– 5 ವರ್ಷಗಳ ಹಿಂದಷ್ಟೇ ನಿರ್ಮಿಸಿದ್ದ ಕಟ್ಟಡ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಬಹುಮಹಡಿ ಕಟ್ಟಡ ಕುಸಿತವಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಬಾಣಸವಾಡಿಯ ಕಸ್ತೂರಿನಗರದ ಡಾಕ್ಟರ್ಸ್ ಬಡಾವಣೆಯಲ್ಲಿರುವ ಮೂರಂತಸ್ಥಿನ ಕಟ್ಟಡ ಕುಸಿತವಾಗಿದೆ. ಬೆಳಗ್ಗೆಯೇ ಕಟ್ಟಡ ವಾಲಿತ್ತು, ಇದನ್ನು ಅರಿತ ನಿವಾಸಿಗಳು ಮನೆ ಬಿಟ್ಟು ಹೊರ ಬಂದಿದ್ದರು. ಈ ಹಿನ್ನೆಲೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ರಾಮಮೂರ್ತಿನಗರ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಕಟ್ಟಡವನ್ನು ಕಟ್ಟಿ ಕೇವಲ 5 ವರ್ಷಗಳು ಮಾತ್ರ ಆಗಿತ್ತು. ಅನುಮತಿ ಪಡೆಯದೇ ಕಳಪೆ ಕಾಮಗಾರಿ ಮೂಲಕ ಕಟ್ಟಡ ನಿರ್ಮಿಸಲಾಗಿತ್ತು. ಹೀಗಾಗಿ ಇದೀಗ ಮಾಲೀಕನ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಇದನ್ನೂ ಓದಿ: ಯಾರೇ ತಪ್ಪು ಮಾಡಿದ್ರೂ ಐಟಿ ಅಧಿಕಾರಿಗಳು ಬಿಡಲ್ಲ: ಬಿಎಸ್‍ವೈ ಮೊದಲ ಪ್ರತಿಕ್ರಿಯೆ
ಕಟ್ಟಡ ವಾಲುತ್ತಿದ್ದಂತೆ ಧರೆಗುರುಳುವ ಮುನ್ಸೂಚನೆಯಿಂದ ನಿವಾಸಿಗಳು ಹೊರ ಬಂದಿದ್ದರು. ಅಲ್ಲದೆ ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದರು. ಕಟ್ಟಡದಲ್ಲಿ ಸಿಲುಕಿದ್ದ ಸಾಕಷ್ಟು ಮಂದಿಯನ್ನು ರಕ್ಷಣೆ ಮಾಡಿದ್ದರು. ಹೀಗಾಗಿ ದೊಡ್ಡ ಅನಾಹುತ ತಪ್ಪಿದಂತಾಗಿದೆ.