ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ (Valmiki Development Corporation) ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ (SIT) ಮತ್ತೋರ್ವ ಆರೋಪಿಯನ್ನು ಬಂಧಿಸಿದೆ.
ಕಾಕಿ ಶ್ರೀನಿವಾಸ್ ರಾವ್ ಬಂಧಿತ ಆರೋಪಿ. ಈತ ಮೂಲತಃ ವಿಜಯವಾಡದನಾಗಿದ್ದು, 2 ವರ್ಷಗಳಿಂದ ಬೆಂಗಳೂರಿನ ಯಶವಂತಪುರದ ಬಳಿ ಕುಟುಂಬದೊಂದಿಗೆ ನೆಲೆಸಿದ್ದ. ಶ್ರೀನಿವಾಸ್ ಅಕ್ರಮ ಹಣ ಸಾಗಾಣಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎನ್ನಲಾಗಿದೆ. ಕೃತ್ಯ ಬೆಳಕಿಗೆ ಬರುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಈತ ನಗರಕ್ಕೆ ಬಂದ ತಕ್ಷಣ ಎಸ್‌ಐಟಿ ಬಂಧಿಸಿದೆ. ನಂತರ ನ್ಯಾಯಾಲಯದ ಮುಂದೆ ಆರೋಪಿಯನ್ನು ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ 9 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದಿದೆ.
Advertisement
Advertisement
Advertisement
ವೃತ್ತಿಯಲ್ಲಿ ಗ್ರಾಫಿಕ್ಸ್ ಡಿಸೈನರ್:
ಆರೋಪಿ ಶ್ರೀನಿವಾಸ್ ವೃತ್ತಿಯಲ್ಲಿ ಗ್ರಾಫಿಕ್ಸ್ ಡಿಸೈನರ್ ಆಗಿದ್ದು, ಈತನ ಪತ್ನಿ ಬೆಂಗಳೂರಿನ ಬಿಎಸ್‌ಎನ್‌ಎಲ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಗ್ರಾಫಿಕ್ಸ್ ಡಿಸೈನರ್ ಆಗಿದ್ದ ಆರೋಪಿ ಸುಲಭವಾಗಿ ಹಣ ಮಾಡಲು ಅಡ್ಡದಾರಿ ಹಿಡಿದಿದ್ದ. ಈತನಿಗೆ ಹಲವು ವರ್ಷಗಳಿಂದ ಸತ್ಯನಾರಾಯಣ ವರ್ಮಾನೊಂದಿಗೆ ಸ್ನೇಹವಿತ್ತು. ಈ ಗೆಳೆತನದಿಂದ ಸತ್ಯನಾರಾಯಣ ವರ್ಮಾನ ಅಕ್ರಮ ಹಣ ವರ್ಗಾವಣೆಯಲ್ಲಿ ಶ್ರೀನಿವಾಸ್ ಕೂಡ ಭಾಗಿಯಾಗಿದ್ದ.
Advertisement
ಈ ಹಿಂದೆ ವಾಲ್ಮೀಕಿ ಪ್ರಕರಣದ ಮಾದರಿಯಲ್ಲೇ ಛತ್ತೀಸ್‌ಗಢ ರಾಜ್ಯದ ಅಭಿವೃದ್ಧಿ ಮಂಡಳಿಯಲ್ಲಿ 14 ಕೋಟಿ ರೂ. ನುಂಗಿದ ಕೇಸ್‌ನಲ್ಲಿ ಸತ್ಯನಾರಾಯಣ ವರ್ಮಾ ಜೊತೆ ಶ್ರೀನಿವಾಸ್ ಕೂಡ ಜೈಲು ಸೇರಿದ್ದ. ಕಳೆದ ಅಕ್ಟೋಬರ್‌ನಲ್ಲಿ ಜಾಮೀನು ಪಡೆದು ಬೆಂಗಳೂರಿಗೆ ಬಂದು ಮತ್ತೆ ವಾಲ್ಮೀಕಿ ಹಗರಣ ಶುರು ಮಾಡಿದ್ದಾನೆ.
ವಾಲ್ಮೀಕಿ ಹಗರಣದಲ್ಲಿ ಆರೋಪಿಗೆ 10 ಕೋಟಿ:
ವಾಲ್ಮೀಕಿ ಪ್ರಕರಣದಲ್ಲಿ ಆರೋಪಿ ಶ್ರೀನಿವಾಸ್‌ಗೆ 10 ಕೋಟಿ ರೂ. ಸಂದಾಯವಾಗಿರುವ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆ ಹಣವನ್ನು ಹವಾಲಾ ಮೂಲಕ ನಗದು ಮಾಡಿಕೊಂಡಿದ್ದ ಎಂದು ಇನ್ನೋರ್ವ ಆರೋಪಿ ಸತ್ಯನಾರಾಯಣ ವರ್ಮಾ ಬಾಯ್ಬಿಟ್ಟಿದ್ದಾನೆ. ಆದರೆ ವಿಚಾರಣೆ ವೇಳೆ ಈತ ತನಗೆ ಯಾವುದೇ ಹಣ ಬಂದಿಲ್ಲ ಎಂದಿದ್ದಾನೆ. ಈ ಹಿನ್ನೆಲೆ ಎಸ್‌ಐಟಿಯಿಂದ ಹಣ ಜಪ್ತಿ ಪ್ರಕ್ರಿಯೆ ಮುಂದುವರಿದಿದೆ.