– ಜಿಲ್ಲಾಧಿಕಾರಿ ವಿರುದ್ಧ ಗಂಭೀರ ಆರೋಪ ಮಾಡಿದ್ದ ಬಾಬಾ
ಕೊಪ್ಪಳ: ಕೊಪ್ಪಳ ಜಿಲ್ಲಾಧಿಕಾರಿ ಸುನಿಲ್ ಕುಮಾರ್ ಅವರ ವಿರುದ್ಧ ಇಲ್ಲ ಸಲ್ಲದ ಗಂಭೀರ ಆರೋಪ ಮಾಡಿದ್ದ ಅಂಜನಾದ್ರಿ ದೇಗುಲದ ಮಾಜಿ ಪ್ರಧಾನ ಅರ್ಚಕ ಮಹಾಂತ ವಿದ್ಯಾದಾಸ ಬಾಬಾರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಭಕ್ತರೊಬ್ಬರ ನಿವಾಸದಲ್ಲಿದ್ದ ಬಾಬಾ ಅವರನ್ನು ಪತ್ತೆ ಹಚ್ಚಿದ ಪೊಲೀಸರು ಬಳಿಕ ಸಂಪರ್ಕಿಸಿದ್ದಾರೆ. ಮೊದಲಿಗೆ ಪ್ರತಿರೋಧ ತೋರಿದ ಬಾಬಾ ಬಳಿಕ ಗಂಗಾವತಿ ಗ್ರಾಮೀಣ ಠಾಣೆಯ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾರೆ. ಬಂಧಿತ ಬಾಬಾರನ್ನು ಪೊಲೀಸರು ಗಂಗಾವತಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ವಿಚಾರಣೆ ನಡೆಸಿದ ಕೋರ್ಟ್ ನ್ಯಾಯಾಂಗದ ಬಂಧನದಲ್ಲಿ ಒಪ್ಪಿಸಿದೆ. ಇದನ್ನೂ ಓದಿ: ಮುಜರಾಯಿ ಇಲಾಖೆಯಿಂದ ಅಂಜನಾದ್ರಿ ದೇವಸ್ಥಾನ ಮರಳಿ ಪಡೆಯಲು ಷಡ್ಯಂತ್ರ
ಬಾಬಾರನ್ನು ಬಂಧಿಸಿ ನ್ಯಾಯಾಲಯಕ್ಕೆ ಕಳಿಸಿದ್ದನ್ನು ಡಿವೈಎಸ್‍ಪಿ ಡಾ. ಬಿ.ಪಿ.ಚಂದ್ರಶೇಖರ್ ದೃಢಪಡಿಸಿದ್ದಾರೆ. ಜನವರಿ 17ರಂದು ಬಾಬಾ ಮೊದಲ ಬಾರಿಗೆ ಜಿಲ್ಲಾಧಿಕಾರಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ಬಗ್ಗೆ ತಹಸೀಲ್ದಾರ್ ಚಂದ್ರಕಾಂತ್ ಜನವರಿ 20ರಂದು ದೂರು ದಾಖಲಿಸಿದ್ದರು. ಆದರೆ ಮತ್ತೆ ಫೇಸ್‍ಬುಕ್‍ನಲ್ಲಿ ಪ್ರತ್ಯಕ್ಷರಾದ ಬಾಬಾ ಸುಮಾರು ಹತ್ತು ನಿಮಿಷಕಾಲ ಲೈವ್‍ಗೆ ಬಂದು ಮತ್ತೆ ಜಿಲ್ಲಾಧಿಕಾರಿ ವಿರುದ್ಧ ಗಂಭೀರ ಸ್ವರೂಪದ ಆರೋಪಗಳನ್ನು ಮಾಡಿದ್ದರು. ಇದರಿಂದ ಆಕ್ರೋಶಗೊಂಡ ಸರ್ಕಾರಿ ನೌಕರರು ಜಿಲ್ಲಾಧಿಕಾರಿ ಪರವಹಿಸಿ ಕೊಪ್ಪಳದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಬಾಬಾ ಅವರನ್ನು ಬಂಧಿಸುವಂತೆ ಒತ್ತಾಯಿಸಿದ್ದರು.