸಗಿ ವಿಶ್ವವಿದ್ಯಾಲಯ ಒಳಗೆ ಅತಿಕ್ರಮ ಪ್ರವೇಶ ಮಾಡಿದರು ಮತ್ತು ಅಲ್ಲಿನ ಸಿಬ್ಬಂದಿಗಳಿಗೆ ಜೀವ ಬೆದರಿಕೆ ಹಾಕಿದ್ದರು ಎನ್ನುವ ಕಾರಣಕ್ಕಾಗಿ ದೂರು ದಾಖಲಾಗಿತ್ತು. ಆ ದೂರಿಗೆ ಅವರು ನಿರೀಕ್ಷಣಾ ಜಾಮೀನು ಕೂಡ ಪಡೆದುಕೊಂಡಿದ್ದರು.
ಈ ನಡುವೆ ಮತ್ತೊಂದು ಪ್ರಕರಣಕ್ಕಾಗಿ ಸ್ವರ್ಣಲತಾ ಮೇಲೆ ಆಡುಗೋಡಿ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಇವರ ಮಾಜಿ ಪತಿ ಸುಧಾಕರ್ ರಾವ್ ಸುರಪನೇನಿ (Sudhakar Rao Surapaneni) ಅವರೇ ದೂರು ನೀಡಿದ್ದಾರೆ. ಸುಧಾಕರ್ ಮನೆಗೆ ಅತಿಕ್ರಮ ಪ್ರವೇಶ ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿಯೇ ಈ ದೂರು ಕೂಡ ದಾಖಲಾಗಿದೆ. ಇದನ್ನೂ ಓದಿ:ಬಿಗ್ ಬಾಸ್ ಮನೆಗೆ ನಾನು ಲವ್ ಮಾಡೋಕೆ ಬಂದಿಲ್ಲ: ಗೊಬ್ಬರಗಾಲಗೆ ಕಾವ್ಯಶ್ರೀ ವಾರ್ನಿಂಗ್
ಇಪ್ಪತ್ತು ವರ್ಷಗಳ ಹಿಂದೆ ಸುಧಾಕರ್ ರಾವ್ ಹಾಗೂ ಸ್ವರ್ಣಲತಾ (Swarnalatha) ವಿಚ್ಚೇಧನ ಪಡೆದುಕೊಂಡಿದ್ದಾರೆ. ಆದರೂ, ಸುಧಾಕರ್ ಮನೆಗೆ ಸ್ವರ್ಣಲತಾ ಅವರು ಬೀಗ ಹೊಡೆದು ಮನೆಗೆ ನುಗ್ಗಿದ್ದಾರೆ ಎನ್ನಲಾಗುತ್ತಿದೆ. ಕೋರ ಮಂಗಲದಲ್ಲಿರುವ ಈ ಮನೆಗೆ ಅತಿಕ್ರಮ ಪ್ರವೇಶ ಮಾಡಿದ್ದಲ್ಲದೇ, ಬೀಗ ಮುರಿದು ಹಾನಿ ಮಾಡಿದ್ದಾರೆ ಎಂದು ದೂರಿನಲ್ಲಿ ದಾಖಲಾಗಿದೆ.
ಈ ಹಿಂದೆ ಅನೇಕಲ್ ಠಾಣೆಯಲ್ಲಿ ಸ್ವರ್ಣ ಲತಾ ವಿರುದ್ದ ಎಫ್ ಐ ಆರ್ (FIR) ದಾಖಲಾದಾಗ, ನಿರೀಕ್ಷಣಾ ಜಾಮೀನು ಪಡೆದಿದ್ದ ಸ್ವರ್ಣಲತಾಗೆ ಇದೀಗ ಮತ್ತೊಂದು ಪ್ರಕರಣದಿಂದಾಗಿ ಸಂಕಷ್ಟ ಎದುರಾಗಿದೆ. ಪದೇ ಪದೇ ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ ಎನ್ನುವ ಕಾರಣಕ್ಕಾಗಿ ತಾಯಿಯಿಂದಾಗಿ ಮಗಳಿಗೂ ಕೆಟ್ಟ ಹೆಸರು ತರುತ್ತಿದ್ದಾರೆ ಅಂತಿದ್ದಾರೆ ಶ್ರೀಲೀಲಾ ಆಪ್ತರು.