ಉಡುಪಿ: ಕರ್ನಾಟಕದ ಸಿಂಗಂ ಎಂದೇ ಖ್ಯಾತಿ ಗಳಿಸಿದ್ದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟಿರುವುದು ಹಳೇ ಸುದ್ದಿಯಾಯ್ತು. ಆದರೆ ಕರ್ತವ್ಯಕ್ಕೆ ರಾಜೀನಾಮೆ ನೀಡಿದ ಬಳಿಕ ಇದೀಗ ಅಣ್ಣಾಮಲೈ ಶಬರಿಮಲೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಹೌದು. ಐಪಿಎಸ್ ಅಧಿಕಾರಿ ಹುದ್ದೆಗೆ ರಾಜೀನಾಮೆ ಕೊಟ್ಟ ಅಣ್ಣಾಮಲೈ ಅವರು ಖಾಕಿ ಕಳಚಿ ಕಪ್ಪು ಯೂನಿಫಾರ್ಮ್ ತೊಟ್ಟಿದ್ದಾರೆ. ಖಾಕಿಗೆ ವಿದಾಯ ಹೇಳಿರುವ ಅಣ್ಣಾಮಲೈ ಅವರು ಕಪ್ಪು ಲುಂಗಿ ತೊಟ್ಟು, ಹೆಗಲಿಗೊಂದು ಕಪ್ಪು ಶಾಲು ಹಾಕಿ 18 ಮೆಟ್ಟಿಲೇರಿ ಅಯ್ಯಪ್ಪ ಸ್ವಾಮಿಯ ದರ್ಶನ ಮಾಡಿದ್ದಾರೆ. ಅಣ್ಣಾಮಲೈ ಅವರು ಸಿನಿಮಾ ನಟರಲ್ಲ. ಆದರೆ ಪೊಲೀಸ್ ಇಲಾಖೆಯಲ್ಲಿದ್ದೇ ಸೆಲೆಬ್ರಿಟಿ ಆಗಿದ್ದರು. ತಮ್ಮ ದಕ್ಷತೆಯಿಂದಲೇ ಸಾರ್ವಜನಿಕರ ಜೊತೆ ಪೊಲೀಸ್ ಅಧಿಕಾರಿಯಾಗಿದ್ದಾಗ ಗೆಳೆತನವೂ ಸಂಪಾದನೆ ಮಾಡಿದ್ದರು. ಹಾಗೂ ಅವರಿಗೆ ಅಭಿಮಾನಿಗಳು ಕೂಡ ಸಾಕಷ್ಟು ಮಂದಿ ಇದ್ದಾರೆ.
ನೇರ ಮತ್ತು ನಿಷ್ಠುರತೆಗೆ ಹೆಸರುವಾಸಿಯಾಗಿದ್ದ ಅಣ್ಣಾಮಲೈ, ಖಡಕ್ ಅಧಿಕಾರಿ ಎಂದು ಹೆಸರು ಗಳಿಸಿದ್ದರು. ಹಾಗಾಗಿ ಪಂಪಾ ನದಿಯಿಂದ ಶಬರಿಮಲೆ ಹತ್ತಿ ಇಳಿಯುವ ಅಯ್ಯಪ್ಪ ಭಕ್ತರು ಅಣ್ಣಾಮಲೈ ಅವರನ್ನು ಕಂಡು ಅವರೊಂದಿಗೆ ಸೆಲ್ಫೀ ಕ್ಲಿಕ್ಕಿಸಿಕೊಂಡರು. ಸಾರ್ವಜನಿಕರ ಜೊತೆ ಉಭಯ ಕುಶಲೋಪರಿ ಹಂಚಿಕೊಂಡರು.
ಶಬರಿಮಲೆಗೆ ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತಮಿಳುನಾಡು ಭಕ್ತರು ಭೇಟಿ ಕೊಟ್ಟು ದರ್ಶನ ಪಡೆಯುತ್ತಾರೆ. ಕರ್ನಾಟಕದ ನಾಲ್ಕು ಜಿಲ್ಲೆಯಲ್ಲಿ ಮಾತ್ರ ಕೆಲಸ ಮಾಡಿದ್ದರೂ ಮಲೆಗೆ ಬಂದ ಹೆಚ್ಚಿನವರಿಗೆ ಅಣ್ಣಾಮಲೈ ಬಗ್ಗೆ ಗೊತ್ತಿತ್ತು. ಕೇರಳ ರಾಜ್ಯದ ಸ್ಥಳೀಯ ಎಸ್‍ಪಿ ಅವರು ಕೂಡ ಅಣ್ಣಾಮಲೈ ಅವರನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದರು, ಇತರೆ ಅಧಿಕಾರಿಗಳು ಕೂಡ ಜೊತೆಗಿದ್ದರು.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅಣ್ಣಾಮಲೈ, ಬಹಳ ಸಮಯದಿಂದ ಮಲೆಗೆ ಬರುವ ಸಂಕಲ್ಪ ಮಾಡಿದ್ದೆ. ಕೆಲಸದ ಒತ್ತಡದಲ್ಲಿದ್ದರಿಂದ ಸಾಧ್ಯವಾಗಿರಲಿಲ್ಲ. ಮುಂದೇನು ಎಂದು ಆಮೇಲೆ ಸ್ವಲ್ಪ ಸಮಯ ಬಿಟ್ಟು ಹೇಳುತ್ತೇನೆ. ಸದ್ಯ ಪಂದಳ ಕಂದನ ದರ್ಶನ ಮಾಡಿದ್ದೇನೆ ನೆಮ್ಮದಿಯಾಗಿದ್ದೇನೆ. ನನಗೆ ಜನ ಬಹಳ ಪ್ರೀತಿ ತೋರಿಸುತ್ತಾರೆ ಖುಷಿಯಾಗಿದೆ. ಅಯ್ಯಪ್ಪನ ಸನ್ನಿಧಿಯಲ್ಲಿ ಮನಸ್ಸಿಗೆ ನೆಮ್ಮದಿ ಸಿಕ್ಕಿತು ಎಂದು ತಮ್ಮ ಸಂತಸ ಹಂಚಿಕೊಂಡರು.