ಕಾರವಾರ: ರಾಜ್ಯದಲ್ಲೇ ಅತೀ ಹೆಚ್ಚು 140 ಕಿಲೋಮೀಟರ್ ಕರಾವಳಿ ತೀರಪ್ರದೇಶವನ್ನು ಉತ್ತರ ಕನ್ನಡ ಜಿಲ್ಲೆ ಹೊಂದಿದೆ. ದೇಶದ ಪ್ರತಿಷ್ಠಿತ ಕದಂಬ ನೌಕಾನೆಲೆ ಸಹ ಈ ಜಿಲ್ಲೆಯಲ್ಲಿದ್ದು, 11,334 ಎಕರೆ ಭೂಮಿಯನ್ನು ಒಳಗೊಂಡಿದೆ. ಸಾಗರಮಾಲ, ಕೈಗಾ ಅಣುಸ್ಥಾವರ, ಚತುಷ್ಪತ ಹೆದ್ದಾರಿ ಅಗಲೀಕರಣ, ವಿದ್ಯುತ್ ಯೋಜನೆಗಳಿಗೆ ಜಿಲ್ಲೆಯ ಜನ ತಮ್ಮ ನೆಲವನ್ನು ಧಾರೆಯೆರೆದಿದ್ದಾರೆ.
ಇದೀಗ ಉತ್ತರ ಕನ್ನಡ ಜಿಲ್ಲೆಗೆ ರಾಜ್ಯ ಸರ್ಕಾರ ಶರಾವತಿ ಪಂಪ ಸ್ಟೋರೇಜ್ ಯೋಜನೆ, ವರದಾ-ಬೇಡ್ತಿ ನದಿ ಜೋಡಣೆ, ಯೋಜನೆಗಳನ್ನು ಜಾರಿಗೆ ತಂದಿದೆ. ಇದರ ಜೊತೆಗೆ ಕೇಂದ್ರ ಸರ್ಕಾರದ ಯೋಜನೆಯಾದ ಸಾಗರ ಮಾಲಾ ಯೋಜನೆಯಡಿ ಕಾರವಾರ ಬಂದರು ವಿಸ್ತರಣೆ, ಬೇಲಿಕೇರಿ ಬಂದರು ಯೋಜನೆ, ಕೇಣಿ ಗ್ರೀನ್ ಫೀಲ್ಟ್ ಬಂದರು ಯೋಜನೆ, ಹೊನ್ನಾವರ ಪಾವಿನಕುರ್ವ ಬಂದರು ಯೋಜನೆ ಹೀಗೆ ಒಟ್ಟು 4 ಬಂದರುಗಳನ್ನು ಅಭಿವೃದ್ಧಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಹೊಸ ಬಂದರು ನಿರ್ಮಾಣಕ್ಕೆ ಕೈಹಾಕಿದೆ. ಇದನ್ನೂ ಓದಿ: ಕೇಣಿಯಲ್ಲಿ ಖಾಸಗಿ ಬಂದರು ನಿರ್ಮಾಣಕ್ಕೆ ಮೀನುಗಾರರ ವಿರೋಧ – ಮಾ.15ರ ವರೆಗೆ ನಿಷೇಧಾಜ್ಞೆ ಮುಂದುವರಿಕೆ
ಆದರೆ, ಇದೀಗ ಹೊನ್ನಾವರ ಪಾವಿನಕುರ್ವ, ಅಂಕೋಲದ ಕೇಣಿ, ಬೇಲಿಕೇರಿ ಖಾಸಗಿ ಬಂದರು ನಿರ್ಮಾಣಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು, ಕೋರ್ಟ ಮೆಟ್ಟಿಲೇರಿದೆ. ಆದರೆ, ಇದೀಗ ಅಂಕೋಲದ ಕೇಣಿ ಖಾಸಗಿ ಬಂದರನ್ನು ನಿರ್ಮಾಣ ಮಾಡಲು ರಾಜ್ಯ ಸರ್ಕಾರ 2022 ರಲ್ಲಿ ಅನುಮತಿಗೆ ಆದೇಶ ನೀಡಿ 2023 ರಲ್ಲಿ ಜೆಎಸ್‌ಡಬ್ಲೂ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡು ಒಪ್ಪಂದಕ್ಕೆ ಸಹಿ ಹಾಕಿದೆ. ಕಳೆದ ಎರಡು ತಿಂಗಳ ಹಿಂದೆ ಕೇಣಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಿ ನಿಷೇಧಾಜ್ಞೆ ಜಾರಿ ಮಾಡುವ ಮೂಲಕ ಕೇಣಿ ಬಂದರು ನಿರ್ಮಾಣಕ್ಕೆ ಮೊದಲ ಹಂತದ ಸರ್ವೆ ಕಾರ್ಯ ಪೂರ್ಣಗೊಳಿಸಿದೆ.
ಕೇಣಿ ಬಂದರು ವ್ಯಾಪ್ತಿ ಯೋಜನಾ ವೆಚ್ಚ ಎಷ್ಟು?
5,611 ಕೋಟಿಯ ಯೋಜನಾ ವೆಚ್ಚ ಹೊಂದಿರುವ JSW ಕಂಪನಿ ಈ ಯೋಜನೆಗೆ 457 ಎಕರೆ ಪ್ರದೇಶದ ಸ್ವಾಧೀನಕ್ಕೆ ಬೇಡಿಕೆ ಇಟ್ಟಿದೆ. ಸರಕು ಸಂಗ್ರಹಣೆಗಾಗಿ 309 ಎಕರೆ, ರಸ್ತೆ, ರೈಲ್ವೆ ಸಂಚಾರ ಮಾರ್ಗಕ್ಕಾಗಿ 116 ಎಕರೆ, ಜಲಮಾರ್ಗದಲ್ಲಿ 11.2 ಕಿಲೋಮೀಟರ್ ಉದ್ದ, ಸಂಪರ್ಕ ರಸ್ತೆಗಾಗಿ 4.5 ಕಿಲೋಮೀಟರ್, ರೈಲ್ವೆಗಾಗಿ 6.50 ಕಿಲೋಮೀಟರ್ ಬಳಸಿಕೊಳ್ಳಲಿದ್ದು, 103 ಗ್ರಾಮಗಳು ಯೋಜನಾ ವ್ಯಾಪ್ತಿಗೆ ಬರಲಿದೆ. 2025 ರ ಡಿಸೆಂಬರ್‌ನಲ್ಲಿ ಕಾಮಗಾರಿ ಪ್ರಾರಂಭಕ್ಕೆ ಸಿದ್ಧತೆ ಮಾಡಿಕೊಂಡಿದೆ.
ಕೇಣಿ ಖಾಸಗಿ ಬಂದರಿನಿಂದ ಲಾಭ ಏನು?
ಬಂದರು ನಿರ್ಮಾಣದಿಂದ ಸ್ಥಳೀಯ ಹಾಗೂ ಜಿಲ್ಲೆಯ ಜನರಿಗೆ ಉದ್ಯೋಗ, CSR ಯೋಜನೆಯಡಿ ಕೌಶಲ್ಯಾಭಿವೃದ್ಧಿ ತರಬೇತಿ, ಸ್ಥಳೀಯ ಆರ್ಥಿಕ ಅಭಿವೃದ್ಧಿ ಲಾಭದ ನಿರೀಕ್ಷೆ ಹೊಂದಲಾಗಿದೆ. ಪರಿಸರ ನಿರ್ವಹಣಾ ಯೋಜನೆ ಜಾರಿ (EMP), (ಅರಣ್ಯ ನಿರ್ಮಾಣ, ಘನ ತ್ಯಾಜ್ಯ ನಿರ್ವಹಣೆ, ಸಾಗರ ಮಾಲಿನ್ಯ ನಿಯಂತ್ರಣ, ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳು ಇತ್ಯಾದಿ). ಕೇಣಿ ಬಂದರು ಯೋಜನೆಯಿಂದ ಆಮದು-ರಫ್ತು ಚಟುವಟಿಕೆ ನಡೆಯುವುದರ ಮೂಲಕ ಕೇವಲ ಬಂದರು ವ್ಯಾಪ್ತಿಯಲ್ಲಷ್ಟೇ ಅಲ್ಲದೆ ಸುತ್ತಮುತ್ತಲೂ ಕೈಗಾರಿಕೆ ಸ್ಥಾಪನೆಗೆ, ವಾಣಿಜ್ಯ ಚಟುವಟಿಕೆ ವೃದ್ಧಿಗೆ ಅವಕಾಶ ಆಗಲಿದೆ. ಬಂದರು ನಿರ್ಮಾಣದ ವೇಳೆಯಲ್ಲೇ ಕನಿಷ್ಠ 2,000 ಉದ್ಯೋಗ ಸೃಷ್ಟಿಯಾಗಲಿದೆ. ಬಂದರು ನಿರ್ಮಾಣದ ಬಳಿಕ, ನಿರ್ವಹಣೆ ವಿಭಾಗದಲ್ಲಿ 500 ಜನರಿಗೆ ಉದ್ಯೋಗಾವಕಾಶ ಲಭಿಸಲಿದೆ. ಬಂದರು ಯೋಜನೆ ಜಾರಿಯಾದರೆ ಬಂದರಿಗೆ ಸರಕು ಸಾಗಣೆಗೆ ಪೂರಕವಾಗಿ ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆ ಕಾರ್ಯಗತಗೊಳಿಸಲಾಗುತ್ತದೆ. ಇದಕ್ಕಾಗಿ ಗರಿಷ್ಠ ಪ್ರಯತ್ನವನ್ನು ನಡೆಸಲಿದೆ. ಯೋಜನೆಗೆ ರಸ್ತೆ, ರೈಲು ಸಂಪರ್ಕಕ್ಕೆ 140 ಎಕರೆಯಷ್ಟು ಜಾಗ ಮಾತ್ರ ಸ್ವಾಧೀನಪಡಿಸಿಕೊಳ್ಳಬೇಕಾಗುತ್ತದೆ. ಸುಮಾರು 75 ಮನೆಗಳು ತೆರವುಗೊಳ್ಳಬಹುದು. ಅವುಗಳಿಗೆ ಪರಿಹಾರ ಸಿಗಲಿದೆ. ಜೊತೆಗೆ ಸ್ಥಳೀಯರ ಆರ್ಥಿಕ ಸಬಲೀಕರಣಕ್ಕೆ ವಿವಿಧ ಯೋಜನೆ ಹಮ್ಮಿಕೊಳ್ಳಲಾಗುವುದು. ಉದ್ಯೋಗಾವಕಾಶ ಲಭ್ಯತೆಗೆ ಪೂರಕವಾಗಿ ಕೌಶಲ ತರಬೇತಿ ನೀಡಲಾಗುವುದು. ಇದನ್ನೂ ಓದಿ: ಕೇಣಿ ಬಂದರು ಸರ್ವೇಗೆ ತೀವ್ರ ವಿರೋಧ – ಸಮುದ್ರಕ್ಕೆ ಹಾರಿ ಪ್ರತಿಭಟನಾಕಾರ ಆಕ್ರೋಶ
ಆರಂಭದಲ್ಲಿ ವಾರ್ಷಿಕ ಮೂರು ಕೋಟಿ ಟನ್ (ಎಂಟಿಪಿಎ), ಬಳಿಕ ಹಂತ ಹಂತವಾಗಿ ವಾರ್ಷಿಕವಾಗಿ 9.2 ಕೋಟಿ ಟನ್ ಸರಕು ಸಾಗಣೆ ವಹಿವಾಟು ನಡೆಸಲು ಬಂದರು ಬಳಕೆಯಾಗಲಿದೆ. ಕಲ್ಲಿದ್ದಲು, ಕಚ್ಚಾ ಲೋಹದ ಸೂಕ್ಷ್ಮ ವಸ್ತುಗಳು, ಎಲ್‌ಪಿಜಿ, ಕಚ್ಚಾ ತೈಲದ ಕಾರ್ಗೋಗಳು, ಕಂಟೇನರ್ ಕಾರ್ಗೋಗಳ ಮೂಲಕ ಅಗತ್ಯ ವಸ್ತುಗಳ ಆಮದು, ರಫ್ತು ಚಟುವಟಿಕೆ ನಡೆಯಲಿದೆ.
ಬಳ್ಳಾರಿಯಲ್ಲಿ ಬೃಹತ್ ಮಟ್ಟದಲ್ಲಿ ಕೈಗಾರಿಕೆ ಹೊಂದಿರುವ ಜೆಎಸ್‌ಡಬ್ಲ್ಯುಕಂಪನಿ ಕಚ್ಚಾ ವಸ್ತುಗಳ ಆಮದು, ಸಿದ್ಧವಸ್ತುಗಳ ರಫ್ತು ಚಟುವಟಿಕೆಗೆ ಬಂದರು ಬಳಕೆಯಾಗಲಿದೆ. ಜೊತೆಗೆ ಉತ್ತರ ಕರ್ನಾಟಕ ಭಾಗದಲ್ಲಿನ ಕೈಗಾರಿಕೆಗಳಿಗೆ ಪೂರಕವಾಗಿ ಅಗತ್ಯ ಸರಕು ಪೂರೈಕೆ-ಸಾಗಾಟಕ್ಕೂ ನೆರವಾಗಲಿದೆ. ಈ ಮೂಲಕ ಉತ್ತರ ಕರ್ನಾಟಕ, ಪಶ್ಚಿಮ ಕರ್ನಾಟಕ ಭಾಗದಲ್ಲಿನ ಕೈಗಾರಿಕೋದ್ಯಮಿಗಳು ಸರಕು ಸಾಗಾಟಕ್ಕೆ ಗೋವಾ, ಆಂಧ್ರ ಪ್ರದೇಶದ ಬಂದರುಗಳನ್ನು ಅವಲಂಬಿಸುವುದು ತಪ್ಪಲಿದೆ ಎಂಬುದು ಕೇಣಿ ಪೋರ್ಟ್ ಪ್ರೈವೆಟ್ ಲಿಮಿಟೆಡ್ ಕಂಪನಿಯ ಯೋಜನಾ ನಿರ್ದೇಶಕ ಭರಮಪ್ಪ ಕುಂಟಿಗೇರಿ ಅವರು ಹೇಳುತ್ತಾರೆ.
ಯೋಜನೆಯ ರೂಪ ಪರಿಹಾರಗಳು
ಬಂದರನ್ನು ಕಡಲ ತೀರದಿಂದ 400 ಮೀಟರ್ ಅಂತರದಲ್ಲಿ ಸಮುದ್ರದಲ್ಲಿ ನಿರ್ಮಾಣ ಮಾಡಲಾಗುವುದು. ಬಂದರು ನಿರ್ಮಾಣದ ನಂತರ ಧಕ್ಕೆಯನ್ನು(Berth) ಹೊರತುಪಡಿಸಿ ಉಳಿದ ಭಾಗದಲ್ಲಿ ಮೀನುಗಾರಿಕೆಗೆ ಅವಕಾಶ, ಹಡಗಿನ ಸಂಚಾರ ಹೊರತುಪಡಿಸಿ ಅಗತ್ಯವಿದ್ದಲ್ಲಿ ಮೀನುಗಾರಿಕೆಗೆ ಅವಕಾಶ. ಕೇಣಿ ಬಂದರು ನಿರ್ಮಾಣದ ಬಳಿಕ ಸರಕು ಸಾಗಣೆ ವೇಳೆ ಈ ಭಾಗದಲ್ಲಿ ಸಮುದ್ರ ಮಾಲಿನ್ಯ ನಡೆಯುವುದು ಸಹಜ ಎಂದು ಯೋಜನೆಗೆ ಸಂಬಂಧಿಸಿದ ಪರಿಸರ ಪರಿಣಾಮ ಮೌಲ್ಯಮಾಪನ ವರದಿಯಲ್ಲಿ (ಇಐಎ) ಉಲ್ಲೇಖಿಸಲಾಗಿದೆ.
ವಾರ್ಷಿಕವಾಗಿ 3.4 ಕೋಟಿ ಟನ್ ಕಲ್ಲಿದ್ದಲು, 80 ಲಕ್ಷ ಟನ್‌ಗಳಷ್ಟು ಲೈಮ್ ಸ್ಟೋನ್, ಡೋಲೊಮೈಟ್, ಬೆಂಟೋಮೈಟ್‌ಗಳ ಸಾಗಾಟ ನಡೆಯಲಿದೆ. ತಲಾ 30 ಲಕ್ಷ ಟನ್ ಸಿಮೆಂಟ್ ಕ್ಲಿಂಕರ್ ಮತ್ತು ಹಾರುಬೂದಿ, ಬಾಕ್ಸೆಟ್ ಮುಂತಾದ ಅದಿರುಗಳನ್ನು ಸಾಗಿಸಲಾಗುತ್ತದೆ. ಇದಲ್ಲದೇ ದ್ರವರೂಪದ ಸರಕುಗಳು, ಆಹಾರ ಸಾಮಗ್ರಿಗಳೂ ಇದೇ ಬಂದರು ಮೂಲಕ ಆಮದಾಗಲಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಹಡಗು, ಇತರ ಸರಕು ಸಾಗಣೆ ವಾಹನಗಳಿಂದ ಹೊರಸೂಸುವ ತೈಲ, ಹೊಗೆಗಳಿಂದ ಪರಿಸರದ ಮೇಲೆ ಪರಿಣಾಮ ಬೀರುವುದು ಸಹಜ. ಆದರೆ, ಅವುಗಳನ್ನು ಸಾಧ್ಯವಾದಷ್ಟು ನಿಯಂತ್ರಿಸಲು ಮಾರ್ಗೋಪಾಯಗಳನ್ನು ಕೈಗೊಳ್ಳಲು ಸಲಹೆಗಳನ್ನೂ ವರದಿಯಲ್ಲಿ ನೀಡಲಾಗಿದೆ.
ಬಂದರು ಯೋಜನೆ ಜಾರಿಯಿಂದ ಆಗುವ ಸಮಸ್ಯೆ ಏನು?
ಯೋಜನೆ ಜಾರಿಯಿಂದ 103 ಗ್ರಾಮದ ಎರಡು ಸಾವಿರಕ್ಕೂ ಹೆಚ್ಚು ಕುಟುಂಬಗಳು ನೆಲೆ ಕಳೆದುಕೊಳ್ಳುತ್ತದೆ. ಸಾಂಪ್ರದಾಯಿಕ ಮೀನುಗಾರಿಕೆಗೆ ಹೊಡೆತ ಬೀಳಲಿದೆ. ಪರ್ಯಾಯ ವ್ಯವಸ್ಥೆಗೆ ಯಾವುದೇ ನಿಯಮ ಜಾರಿ ಮಾಡದೇ ನಿರ್ಲಕ್ಷ್ಯ ಮಾಡಿರುವುದು. ಜೀವವೈವಿಧ್ಯ ಸಂಕುಲ ನಾಶವಾಗುವ ಆತಂಕ. ಈಗಾಗಲೇ ಕೇಣಿ ಬಳಿಯೇ ಬೇಲಿಕೇರಿ ಬಂದರು ಇದ್ದು, ಇದರ ನಂತರ 35 ಕಿಲೋಮೀಟರ್ ದೂರದ ಕಾರವಾರದಲ್ಲಿ ಸಹ ವಾಣಿಜ್ಯ ಬಂದರು ಇದ್ದು, ಅಲ್ಲಿಯೂ ಅವಕಾಶ ಇದ್ದರೂ ಹೊಸದಾಗಿ ಕೇಣಿಯಲ್ಲಿ ಮಾಡುವುದರಿಂದ ಜನವಸತಿ ಪ್ರದೇಶ ಹಾಗೂ ಸ್ಥಳೀಯ ಉದ್ಯೋಗಕ್ಕೆ ಹೊಡೆತ ಬೀಳುವ ಆತಂಕ ಇದೆ.
ಸಿಆರ್‌ಝಡ್ ನಿಯಮ ಉಲ್ಲಂಘನೆಯ ಆರೋಪ
ಅಂಕೋಲದ ಕೇಣಿ ಬಂದರು ಯೋಜನೆ ಜಾರಿಯಾದಲ್ಲಿ ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್) ಕಾಯ್ದೆಯ ಸಂಪೂರ್ಣ ಉಲ್ಲಂಘನೆ ಆಗಲಿದೆ. ಯೋಜನೆಗೆ ಸಮುದ್ರದಲ್ಲಿನ 4.44 ಕೋಟಿ ಘನ ಮೀಟರ್‌ಗಳಷ್ಟು ಮಣ್ಣು ತೆಗೆಯಲಾಗುತ್ತದೆ. ಹಡಗುಗಳ ಸಂಚಾರಕ್ಕಾಗಿ ಸಮುದ್ರದಲ್ಲಿ 10 ಕಿ.ಮೀ ದೂರದವರೆಗೆ ಬೃಹತ್ ಯಂತ್ರಗಳ ಮೂಲಕ ಹೂಳೆತ್ತುವ ಕಾಮಗಾರಿ ನಡೆಯಲಿದೆ. ಇದು ಜಲಚರಗಳ ನಾಶಕ್ಕೆ ಕಾರಣವಾಗಲಿದೆ. ಜೊತೆಗೆ ಯೋಜನೆಗೆ ನಿರ್ಮಿಸುವ ಅಲೆ ತಡೆಗೋಡೆಗಳಿಂದ ಕಡಲು ಕೊರೆತದ ಸಮಸ್ಯೆ ಹೆಚ್ಚಲಿದೆ. ಇವೆಲ್ಲವೂ ಸಿಆರ್‌ಝಡ್ ಕಾಯ್ದೆಯ ಉಲ್ಲಂಘನೆ ಆಗಲಿದೆ ಎಂದು ಪರಿಸರ ವಿಜ್ಞಾನಿ ಮಹಾಬಲೇಶ್ವರ ಭಟ್ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.
ಯೋಜನೆ ವ್ಯಾಪ್ತಿಯ ಪ್ರದೇಶದಲ್ಲಿ ಕಾಂಡ್ಲಾ, ಮರಳುಗುಡ್ಡಗಳು, ಸಸ್ಯ ಮತ್ತು ಜೀವವೈವಿಧ್ಯ ಇಲ್ಲ. ಸಂವೇದನಾಶೀಲ ಪರಿಸರ ವ್ಯವಸ್ಥೆ ಇಲ್ಲದ ಕಾರಣ ಈ ಪ್ರದೇಶವು ಸಿಆಝಡ್‌ನ ಮೊದಲ ಹಂತದ ಪ್ರದೇಶಕ್ಕೆ ಸೇರುವುದಿಲ್ಲ ಎಂದು ಇಐಎ ವರದಿಯಲ್ಲಿ ಉಲ್ಲೇಖಿಸಿರುವುದು ಸರಿಯಲ್ಲ, ಪರಿಸರ, ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಕಡಲ ಜೀವ ವಿಜ್ಞಾನಿ ವಿಎನ್ ನಾಯ್ಕ ವಿರೋಧಿಸಿದ್ದಾರೆ.
ಕೊನೆಗೂ ಸಾರ್ವಜನಿಕ ಅಹವಾಲು ಸಭೆ ಆಯೋಜನೆ
2023 ರಲ್ಲಿಯೇ ರಾಜ್ಯ ಸರ್ಕಾರ ಕೇಣಿ ಬಂದರು ಯೋಜನೆ ಒಡಂಬಡಿಕೆ ಮಾಡಿಕೊಂಡಿದ್ದರೂ ಪಬ್ಲಿಕ್ ಹಿಯರಿಂಗ್ ಕರೆಯದೇ ಸರ್ವೆ ಕಾರ್ಯ ಸಹ ಮಾಡಿತ್ತು.