-ಗುರುಮಠಕಲ್ ಪ್ರಕರಣದ ಬೆನ್ನಲ್ಲೇ ಶಹಾಪುರದಲ್ಲೂ ಅಕ್ರಮ ಮಾರಾಟ ಜಾಲ ಪತ್ತೆ
ಯಾದಗಿರಿ: ಜಿಲ್ಲೆಯ ಶಹಾಪುರ (Shahapura) ತಾಲೂಕಿನಲ್ಲಿ ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಟ ದಂಧೆಯೊಂದು ಬೆಳಕಿಗೆ ಬಂದಿದೆ. ಪೊಲೀಸರು 2.62 ಲಕ್ಷ ರೂ. ಮೌಲ್ಯದ ಅಕ್ಕಿ, ಗೂಡ್ಸ್ ವಾಹನವೊಂದನ್ನು ಸೀಜ್ ಮಾಡಿದ್ದು, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ರಾಜು ಪವಾರ್ ಎಂಬಾತನನ್ನು ಬಂಧಿಸಿದ್ದು, ಇನ್ನೋರ್ವ ಆರೋಪಿ ದೇವರಾಜ ರಾಠೋಡ್ ಪರಾರಿಯಾಗಿದ್ದಾನೆ.ಇದನ್ನೂ ಓದಿ: ಬಂಗ್ಲೆಗುಡ್ಡದಲ್ಲಿ ಸಿಕ್ಕ ಐದು ತಲೆ ಬುರುಡೆ, ಮೂಳೆಗಳು ಪುರುಷರದ್ದು – ಇಂದು ಎರಡನೇ ದಿನದ ಶೋಧ ಕಾರ್ಯ
ಯಾದಗಿರಿ (Yadagiri) ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಸ್ವಕ್ಷೇತ್ರದಲ್ಲಿ ಅನ್ನಭಾಗ್ಯ ಅಕ್ಕಿ ಪತ್ತೆಯಾಗಿದೆ. ಶಹಾಪುರ ತಾಲೂಕಿನ ಗೋಗಿ ಗ್ರಾಮದ ಹೊರವಲಯದಲ್ಲಿ ಪಡಿತರ ಕಾರ್ಡ್‌ದಾರರಿಂದ ಅಕ್ಕಿ ಖರೀದಿಸಿ ಸಾಗಾಟ ಮಾಡಲಾಗ್ತಿತ್ತು. ಈ ವೇಳೆ ಆಹಾರ ನಿರೀಕ್ಷಕ ಬಸವರಾಜ್ ಹಾಗೂ ಪಿಎಸ್‌ಐ ದೇವಿಂದ್ರರೆಡ್ಡಿ ಅವರು ದಾಳಿ ನಡೆಸಿದ್ದಾರೆ. ತೆಲಂಗಾಣ ಪಾಸಿಂಗ್ ಹೊಂದಿರುವ ಗೂಡ್ಸ್ ವಾಹನದಲ್ಲಿ 2.62 ಲಕ್ಷ ರೂ. ಮೌಲ್ಯದ 158 ಚೀಲಗಳಲ್ಲಿ ಅನ್ನಭಾಗ್ಯ ಅಕ್ಕಿ ಪತ್ತೆಯಾಗಿದೆ.
ಪೊಲೀಸರು ಅಕ್ಕಿ ಸಹಿತ ಗೂಡ್ಸ್ ವಾಹನವನ್ನು ಜಪ್ತಿ ಮಾಡಿಕೊಂಡಿದ್ದು, ಗೋಗಿ ಠಾಣೆಯಲ್ಲಿ ಈ ಬಗ್ಗೆ ಕೇಸ್ ದಾಖಲಾಗಿದೆ. ಇನ್ನೂ ಚಾಮನಾಳ ತಾಂಡಾದ ವ್ಯಾಪ್ತಿಯ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹ ಮಾಡಿರುವ ಪಡಿತರ ಅಕ್ಕಿ ಖರೀದಿ ಮಾಡಿ, ಗೂಡ್ಸ್ ವಾಹನದಲ್ಲಿ ಸಾಗಾಟ ಮಾಡಲಾಗ್ತಿತ್ತು ಎಂದು ತಿಳಿದುಬಂದಿದೆ.
ಇತ್ತೀಚಿಗೆ ಗುರುಮಠಕಲ್‌ನಲ್ಲಿಯೂ ಅನ್ನಭಾಗ್ಯ ಅಕ್ಕಿ ಅಕ್ರಮ ಮಾರಾಟ ಜಾಲ ಪತ್ತೆಯಾಗಿತ್ತು. ಅಲ್ಲದೇ ವಿದೇಶಕ್ಕೆ ರಫ್ತು ಮಾಡಲಾಗುತ್ತಿದೆ ಎಂದು ತಿಳಿದುಬಂದಿತ್ತು. ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದರೂ ಕೂಡ ಜಿಲ್ಲೆಯಲ್ಲಿ ಅಕ್ಕಿ ಸಾಗಾಟ ದಂಧೆ ನಿಲ್ಲುತ್ತಿಲ್ಲ ಎನ್ನುವ ಪ್ರಶ್ನೆ ಮೂಡಿದೆ.ಇದನ್ನೂ ಓದಿ: ಯಾದಗಿರಿ | ಅಕ್ಕಿ ಅಕ್ರಮ ಮಾರಾಟ ಜಾಲ ಪತ್ತೆ – 1.17 ಕೋಟಿ ಮೌಲ್ಯದ 4,108 ಕ್ವಿಂಟಾಲ್ ಸೀಜ್

