ಕೊಪ್ಪಳ: ಪೌರಾಣಿಕ ಪ್ರಸಿದ್ಧ ಹನುಮ ಜನ್ಮಸ್ಥಳ ಅಂಜನಾದ್ರಿ ಬೆಟ್ಟದಲ್ಲಿ ಡಿ.12 ಮತ್ತು 13 ರಂದು ನಡೆಯಲಿರುವ ಹನುಮಮಾಲೆ ವಿಸರ್ಜನೆ ಕಾರ್ಯಕ್ರಮಕ್ಕೆ ಕೆಲವೇ ಗಂಟೆಗಳು ಮಾತ್ರ ಬಾಕಿ ಇದೆ. ಭಕ್ತರ ಸ್ವಾಗತಕ್ಕೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಕಿಷ್ಕಿಂಧ ಪ್ರದೇಶ ಮದುವೆ ಮನೆಯಂತೆ ಸಿದ್ಧಗೊಂಡಿದೆ.
ಹನುಮ ಮಾಲೆ ಧರಿಸಿ, ವ್ರತ ಕೈಗೊಂಡಿರುವ ರಾಜ್ಯಾದ್ಯಂತ ನಾನಾ ಭಾಗದ ಲಕ್ಷಂತರ ಭಕ್ತರು, ಈಗಾಗಲೇ ಅಂಜನದ್ರಿ ಕಡೆ ಮುಖ ಮಾಡಿದ್ದಾರೆ. ಡಿ.12ರ ಸಂಜೆ ವೇಳೆ ಬಹುತೇಕರು ಗಂಗಾವತಿ, ಹುಲಗಿ ತಲುಪಲಿದ್ದಾರೆ. ಈ ಹಿನ್ನೆಲೆ ಕೊಪ್ಪಳ ಜಿಲ್ಲಾಡಳಿತ ಎಲ್ಲ ಸಿದ್ಧತೆ ಕೈಗೊಂಡಿದೆ. ಎಡಿಸಿ ಸಿದ್ದರಾಮೇಶ್ವ ಮತ್ತು ಎಸಿ ಕ್ಯಾ.ಮಹೇಶ ಮಾಲಗಿತ್ತಿ ಖುದ್ದು ಭೇಟಿ ನೀಡಿ, ಸಿದ್ಧತೆ ಪರಿಶೀಲನೆ ಮಾಡುತ್ತಿದ್ದಾರೆ. ವ್ಯವಸ್ಥೆಯಲ್ಲಿ ಯಾವುದೇ ರೀತಿಯಲ್ಲಿ ನಿರ್ಲಕ್ಷ ಕಾಣಬಾರದು ಎನ್ನುವ ಉದ್ದೇಶದಿಂದ ಜಿಲ್ಲಾಧಿಕಾರಿ 14 ಸಮಿತಿ ರಚನೆ ಮಾಡಿ, ಅಧಿಕಾರಿಗಳಿಗೆ ನಿರ್ವಹಣೆಯ ಹೊಣೆ ನೀಡಲಾಗಿದೆ.
Advertisement
ರಸ್ತೆ ಮತ್ತು ಪಾರ್ಕಿಂಗ್ ಸ್ಥಳಗಳ ಸ್ವಚ್ಛತೆ, ಪಾದಚಾರಿ ಮಾರ್ಗದ ನಿರ್ಮಾಣ, ಭಕ್ತರಿಗೆ ಕುಡಿಯುವ ಮತ್ತು ಸ್ನಾನದ ನೀರಿಗೆ ವ್ಯವಸ್ಥೆ ಮಾಡಲಾಗಿದೆ. ನೂರಾರು ನೀರಿನ ಟ್ಯಾಪ್ ಅಳವಡಿಸಲಾಗುತ್ತಿದೆ. ಅಂಜನಾದ್ರಿಗೆ ಬರುವ ಭಕ್ತರಿಗೆ ಪ್ರಸಾದ ವಿತರಣೆಗೂ ವ್ಯವಸ್ಥೆ ಮಾಡಲಾಗಿದೆ. ಬೆಟ್ಟದ ಹಿಂಭಾಗದ ವೇದಪಾಠ ಶಾಲೆ ಸಮೀಪದ ಕೋಣೆಯಲ್ಲಿ ಸಾವಿರಾರು ಲಾಡುಗಳು ಪ್ರಸಾದಕ್ಕೆ ಸಿದ್ಧಗೊಳುತ್ತಿವೆ. ಉಪಹಾರ, ಊಟದ ಜೊತೆಗೆ ಪ್ರಾಥಮಿಕ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಭಕ್ತರ ಅನುಕೂಲಕ್ಕೆ ಸಹಾಯವಾಣಿ ತೆರೆಯಲಾಗಿದೆ.
Advertisement
ಪಾರ್ಕಿಂಗ್ ವ್ಯವಸ್ಥೆ: ರಾಜ್ಯದ ನಾನಾ ಭಾಗದಿಂದ ಲಕ್ಷಕ್ಕೂ ಹೆಚ್ಚು ಮಾಲಾಧಾರಿಗಳು ಬರುವ ನಿರೀಕ್ಷೆ ಹಿನ್ನೆಲೆ ಸುಗಮ ಸಂಚಾರಕ್ಕೆ ಸುಮಾರು 20 ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಆನೆಗೊಂದಿ, ಉತ್ಸವ ಬಯಲು, ಚಿಕ್ಕರಾಂಪೂರ, ಕಡೆಬಾಗಿಲು, ಹನುಮನಹಳ್ಳಿ, ಆನೆಗೊಂದಿ ಗ್ರಾಮ ಜಮೀನು ಸೇರಿ 20 ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಬಾಗಲಕೋಟೆ, ಹುಬ್ಬಳ್ಳಿ, ಗದಗ, ಬೆಳಗಾವಿ ಭಾಗಗಳಿಂದ ಬೂದಗುಂಪ ಸರ್ಕಲ್, ಕೊಪ್ಪಳ ಮಾರ್ಗವಾಗಿ ಬರುವ ಮಾಲಾಧಾರಿಗಳು ಕಮಾಲಾಪೂರ, ಬುಕ್ಕಸಾಗರ, ಕಡೆಬಾಗಿಲು ಮಾರ್ಗವಾಗಿ ಬರಬೇಕು. ಕುಲಬುರ್ಗಿ, ಯಾದಗಿರಿ, ರಾಯಚೂರು ಜಿಲ್ಲೆಗಳಿಂದ ಸಿಂಧನೂರ, ಮಸ್ಕಿ, ಕನಕಗಿರಿ ಮಾರ್ಗವಾಗಿ ಬರುವ ಮಾಲಾಧಾರಿಗಳು ಗಂಗಾವತಿ ಕಡೆಯಿಂದ ಆನೆಗೊಂದಿಗೆ ತೆರಳಬೇಕು. ಹಿಟ್ನಾಳ ಸರ್ಕಲ್‌ನಿಂದ ಬಂಡಿ ಹರ್ಲಾಪೂರ, ಸಣಾಪೂರ ಗ್ರಾಮಗಳಲ್ಲಿ ರಸ್ತೆ ಕಾಮಗಾರಿ ಹಿನ್ನೆಲೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.
Advertisement
ಜಲಾಭಿಷೇಕ, ಧಾರ್ಮಿಕ ಕಾರ್ಯಕ್ರಮ!
ಅಂಜನಾದ್ರಿ ಬೆಟ್ಟದಲ್ಲಿನ ಹನುಮ ಜನ್ಮಸ್ಥಳದಲ್ಲಿ ಡಿ.13 ರಂದು ಬೆಟ್ಟದ ಮೇಲಿನ ಹನುಮನ ಮೂರ್ತಿಗೆ 9 ನದಿ ನೀರಿನ ಜಲಾಭಿಷೇಕ ಕಾರ್ಯಕ್ರಮ ನಡೆಯಲಿದೆ. ಪ್ರತಿ ವರ್ಷ ಚಾತುರ್ಮಾಸದಲ್ಲಿ ಹನುಮ ಭಕ್ತರು ಮಾಲೆ ಧಾರಣೆ ಮಾಡಿ, ವ್ರತ ಕೈಗೊಳ್ಳುತ್ತಾರೆ. ವ್ರತದ ಕೊನೆ ದಿನ ಅಂದರೆ ಡಿ.13 ರಂದು ಮಾಲಾಧಾರಿಗಳು ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಿ, ವಿಸರ್ಜನೆ ಮಾಡುತ್ತಾರೆ. ಈ ಚಾತುರ್ಮಾಸದಲ್ಲೇ ರಾಮ ಹಾಗೂ ಹನುಮಂತ ತಪ್ಪಸ್ಸು ಕಳಿತಿದ್ದರು ಎಂಬ ನಂಬಿಕೆ ಇದೆ.
Advertisement
ಈ ಹಿನ್ನೆಲೆ ಡಿ.13 ರಂದು ಅಂಜನಾದ್ರಿ ಬೆಟ್ಟ ಹನುಮನ ಮೂರ್ತಿಗೆ ಪಂಚಾಮೃತ ಅಭಿಷೇಕ, 9 ನದಿಗಳ ನೀರಿನ ಜಲಾಭಿಷೇಕ, ಸಹಸ್ರನಾಮ ಪಠಣ, ಕುಂಕುಮಾರ್ಚನೆ, ಮಹಾಮಂಗಳಾರತಿ, ಪವನ ಹೋಮ, ಶ್ರೀರಾಮನಾಮ ಪಠಣ, ಮಾಲೆ ಧರಿಸಿದ ಗುರುಗಳಿಂದ ಹನುಮಮಾಲೆ ವಿಸರ್ಜನೆ ಸೇರಿದಂತೆ ನಾನಾ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಲಿವೆ.
ಶೋಭಾಯಾತ್ರೆ
ಭಜರಂಗದಳ, ವಿಶ್ವ ಹಿಂದೂ ಪರಿಷತ್ ಸಂಘಟನೆಯಿಂದ ಶೋಭಾಯಾತ್ರೆ ಹಾಗೂ ಧಾರ್ಮಿಕ ಸಭೆ ನಡೆಯಲಿದೆ. ಡಿ.12 ರಂದು ಗಂಗಾವತಿ ನಗರಕ್ಕೆ ಬರುವ ಭಕ್ತರು ನಗರದಲ್ಲಿ ಶೋಭಾಯಾತ್ರೆ ಮೂಲಕ ಬೆಟ್ಟಕ್ಕೆ ತೆರಳಲಿದ್ದಾರೆ. ಬೆಟ್ಟಕ್ಕೆ ಬರುವ ಭಕ್ತರಿಗೆ ಪ್ರಸಾದ್ ರೂಪದಲ್ಲಿ ನೀಡಲು 50 ಸಾವಿರ ಲಾಡು, ತೀರ್ಥ ಬಾಟಲಿಗಳನ್ನು ಸಿದ್ಧ ಪಡಿಸಲಾಗುತ್ತಿದೆ.