– ಆರೋಪಿ ಮನೆಗೆ ಬೆಂಕಿ ಹಚ್ಚಿ ಆಕ್ರೋಶ
ಬೆಂಗಳೂರು: ಕಳೆದ ಮಾರ್ಚ್ 14 ರಂದು ಬೊಮ್ಮಸಂದ್ರದಲ್ಲಿ ನಡೆದ ಬಿಜೆಪಿ ಮುಖಂಡ ವಾಸು ಕೊಲೆ ಪ್ರಕರಣ ಮಾಸುವ ಮುನ್ನವೇ ಇದೀಗ ಮತ್ತೋರ್ವ ಬಿಜೆಪಿ ಮುಖಂಡನ ಬರ್ಬರ ಹತ್ಯೆ ನಡೆದಿದ್ದು ಆನೇಕಲ್ ತಾಲೂಕಿನ ಜನತೆಯನ್ನು ಬೆಚ್ಚಿಬೀಳಿಸಿದೆ.
Advertisement
ಬಿಜೆಪಿ ಎಸ್‍ಸಿ-ಎಸ್‍ಟಿ ಮೋರ್ಚಾ ಉಪಾಧ್ಯಕ್ಷ ಹರೀಶ್(36) ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಆನೇಕಲ್ ತಾಲೂಕಿನ ಹೀಲಳಿಗೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕೊಲೆಗೆ ರಾಜಕೀಯ ವೈಷಮ್ಯವೇ ಕಾರಣ ಅಂತ ಹೇಳಲಾಗ್ತಿದೆ.
Advertisement
Advertisement
ಕಳೆದ ರಾತ್ರಿ ಹರೀಶ್ 11:30 ರ ಸಮಾರಿನಲ್ಲಿ ತನ್ನ ಸ್ನೇಹಿತರಿಗೆ ತಮ್ಮನ ಮದುವೆ ಲಗ್ನ ಪತ್ರಿಕೆಗಳನ್ನು ನೀಡಿ ತನ್ನ ಬಿಳಿ ಬಣ್ಣದ ಕರಿಷ್ಮಾ ಬೈಕ್‍ನಲ್ಲಿ ಮನೆಗೆ ವಾಪಸ್ಸಾಗುವಾಗ ಚಂದಾಪುರ ಸಮೀಪದ ಹೀಲಳಿಗೆ ಗೇಟ್‍ನಲ್ಲಿ ದುಷ್ಕರ್ಮಿಗಳು ಹರೀಶ್ ಮೇಲೆ ಖಾರದ ಪುಡಿ ಎರಚಿದ್ದಾರೆ. ತಕ್ಷಣ ಬೈಕ್‍ನಿಂದ ಇಳಿದು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಕಲ್ಲುಗಳಿಂದ ಹಲ್ಲೆ ನಡೆದಿದ್ದು, ದಾರಿ ಕಾಣದೆ ಹರೀಶ್ ಮುಳ್ಳಿನ ತಂತಿಯ ಮೇಲೆ ಬಿದ್ದಿದ್ದಾರೆ. ಈ ವೇಳೆ ಡ್ರಾಗರ್ ನಿಂದ ಮನಸೋಯಿಚ್ಛೆ ಇರಿದು, ಪಕ್ಕದಲ್ಲೆ ಇದ್ದ ಕಾಂಕ್ರೀಟ್ ಬ್ಲಾಕ್‍ಗಳನ್ನು ತಲೆ ಮೇಲೆ ಎತ್ತಿಹಾಕಿ ಹರೀಶ್‍ರನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ.
Advertisement
ಕಳೆದ ಮಾರ್ಚ್ 14 ರಂದು ಬೊಮ್ಮಸಂದ್ರ ಪುರಸಭೆ ಸದಸ್ಯ ಶ್ರೀನಿವಾಸ್ ಪ್ರಸಾದ್(ವಾಸು) ಹತ್ಯೆಯಾಗಿತ್ತು. ಈ ಘಟನೆ ಮಾಸುವ ಮುನ್ನವೇ ಬುಧವಾರ ತಡರಾತ್ರಿ ಹರೀಶ್ ಕೊಲೆಯಾಗಿದೆ. ಕಳೆದ ಒಂದುವರೆ ವರ್ಷದಲ್ಲಿ ಆನೇಕಲ್ ತಾಲೂಕಿನ ಮೂವರು ಬಿಜೆಪಿ ಮುಖಂಡರು ಕೊಲೆಯಾಗಿದ್ದಾರೆ. ಕೊಲೆಯಾದ ಹರೀಶ್ ಚಂದಾಪುರ ಪುರಸಭೆ ಅಧ್ಯಕ್ಷ ವೇಣುಗೋಪಾಲ್ ಬಾಮೈದ ಅಂತ ಗೊತ್ತಾಗಿದೆ. ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಅದೇ ಗ್ರಾಮದ ರಾಜು ಎಂಬುವರೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಸಿಟ್ಟಿಗೆದ್ದ ಬಿಜೆಪಿ ಕಾರ್ಯಕರ್ತರು ರಾಜು ಮನೆಗೆ ಬೆಂಕಿ ಹಚ್ಚಿದ್ದಾರೆ.
ಘಟನೆ ಬಳಿಕ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್‍ಪಿ ಅಮಿತ್ ಸಿಂಗ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು ಪೊಲೀಸ್ ಬಿಗಿಭದ್ರತೆ ವಹಿಸಲಾಗಿದೆ. ಘಟನೆ ಸಂಬಂಧ ಸೂರ್ಯ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹತ್ಯೆಯಾದ ಬಿಜೆಪಿ ಮುಖಂಡ ಹರೀಶ್ ಮೃತದೇಹವನ್ನು ಸ್ಪರ್ಶ್ ಆಸ್ಪತ್ರೆಗೆ ರವಾನಿಸಲಾಗಿದೆ.