ಚಿಕ್ಕಮಗಳೂರು: ಬಿಜೆಪಿ ಆಪರೇಷನ್ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಸಿಬಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ದೂರು ನೀಡಲಾಗಿತ್ತು. ಆದರೆ ಈಗ ಬಿಎಸ್‍ವೈ ವಿರುದ್ಧ ಮತ್ತೊಂದು ದೂರು ಚಿಕ್ಕಮಗಳೂರು ನಗರ ಠಾಣೆಯಲ್ಲಿ ದಾಖಲಾಗಿದೆ.
ಜಿಲ್ಲಾ ಯೂತ್ ಕಾಂಗ್ರೆಸ್ ಮುಖಂಡ ಶಿವಕುಮಾರ್ ನೇತೃತ್ವದಲ್ಲಿ ಬಿಎಸ್‍ವೈ ವಿರುದ್ಧ ದೂರು ದಾಖಲಾಗಿದೆ. ಶಾಸಕರ ಖರೀದಿಗೆ 10 ಕೋಟಿ ರೂ. ಆಮಿಷವೊಡ್ಡಿದ್ದಾರೆ. ಹೀಗಾಗಿ ತನಿಖೆ ಮಾಡಿ ಅವರು ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಪೊಲೀಸರ ಮುಂದೆ ಆಗ್ರಹಿಸಿದ್ದಾರೆ.
ದೂರಿನಲ್ಲಿ ಏನಿದೆ?
ಈಗಾಗಲೇ ಬಿಎಸ್‍ವೈ ಮತ್ತು ಜೆಡಿಎಸ್ ಶಾಸಕನ ಪುತ್ರನ ನಡುವಿನ ಮಾತುಕತೆಯ ಟೇಪ್ ರಾಜ್ಯದಲ್ಲಿ ಸುದ್ದಿಯಾಗಿದೆ. ಸಂವಿಧಾನಿಕವಾಗಿ ರಚನೆಯಾಗಿರುವ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಮತ್ತು ಯಡಿಯೂರಪ್ಪ ಅವರು ಕಳೆದ 6 ತಿಂಗಳಿನಿಂದಲೂ ಸತತ ಪ್ರಯತ್ನ ಪಡುತ್ತಿದ್ದಾರೆ. ಜನ ತಂತ್ರವನ್ನು ದುರ್ಬಲಗೊಳಿಸಲು ವಾಮಾಮಾರ್ಗವನ್ನು ಅನುಸರಿಸುತ್ತಿದ್ದಾರೆ.
ಪ್ರತಿ ಶಾಸಕರಿಗೆ 10ಕೋಟಿ ಹಣ ಕೊಡುತ್ತೇನೆಂಬ ಆಮಿಷ, ಆಶ್ವಾಸನೆಯಿಂದ ಆಡಳಿತ ಪಕ್ಷದ ಶಾಸಕರನ್ನು ಸೆಳೆಯಲು ಪ್ರಯತ್ನಿಸುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ. ಇವರಿಬ್ಬರ ಸಂವಾದದಲ್ಲಿ ರಾಜ್ಯದ ಗೌರವಾನ್ವಿತ ಶಾಸಕ ಸಭೆಯ ಸಭಾಧ್ಯಕ್ಷರ ಹೆಸರು ಮತ್ತು ದೇಶದ ಪ್ರಧಾನಿ ಹಾಗೂ ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾರವರ ಹೆಸರನ್ನು ಪ್ರಸ್ತಾಪಿಸಿ ರಾಜ್ಯದ ನಾಗರಿಕರಲ್ಲಿ ಗೊಂದಲವನ್ನುಂಟು ಮಾಡಿದ್ದಾರೆ.
ಪ್ರಜಾತಂತ್ರ ರಕ್ಷಣೆ ಇಂದು ದೇಶದಲ್ಲಿನ ಅತ್ಯಂತ ಜರೂರಿನ ಕೆಲಸವಾಗಿದೆ. ಪ್ರಜಾತಂತ್ರ ಇದ್ದರೆ ಮಾತ್ರ ನಾಗರಿಕ ಸರ್ಕಾರಗಳು ಕೆಲಸ ಮಾಡಬಲ್ಲವು. ಬಿಜೆಪಿ ಪಕ್ಷದ ಇಂದಿನ ಕಾರ್ಯಸೂಚಿ ಸಂವಿಧಾನಿಕ ಸಂಸ್ಥೆಗಳು ಮತ್ತು ಶಾಸಕ ಸಭೆಗಳ ಮೇಲೆ ಪಿತೂರಿ ನಡೆಯುತ್ತಿರುವುದು ಅತ್ಯಂತ ಅಪಾಯಕಾರಿ ಹೆಜ್ಜೆ ಮತ್ತು ಸ್ವತಂತ್ರಕ್ಕೆ ಧಕ್ಕೆ ಉಂಟು ಮಾಡುವ ಪ್ರಯತ್ನಗಳಾಗಿವೆ.
ಪ್ರಜಾತಂತ್ರ ವ್ಯವಸ್ಥೆಯನ್ನು ಉಳಿಸುವ ನಿಟ್ಟಿನಲ್ಲಿ ಚಿಕ್ಕಮಗಳೂರು ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯೂ ಬಿಜೆಪಿ ಪಕ್ಷದ ಈ ಅಪಾಯ ಕಾರ್ಯಸೂಚಿಯ ಬಗ್ಗೆ ಗಂಭೀರವಾಗಿ ಚರ್ಚಿಸಿದ ನಂತರ ಬಿಎಸ್‍ವೈ ಮತ್ತು ಬಿಜೆಪಿ ಪಕ್ಷದ ಮೇಲೆ ಕಾನೂನು ಕ್ರಮಕೈಗೊಳ್ಳಲು ಈ ಮೂಲಕ ತಮ್ಮಲ್ಲಿ ಮನವಿ ಮಾಡುತ್ತಿದ್ದೇವೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv