ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಶನಿ’ ಧಾರಾವಾಹಿ ವೀಕ್ಷಕರಿಗೆ ಮತ್ತೊಂದು ಶಾಕ್ ಸಿಕ್ಕಿದೆ. ಈಗಾಗಲೇ ಈ ಧಾರಾವಾಹಿಯಲ್ಲಿ ಸೂರ್ಯನ ಪಾತ್ರಧಾರಿಯನ್ನು ಬದಲಿಸಲಾಗಿದೆ. ಆದರೆ ಈಗ ಶನಿ ಪಾತ್ರಧಾರಿಯನ್ನು ಕೂಡ ಬದಲಾಯಿಸುತ್ತಿದ್ದಾರೆ.
ಚಾಮರಾಜನಗರದ ದೀನಬಂಧು ಅನಾಥಾಶ್ರಮದಲ್ಲಿ ಸುನೀಲ್ ಕುಮಾರ್ ಓದಿ ಬೆಳೆದಿದ್ದರು. ಕಲೆಯಲ್ಲಿ ಆಸಕ್ತನಾಗಿದ್ದ ಸುನೀಲ್ ಆಶ್ರಮದ ಗುರುಗಳ ಸಹಾಯದಿಂದ ಶನಿ ಧಾರಾವಾಹಿಯ ಮುಖ್ಯ ಪಾತ್ರದಲ್ಲಿ ಬಣ್ಣ ಹಚ್ಚಿದ್ದರು. ಕಿರುತೆರೆಯಲ್ಲಿ ದಿನನಿತ್ಯ ಶನಿಯನ್ನು ನೋಡುವುದ್ದಕ್ಕೆ ಪಾರಂಭಿಸಿ ವರ್ಷಗಳೇ ಕಳೆದಿತ್ತು. ಆದರೆ ಈಗ ಸುನೀಲ್‍ನನ್ನ ಶನಿ ಪಾತ್ರದಲ್ಲಿ ನೋಡುವ ಕೊನೆಯ ಘಳಿಗೆಗೆ ಕೌಂಟ್‍ಡೌನ್ ಶುರುವಾಗಿದೆ.
ಮೂಲಗಳ ಪ್ರಕಾರ ನವೆಂಬರ್ 15 ರಿಂದ ಶನಿಯ ಪಾತ್ರಧಾರಿ ಬದಲಾಗ್ತಾರೆ. ಈಗ ಇರುವ ಸುನಿಲ್ ಕುಮಾರ್ ಪಾತ್ರ ನೋಡುವುದಕ್ಕೆ ಕೊನೆಯ ದಿನಗಳ ಎಣಿಕೆ ಶುರುವಾಗಿದೆ. ಚಿಕ್ಕ ಹುಡುಗನ ಪಾತ್ರವನ್ನು ಧಾರಾವಾಹಿ ತಂಡ ಅತೀ ಶೀಘ್ರದಲ್ಲೇ ಮುಕ್ತಾಯ ಮಾಡಲಿದೆ. ಮಕ್ಕಳು ಬೆಳೆದು ದೊಡ್ಡವರಾಗುವ ಕಥೆ ಶುರುವಾಗುತ್ತೆ. ಒಂದು ವರ್ಷಗಳಿಂದ ಶನಿ ರೂಪದಲ್ಲಿ ಸುನಿಲ್ ಅವರನ್ನು ನೋಡುತ್ತಿದ್ದ ಸೀರಿಯಲ್ ಪ್ರೇಮಿಗಳು ನವೆಂಬರ್ 15ರಿಂದ ಬೇರೆ ಶನಿಯನ್ನು ನೋಡಬೇಕಾಗುತ್ತದೆ.
ಸುನೀಲ್ ಸದ್ಯಕ್ಕೆ ತಮ್ಮ ಓದನ್ನೂ ಡಿಸ್‍ಕಂಟಿನ್ಯೂ ಮಾಡಿದ್ದಾರೆ. ಆದರೆ ಸುನೀಲ್‍ಗೆ ಅಭಿನಯದಲ್ಲೇ ಹೆಚ್ಚಿನ ಆಸಕ್ತಿ ಇದೆ. ಹೀಗಾಗಿ ಸುನೀಲ್ ಶನಿ ಧಾರಾವಾಹಿಯಿಂದ ಗೇಟ್‍ಪಾಸ್ ಸಿಕ್ಕಿದ ಮೇಲೆ ಬೇರೆ ಕೆಲಸ ಹುಡುಕಿಕೊಳ್ಳಬೇಕು. ಡ್ಯಾನ್ಸ್ ನಲ್ಲಿ ಹೆಚ್ಚಿನ ಆಸಕ್ತಿ ಇರುವ ಸುನಿಲ್ ಸದ್ಯಕ್ಕೆ ಮುಂದಿನ ಭವಿಷ್ಯದ ಬಗ್ಗೆ ಯೋಚಿಸಿಲ್ಲ. ಮತ್ತೆ ಅನಾಥಾಶ್ರಮದಲ್ಲೇ ಬದುಕು ನಡೆಸುತ್ತಾರಾ ಇಲ್ಲ ಸುನೀಲ್ ಪ್ರತಿಭೆಗೆ ಮತ್ತೆ ಅವಕಾಶ ಸಿಗುತ್ತಾ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.
ಮನೆಗಳಲ್ಲಿ ದಿನನಿತ್ಯ ನೋಡುವ ಶನಿ ಧಾರಾವಾಹಿಯ ಪಾತ್ರಧಾರಿಗಳದ್ದೇ ಹೊಸ ಕಥೆ ಶುರುವಾಗಿದೆ. ಶನಿ ಪಾತ್ರವನ್ನು ಕಥೆಯ ಬದಲಾವಣೆಯಿಂದ ಬದಲಾಯಿಸೋಕೆ ಧಾರಾವಾಹಿ ತಂಡ ತೀರ್ಮಾನಿಸಿದೆ. ಶನಿ ಪಾತ್ರಧಾರಿಯಿಂದ ಹಿಡಿದು ಕಾಕರಾಜ, ಯಮಿ, ಹನುಮಂತ, ಗಣೇಶ ಎಲ್ಲಾ ಪಾತ್ರಗಳೂ ಬದಲಾಗುತ್ತವೆ. ಮಕ್ಕಳ ಭಾಗದ ಪೋರ್ಷನ್ ಇನ್ಮುಂದೆ ಕೆಲವು ದಿನಗಳು ಮಾತ್ರ ನೋಡಲು ಸಿಗುತ್ತದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv