ಚಿತ್ರದುರ್ಗ: ಕರ್ನಾಟಕದಲ್ಲಿ ಬಿಜೆಪಿ ಅಸ್ತಿತ್ವ ಕಳೆದುಕೊಳ್ಳುವ ಅಂಚಿನಲ್ಲಿರುವುದರಿಂದ ಅಮಿತ್ ಶಾರನ್ನು ಕರೆಸಿ ರಾಜ್ಯ ನಾಯಕರು ಇಮೇಜ್ ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆಂದು ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ಲೇವಡಿ ಮಾಡಿದ್ದಾರೆ.
ಚಿತ್ರದುರ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪರಿವರ್ತನಾ ರ್ಯಾಲಿ ವೇಳೆ ರಾಜ್ಯದ ಮುಖ್ಯ ಮಂತ್ರಿಗಳ ಬಗ್ಗೆ ಅಸಭ್ಯವಾಗಿ ಮಾತನಾಡಿರುವುದು, 6.5 ಕೋಟಿ ಕನ್ನಡಿಗರಿಗೆ ಅವಮಾನ ಮಾಡಿದಂತಾಗಿದೆ. ಹೀಗಾಗಿ ಅವರು ಬಾಯಿಗೆ ಬಂದಂತೆ ಮಾತನಾಡುವುದನ್ನು ಬಿಟ್ಟು ಅವರು ಸಭ್ಯತೆಯಿಂದ ವರ್ತಿಸಬೇಕು ಎಂದ್ರು.
Advertisement
Advertisement
ರಾಜ್ಯೋತ್ಸವವನ್ನು ನಾವು ಸಂಭ್ರಮದಿಂದ ಆಚರಣೆ ಮಾಡಿದ್ದೇವೆ. ಅದೇ ರೀತಿ ಟಿಪ್ಪು, ಕಿತ್ತೂರು ರಾಣಿ ಚೆನ್ನಮ್ಮ ಹಾಗು ಕನಕದಾಸರು ಸೇರಿದಂತೆ ವಿವಿಧ ದಾರ್ಶನಿಕರ ಜಯಂತಿ ಆಚರಣೆ ಮಾಡುವ ಮೂಲಕ, ಅವರ ಚರಿತ್ರೆಯನ್ನು ಇಂದಿನ ಯುವ ಪೀಳಿಗೆಗೆ ತಲುಪಿಸುವ ಕೆಲಸ ಮಾಡುತ್ತೇವೆ. ಆದ್ರೆ ಬಿಜೆಪಿಯವರಿಗೆ ಟಿಪ್ಪು ಕಂಡ್ರೆ ಯಾಕೆ ಭಯ ಎಂಬುದು ಗೊತ್ತಿಲ್ಲ. ಈ ಹಿಂದೆ ಟಿಪ್ಪು ವೇಷ ಧರಿಸಿ ಹಾಡಿ ಹೊಗಳಿದ್ದ ಬಿಜೆಪಿಯವರು ಚುನಾವಣೆಯ ಸಮಯದಲ್ಲಿ ಒಂದು ಕೋಮಿನ ನಾಯಕರ ಹೋರಾಟಗಾರರ ಬಗ್ಗೆ ಅವಹೇಳನ ಮಾಡುವುದು ಸರಿಯಲ್ಲ ಎಂದ್ರು.