ಪಣಜಿ: ಮೂಲತಃ ವೈದ್ಯೆಯೂ ಆಗಿರುವ ಖಾನಾಪುರದ ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ (Anjali Nimbalkar) ವಿಮಾನದಲ್ಲೇ ಅಮೆರಿಕ ಯುವತಿಯೊಬ್ಬರ ಜೀವ ಉಳಿಸಿದ ಘಟನೆ ನಡೆದಿದೆ.
ಹೌದು. ಗೋವಾದಿಂದ (Goa) ದೆಹಲಿಗೆ ಹೊರಟಿದ್ದ ವಿಮಾನದಲ್ಲಿ (Delhi Flight) ಅಂಜಲಿ ನಿಂಬಾಳ್ಕರ್ ಪ್ರಯಾಣ ಬೆಳೆಸಿದ್ದರು. ಇದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಅಮೆರಿಕ ಮೂಲದ ಯುವತಿಗೆ ಇದ್ದಕ್ಕಿದ್ದಂತೆ ಕೈ-ಕಾಲುಗಳಲ್ಲಿ ನಡುಕ ಉಂಟಾಗಿತ್ತು, ಕೆಲವೇ ಕ್ಷಣದಲ್ಲಿ ಆಕೆ ಮೂರ್ಛೆ ಹೋಗಿದಳು, ನಾಡಿ ಮಿಡಿತ ಕೂಡ ನಿಂತುಹೋಗಿರುವುದು ಕಂಡುಬಂದಿತ್ತು.
ಸನ್ನಿವೇಶ ಗಮನಿಸಿದ ಅಂಜಲಿ ನಿಂಬಾಳ್ಕರ್ ಅವರು ಕೂಡಲೇ ಯುವತಿಗೆ ಪ್ರಥಮ ಚಿಕಿತ್ಸೆ ನೀಡಿ ಜೀವ ಉಳಿಸಲು ನೆರವಾದರು. ಶ್ವಾಸಕೋಶದ ಮೇಲೆ ಎರಡೂ ಕೈಗಳನ್ನಿಟ್ಟು ಪಂಪ್ ಮಾಡಿದರು. ಬಳಿಕ ಆಕೆ ಉಸಿರಾಡಲು ಶುರು ಮಾಡಿದಳು. ಇದಾದ ಅರ್ಧಗಂಟೆಯಲ್ಲೇ ಯುವತಿ ಮತ್ತೆ ಕುಸಿದುಬಿದ್ದಳು. ಆದ್ರೆ ಅಂಜಲಿ ನಿಂಬಾಳ್ಕರ್ ಅವರ ಪ್ರಯತ್ನದಿಂದಾಗಿ ಮತ್ತೆ ಜೀವ ಉಳಿಯಿತು.
ಅಷ್ಟೇ ಅಲ್ಲದೇ ವಿಮಾನ ದೆಹಲಿ ತಲುಪುವವರೆಗೂ ಆಕೆಯ ಪಕ್ಕದಲ್ಲೇ ಇದ್ದು ಆರೋಗ್ಯ ಸ್ಥಿತಿ ನೋಡಿಕೊಂಡರು. ವಿಮಾನ ದೆಹಲಿ ನಿಲ್ದಾಣ ತಲುಪುತ್ತಿದ್ದಂತೆ ಅಂಬುಲೆನ್ಸ್ ಸಿದ್ಧವಿದೆಯೇ ಎಂಬುದನ್ನ ಖಚಿತಪಡಿಸಿಕೊಂಡರಲ್ಲದೇ, ತಕ್ಷಣ ಆಕೆಯನ್ನ ಆಸ್ಪತ್ರೆ ಸಾಗಿಸಲು ನೆರವಾದರು.
ಅಂಜಲಿ ನಿಂಬಾಳ್ಕರ್ ಅವರ ಪ್ರಯತ್ನಕ್ಕೆ ಪೈಲಟ್ ಸೇರಿದಂತೆ ವಿಮಾನ ಸಿಬ್ಬಂದಿ ಹಾಗೂ ಸಹ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದರು.
ಅಂಜಲಿ ನಿಂಬಾಳ್ಕರ್ ಯಾರು?
ಅಂಜಲಿ ನಿಂಬಾಳ್ಕರ್ ಕಾಂಗ್ರೆಸ್‌ನ ಹಿರಿಯ ನಾಯಕಿ ಹಾಗೂ ರಾಜ್ಯ ಕಾಂಗ್ರೆಸ್ ವಕ್ತಾರರು. ಬೆಳಗಾವಿ ಜಿಲ್ಲೆಯ ಖಾನಾಪುರ ವಿಧಾನಸಭಾ ಕ್ಷೇತ್ರವನ್ನ ಪ್ರತಿನಿಧಿಸುತ್ತಿರುವ ಇವರು, 2018ರಲ್ಲಿ ಇಲ್ಲಿ ಗೆದ್ದು ಶಾಸಕಿಯಾಗಿದ್ದರು.
1976ರ ಆಗಸ್ಟ್ 22ರಂದು ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಹಿಂದೂ ಮರಾಠ ಕುಟುಂಬದಲ್ಲಿ ಅಂಜಲಿ ನಿಂಬಾಳ್ಕರ್ ಜನಿಸಿದರು. ಮಾಸ್ಟರ್ ಆಫ್ ಸರ್ಜರಿ, ಬ್ಯಾಚುಲರ್ ಆಫ್ ಮೆಡಿಸಿನ್, ಬ್ಯಾಚುಲರ್ ಆಫ್ ಸರ್ಜರಿ ಇವರ ವಿದ್ಯಾರ್ಹತೆ. ಇವರು ಸ್ತ್ರೀರೋಗ ಶಾಸ್ತ್ರ ಮತ್ತು ಲ್ಯಾಪ್ರೊಸ್ಕೋಪಿಯಲ್ಲಿ ಎಂಬಿಬಿಎಸ್ ಪದವಿಯ ಜೊತೆಗೆ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ. ವಿಧಾಸಭೆಗೆ ಈ ವರೆಗೆ ಆಯ್ಕೆಯಾದ ಹತ್ತು ವೈದ್ಯರಲ್ಲಿ ಇವರೂ ಒಬ್ಬರಾಗಿದ್ದಾರೆ.



