ನವದೆಹಲಿ/ಬೆಂಗಳೂರು: ಕನ್ನಡ ಜ್ಞಾನ ದಾಸೋಹಿ, ಪುಸ್ತಕ ಭಂಡಾರ ಸೃಷ್ಟಿಸಿದ ಮಂಡ್ಯ ಜಿಲ್ಲೆಯ ಅಂಕೇಗೌಡ (Anke Gowda) ಅವರು ಈ ಬಾರಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ (Literature and Education field) 2026 ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಯನ್ನ ಘೋಷಣೆ ಮಾಡಲಾಗಿದೆ. ಇದನ್ನೂ ಓದಿ: ಬೆಂಗಳೂರಿನ ಸಮಾಜ ಸೇವಕಿ ಡಾ. ಎಸ್.ಜಿ. ಸುಶೀಲಮ್ಮಗೆ ಪದ್ಮಶ್ರೀ ಪ್ರಶಸ್ತಿ
#WATCH | Padma Awards: Anke Gowda from Karnataka will be conferred the Padma Shri 2026 in the field of Literature and Education, as per sources
This year’s Padma Awards recognise a wide spectrum of unsung heroes from across the length and breadth of India. These include… pic.twitter.com/j6SaAleqST
— ANI (@ANI) January 25, 2026
ಮಂಡ್ಯ (Mandya) ಜಿಲ್ಲೆಯ ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದ ಅಂಕೇಗೌಡರು, ದೊಡ್ಡ ಜ್ಞಾನ ಭಂಡಾರವನ್ನೇ ಸೃಷ್ಟಿಸಿದ್ದಾರೆ. ಪಾಂಡವಪುರದಿಂದ ಕೇವಲ ಒಂದು ಕಿಲೋ ಮೀಟರ್ ದೂರದ ಹರಳಹಳ್ಳಿಯಲ್ಲಿ ಪುಸ್ತಕದ ಮನೆ ನಿರ್ಮಾಣ ಮಾಡಿದ್ದು, ಇಲ್ಲಿ ಲಕ್ಷಗಟ್ಟಲೆ ಪುಸ್ತಕಗಳ ಸಂಗ್ರಹವಿದೆ. ಒಂದೊಂದೇ ಪುಸ್ತಕ ಸಂಗ್ರಹ ಮಾಡುತ್ತಾ ದೊಡ್ಡ ಸಂಗ್ರಹಾಲಯವನ್ನೇ ತೆರೆದಿದ್ದಾರೆ. ಇಲ್ಲಿಗೆ ಯಾರೇ ಬಂದರೂ, ಯಾವುದೇ ವಿಷಯದ ಪುಸ್ತಕಗಳನ್ನ ನೋಡಬಹುದು, ಓದಬಹುದು. ವಿಶ್ವದ ಎಲ್ಲಾ ಪ್ರಮುಖ ಗ್ರಂಥಗಳು ಒಂದೇ ಸೂರಿನಡಿ ಓದಲು ಸಿಗುವುದು ಈ ಪುಸ್ತಕ ಮನೆಯ ವಿಶೇಷ.
ಜ್ಞಾನ ದಾಸೋಹಿಯ ʻಪುಸ್ತಕ ಪ್ರೇಮʼ ಹುಟ್ಟಿದ್ದು ಹೇಗೆ?
ಅಂಕೇಗೌಡರ ಪುಸ್ತಕ ಪ್ರೀತಿಗೆ ಕಾರಣವಾಗಿದ್ದು ಶಾಲಾ ಗ್ರಂಥಾಲಯ. ಶಾಲಾ ದಿನಗಳಲ್ಲಿ ಪುಸ್ತಕಕ್ಕಾಗಿ ಗ್ರಂಥಾಲಯಕ್ಕೆ ಹೋದ ಅಂಕೇಗೌಡರಿಗೆ ಶಿಕ್ಷಕರು ಹೇಳಿದ ಆ ಮಾತು. ಇಂದು ವಿಶ್ವದ ದೊಡ್ಡ ಖಾಸಗಿ ಗ್ರಂಥಾಲಯ ನಿರ್ಮಾಣಕ್ಕೆ ಕಾರಣವಾಗಿದೆ. ಶಾಲಾ ದಿನಗಳಲ್ಲಿ ಪುಸ್ತಕಗಳನ್ನ ಮನೆಗೆ ಕೊಡದ ಹಿನ್ನೆಲೆ, ಪುಸ್ತಕ ಸಂಗ್ರಹ ಹಾಗೂ ಖರೀದಿಗೆ ಮುಂದಾದ ಅಂಕೇಗೌಡರು, ಇಂದು ದೊಡ್ಡ ಜ್ಞಾನ ಭಂಡಾರವನ್ನೇ ಸೃಷ್ಟಿಸಿದ್ದಾರೆ.

ಈಗಾಗಲೇ ಈ ಪುಸ್ತಕದ ಮನೆಯು ಲಿಮ್ಕಾ ಬುಕ್ ಆಫ್ ರೆಕಾರ್ಡ್‌ಗೆ ಸೇರಿಕೊಂಡಿದ್ದು, ಪ್ರತಿಯೊಂದು ಪುಸ್ತಕವೂ ಮೌಲ್ಯಯುತವಾಗಿವೆ. ಸಣ್ಣ ಕಟ್ಟಡದಲ್ಲೇ ಮೊದ ಮೊದಲು ಪುಸ್ತಕ ಮನೆಯನ್ನ ಆರಂಭಿಸಲಾಗಿತ್ತು. ಈಗ ಉದ್ಯಮಿ ಹರಿಕೋಡೆ ಕಟ್ಟಿಕೊಟ್ಟ ಕಟ್ಟಡ ಈ ಮನೆಗೆ ಮತ್ತೊಂದು ಆಯಾಮ ನೀಡಿದೆ. ಅಂಕೇಗೌಡರ ಈ ದೊಡ್ಡ ಸಾಧನೆಗೆ ಅವರ ಪತ್ನಿಯ ಸಹಕಾರವೂ ಇದೆ. ಪುಸ್ತಕಗಳ ಜೋಡಿಸುವಿಕೆಯಿಂದ ಹಿಡಿದು ಸ್ವಚ್ಛತಾ ಕಾರ್ಯದಲ್ಲೂ ಕೈಜೋಡಿಸಿ ಪತಿಯ ಕಾರ್ಯಕ್ಕೆ ಅವರು ಸಹಕಾರ ನೀಡುತ್ತಾ ಬಂದಿದ್ದಾರೆ.
ಒಮ್ಮೆ ಈ ಪುಸ್ತಕದ ಮನೆಗೆ (Pustaka Mane) ನೀವು ಕಾಲಿಟ್ಟರೆ ಸಾಕು ಪುಸ್ತಕ ಲೋಕವೇ ನಿಮ್ಮ ಕಣ್ಣ ಮುಂದೆ ಬಂದು ಬಿಡುತ್ತದೆ. ಹೊಟ್ಟೆಯ ಹಸಿವಿಗಿಂತ ಜ್ಞಾನದ ಹಸಿವು ನಿಮ್ಮನ್ನು ಕೈಬೀಸಿ ಕರೆಯುತ್ತದೆ. ಪಾಂಡವಪುರ-ಶ್ರೀರಂಗಪಟ್ಟಣ ಹೆದ್ದಾರಿಯಲ್ಲಿ ಹೋದರೆ ನಿಮ್ಮನ್ನು ಸೂಜಿಗಲ್ಲಿನಂತೆ ಸೆಳೆಯಲಿದೆ ಈ ಪುಸ್ತಕದ ಮನೆ.

ಪುಸ್ತಕ ಪ್ರೇಮವು ಇಂದು ಅಂಕೇಗೌಡರನ್ನು ಎತ್ತರದ ಸ್ಥಾನದಲ್ಲಿಟ್ಟಿದೆ. ಅಂಕೇಗೌಡರು ಎಂದರೆ ಪುಸ್ತಕ ಮನೆ ಎನ್ನುವಂತೆ ಗುರುತಿಸುವಂತಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಇಂತಹ ಒಂದು ಗ್ರಂಥಾಲಯವನ್ನ ಹುಟ್ಟು ಹಾಕಿದ ಇವರ ಈ ಸಾಧನೆಗೆ ಈಗ ಸರ್ಕಾರ ಮೆಚ್ಚಿ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿದೆ.

