7 ವರ್ಷ ಬಳಿಕ ಮತ್ತೆ ಉಪವಾಸ ಸತ್ಯಾಗ್ರಹ ಆರಂಭಿಸಿದ ಅಣ್ಣಾ ಹಜಾರೆ

Public TV
2 Min Read
anna hazare 3

ನವದೆಹಲಿ: ಯುಪಿಎ ಆಡಳಿತ ಅವಧಿಯಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿ ಸಾವಿರಾರು ಜನರು ಬೀದಿಗಿಳಿದು ಹೋರಾಟ ನಡೆಸುವಂತೆ ಮಾಡಿದ್ದ ಹಿರಿಯ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ 7 ವರ್ಷಗಳ ಬಳಿಕ ಮತ್ತೆ ಸತ್ಯಾಗ್ರಹ ಆರಂಭಿಸಿದ್ದಾರೆ.

ಅಂದು ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್ ವಿರುದ್ಧ ಹೋರಾಟ ಆರಂಭಿಸಿದ್ದ ಅಣ್ಣಾ ಹಜಾರೆ ಅವರು, ಇಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ದೆಹಲಿಯ ರಾಮಲೀಲಾ ಮೈದಾನದಲ್ಲಿ ಹೋರಾಟ ಆರಂಭಿಸಿದ್ದಾರೆ.

anna hazare

ಸತ್ಯಾಗ್ರಹ ಆರಂಭಿಸುವ ಮುನ್ನ ಅಣ್ಣಾ ಹಜಾರೆ ದೆಹಲಿಯಲ್ಲಿರುವ ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದರು. ಸಮರ್ಥ ಲೋಕ್‍ಪಾಲ್ ಜಾರಿ, ಎಲ್ಲಾ ರಾಜ್ಯಗಳಲ್ಲಿ ಲೋಕಾಯುಕ್ತ ನೇಮಕ ಮತ್ತು ರೈತರ ಬೆಳೆಗಳಿಗೆ ಉತ್ತಮ ಬೆಂಬಲ ಬೆಲೆ ನೀಡಿವುದು, ಸ್ವಾಮಿನಾಥನ್ ವರದಿ ಜಾರಿ ಅವರ ಪ್ರಮುಖ ಬೇಡಿಕೆಗಳಾಗಿವೆ. ಅಣ್ಣಾ ಹಜಾರೆ ಅವರ ಹೋರಾಟಕ್ಕೆ ಬೃಹತ್ ಮಟ್ಟದಲ್ಲಿ ಬೆಂಬಲ ವ್ಯಕ್ತವಾಗಿದೆ.

ಈ ವೇಳೆ ಮಾತನಾಡಿದ ಅವರು, ಸತ್ಯಾಗ್ರಹದಲ್ಲಿ ಭಾಗವಹಿಸಲು ಆಗಮಿಸುತ್ತಿದ್ದ ಸಾವಿರರು ರೈತರು, ಹೋರಾಟಗಾರರನ್ನು ತಡೆಯಲು ಸರ್ಕಾರ ರೈಲ್ವೇ ಸೇವೆಯನ್ನು ಸ್ಥಗಿತಗೊಳಿಸಿರುವ ಕ್ರಮದ ವಿರುದ್ಧ ಕಿಡಿಕಾರಿದರು. ಅಲ್ಲದೇ ನೀವು ಅವರನ್ನು ಹಿಂಸೆಗೆ ತಳ್ಳಲು ಬಯಸುತ್ತೀರಿ. ಪೊಲೀಸರ ರಕ್ಷಣೆ ಬೇಡವೆಂದು ಹಲವು ಪತ್ರಗಳನ್ನು ಬರೆದಿದ್ದೇನೆ. ನಿಮ್ಮ ರಕ್ಷಣೆ ನನ್ನನ್ನು ಉಳಿಸುವುದಿಲ್ಲ. ಇಂತಹ ಸರ್ಕಾರದ ಮೋಸದ ವರ್ತನೆ ಮುಗಿಯುವುದಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ರು.

anna hazare 1

2011ರಲ್ಲಿ ಅಣ್ಣಾ ಹಜಾರೆ ಆರಂಭಿಸಿದ್ದ `ಭ್ರಷ್ಟಾಚಾರ ವಿರೋಧಿ ಚಳುವಳಿ’ಗೆ ದೇಶಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ಭ್ರಷ್ಟಾಚಾರದ ಪ್ರಕರಣಗಳನ್ನು ತನಿಖೆ ಮಾಡಲು ಲೋಕ್‍ಪಾಲ್ ಸ್ಥಾಪಿಸಬೇಕೆಂದು ಒತ್ತಾಯಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅವರ ಈ ಬೇಡಿಕೆಯನ್ನು ಪೂರೈಸುತ್ತೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅವರು ಇದನ್ನು ಅಸಡ್ಡೆಗೊಳಿಸಿದಕ್ಕೆ ಹಜಾರೆ ಅವರು ಮತ್ತೆ ಉಪವಾಸ ಸತ್ಯಗ್ರಹವನ್ನು ಕೈಗೊಂಡಿದ್ದಾರೆ.

ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದ ಅವರು, ಪ್ರಧಾನಿಗಳಿಗೆ ಸುಮಾರು 30 ಪತ್ರ ಬರೆದಿದ್ದು, ಒಂದಕ್ಕೂ ಉತ್ತರ ಬಂದಿಲ್ಲ. ಮೋದಿಗೆ ಪ್ರಧಾನಮಂತ್ರಿಗಿರಿಯ ಅಹಂ ಇದೆ. ಅದಕ್ಕಾಗಿ ನನ್ನ ಪತ್ರಗಳಿಗೆ ಪ್ರತಿಕ್ರಿಯೆ ನೀಡಿಲ್ಲ ಎಂದು ಹೇಳಿದ್ದರು. ಮುಂದೆ ಹೋರಾಟ ಆರಂಭಿಸಲಿದ್ದು, ಇದು ಹಿಂದೆಂದೂ ನಡೆದಿರದಂತಹ ಬೃಹತ್ ಚಳವಳಿ ಆಗಿರಲಿದ್ದು, ಸರ್ಕಾರಕ್ಕೆ ಇದು ಎಚ್ಚರಿಕೆಯಾಗಲಿದೆ ಎಂದು ಹಜಾರೆ ಹೇಳಿದ್ರು.

ನನ್ನ ಸಮಾವೇಶ ಮತ್ತು ಚಳವಳಿಗಳ ಮೂಲಕ ಓಟು ಗಳಿಸುವ ಉದ್ದೇಶ ನನಗಿಲ್ಲ. ಜನ ಲೋಕ್‍ಪಾಲ್‍ಗೆ ಬೃಹತ್ ಜಾಥಾ ನಡೆದಂತೆಯೇ, ರೈತರ ಸಮಸ್ಯೆಗಳ ಬಗ್ಗೆಯೂ ಅದೇ ರೀತಿ ಚಳವಳಿ ನಡೆಯುತ್ತದೆ ಎಂದು ಭಾವಿಸಿದ್ದೇನೆ ಎಂದು ಅವರು ಹೇಳಿದ್ದರು. ಸದ್ಯ ಲೋಕ್‍ಪಾಲ್ ಅನುಷ್ಠಾನ, ಲೋಕಾಯುಕ್ತ ನೇಮಕ, ರೈತರಿಗೆ 5 ಸಾವಿರ ರೂ. ಪಿಂಚಣಿ ಹಾಗೂ ರೈತರ ಬೆಳೆಗಳಿಗೆ ದರ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳನ್ನ ಮುಂದಿಟ್ಟು ಅಣ್ಣಾ ಹಜಾರೆ ಹೋರಾಟಕ್ಕೆ ಮುಂದಾಗಿದ್ದಾರೆ.

2011ರ ಪ್ರತಿಭಟನೆ ವೇಳೆ ಅಣ್ಣಾ ಹಾಜರೆ ಅವರ ಪರ ನಿಂತಿದ್ದ ಕೆಲ ನಾಯಕರು ಬಳಿಕ ಆಮ್ ಆದ್ಮಿ ರಾಜಕೀಯ ಪಕ್ಷ ಸ್ಥಾಪಿಸಿ ಅಧಿಕಾರ ಪಡೆದಿದ್ದರು. ಆದರೆ ಈ ಬಾರಿಯ ಚಳುವಳಿಯಲ್ಲಿ ಮತ್ತೊಬ್ಬ ಅರವಿಂದ ಕೇಜ್ರಿವಾಲ್ ಹುಟ್ಟಿ ಬಾರದೇ ಇದ್ದರೆ ಅಷ್ಟೇ ಸಾಕು ಎಂದು ಅಣ್ಣಾ ಹಜಾರೆ ಹೇಳಿದ್ದರು.

anna hazare 4

Share This Article
Leave a Comment

Leave a Reply

Your email address will not be published. Required fields are marked *