ನವದೆಹಲಿ: ಲೋಕ್‍ಪಾಲ್ ನೇಮಕ ವಿಚಾರದಲ್ಲಿ ವಿಳಂಬ ಹಿನ್ನೆಲೆಯಲ್ಲಿ ಹಿರಿಯ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ದೆಹಲಿಯಲ್ಲಿ ಮೊತ್ತೊಂದು ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.
ಅಧಿಕಾರಕ್ಕೆ ಬಂದು ಮೂರು ವರ್ಷವಾದ್ರೂ ಲೋಕಪಾಲ್ ನೇಮಕ ವಿಚಾರದಲ್ಲಿ ನಿರಾಸಕ್ತಿ ತೋರಿರುವ ಮೋದಿ ಸರ್ಕಾರದ ವಿರುದ್ಧ ನನ್ನ ಹೋರಾಟವಿರುತ್ತದೆ ಎಂದು ಪತ್ರದಲ್ಲಿ ಹೇಳಿದ್ದಾರೆ. ಇದರೊಂದಿಗೆ ಆಹಾರ ಭದ್ರತೆ ಹಾಗೂ ರೈತರ ಕಲ್ಯಾಣದ ಬಗೆಗಿನ ಸ್ವಾಮಿನಾಥನ್ ಕಮಿಷನ್ ವರದಿಯನ್ನು ಜಾರಿ ಮಾಡುವಂತೆಯೂ ಒತ್ತಾಯಿಸಬಹುದು ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.
Advertisement
ಭಷ್ಟ್ರಾಚಾರ ಮುಕ್ತ ಭಾರತ ನಿರ್ಮಿಸುವ ಉದ್ದೇಶದಿಂದ ಐತಿಹಾಸಿಕ ಚಳವಳಿ ನಡೆದು 6 ವರ್ಷ ಕಳೆದಿವೆ. ಆದ್ರೆ 6 ವರ್ಷಗಳಾದ್ರೂ ಭಷ್ಟ್ರಾಚಾರಕ್ಕೆ ಮುಕ್ತಿ ಹಾಡಲು ಸರ್ಕಾರ ಒಂದು ನಿರ್ದಿಷ್ಟವಾದ ಕಾನೂನಿನ ಕರಡು ಸಿದ್ಧಪಡಿಸಿಲ್ಲ ಎಂದು ಪತ್ರದಲ್ಲಿ ಅಣ್ಣಾ ಹಜಾರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ಲೋಕ್‍ಪಾಲ್ ಹಾಗೂ ಲೋಕಾಯುಕ್ತ ನೇಮಕದ ಬಗ್ಗೆ 3 ವರ್ಷಗಳಿಂದ ನಾನು ನಿಮ್ಮ ಸರ್ಕಾರಕ್ಕೆ ನೆನಪಿಸುತ್ತಲೇ ಇದ್ದೇನೆ. ಆದ್ರೆ ನೀವು ನನ್ನ ಪತ್ರಗಳಿಗೆ ಉತ್ತರಿಸಿಯೂ ಇಲ್ಲ. ಯಾವುದೇ ಕ್ರಮವನ್ನೂ ತೆಗೆದುಕೊಂಡಿಲ್ಲ ಎಂದು ಹಜಾರೆ ಬರೆದಿದ್ದಾರೆ.
Advertisement
ಮುಂದಿನ ಪತ್ರದಲ್ಲಿ ದೆಹಲಿಯಲ್ಲಿನ ಹೋರಾಟಕ್ಕೆ ದಿನಾಂಕ ಹಾಗೂ ಸ್ಥಳದ ಬಗ್ಗೆ ಬಹಿರಂಗಪಡಿಸುತ್ತೇನೆ ಎಂದು ಹಜಾರೆ ಹೇಳಿದ್ದಾರೆ.
Advertisement
ಇದೇ ವರ್ಷ ಮಾರ್ಚ್‍ನಲ್ಲೂ ಕೂಡ ಲೋಕ್‍ಪಾಲ್ ಪ್ರತಿಭಟನೆ ನಡೆಸುವ ನಿರ್ಧಾರದ ಬಗ್ಗೆ ಹಜಾರೆ ಮೋದಿಗೆ ಪತ್ರದಲ್ಲಿ ತಿಳಿಸಿದ್ದರು. ಭ್ರಷ್ಟಾಚಾರಕ್ಕೆ ಕೊನೆ ಹಾಡುತ್ತೇವೆಂಬ ಸರ್ಕಾರದ ಭರವಸೆ ವಾಸ್ತವಕ್ಕೆ ಬರಲೇ ಇಲ್ಲ ಎಂದು ಹಜಾರೆ ಹೇಳಿದ್ದರು.
2011ರ ಏಪ್ರಿಲ್‍ನಲ್ಲಿ ಅಣ್ಣಾ ಹಜಾರೆ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಜನ್ ಲೋಕ್‍ಪಾಲ್ ಮಸೂದೆಗೆ ಆಗ್ರಹಿಸಿ ದೆಹಲಿಯ ರಾಮ್‍ಲೀಲಾ ಮೈದಾನದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಅರವಿಂದ ಕೇಜ್ರಿವಾಲ್, ಬಾಬಾ ರಾಮ್‍ದೇವ್ ಹಾಗೂ ಕಿರಣ್ ಬೇಡಿ ಕೂಡ ಅಣ್ಣಾ ಟೀಂನಲ್ಲಿದ್ದರು. ಜನರ ಒತ್ತಾಯಕ್ಕೆ ಮಣಿದು 2013ರಲ್ಲಿ ಲೋಕ್‍ಪಾಲ್ ಕಾಯ್ದೆಯನ್ನ ಪಾಸ್ ಮಾಡಲಾಗಿತ್ತು.