ಹುಬ್ಬಳ್ಳಿ: ಅಕ್ಕ ಅಂಜಲಿ ಅಂಬಿಗೇರ ಸಾವನ್ನು ಕಣ್ಣಾರೆ ಕಂಡು ಮನಸ್ಸಿಗೆ ಘಾಸಿಯಾಗಿದೆ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿರುವುದಾಗಿ ಸಹೋದರಿ ಯಶೋಧಾ ಹೇಳಿದ್ದಾರೆ.
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಬಂದ ಬಳಿಕ ಪ್ರತಿಕ್ರಿಯಿಸಿದ ಅವರು, ನನಗೆ ಪೊಲಿಸರ ಮೇಲೆ ನಂಬಿಕೆಗಿಂತ ನಿರಂಜನ ಹಾಗೂ ಅನೂಪ ಅಂಕಲ್ ಅವರ ಮೇಲೆ ಇದೆ. ಈಗಾಗಲೇ ಕೋರ್ಟ್ ಆರ್ಡರ್ ಬಂದಿದೆ ಅಂತ ಅವನಿಗೆ ಚಿಕಿತ್ಸೆ ಕೊಡ್ತಿದ್ದಾರಂತೆ. ಅವನು ನಮ್ಮ ಅಕ್ಕನ ಬಗ್ಗೆ ಕೆಟ್ಟ ಕೆಟ್ಟದಾಗಿ ಮಾತಾಡ್ತಿದ್ದಾನೆ. ಹಾಗಾಗಿ ಮನಸ್ಸಿಗೆ ನೋವಾಗಿದೆ. ಬರೀ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾನೆ. ಅವನಿಗೆ ಗಲ್ಲು ಶಿಕ್ಷೆ ಕೊಡಿ ಇಲ್ಲವೇ ಎನ್ ಕೌಂಟರ್ ಮಾಡಿ ಎಂದು ಆಗ್ರಹಿಸಿದರು.
- Advertisement
- Advertisement
ವೀರಾಪುರ ಓಣಿಯಲ್ಲಿ ಅಂಜಲಿ ಅಂಬಿಗೇರ (21) ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಆರೋಪಿ ಗಿರೀಶ್ ಅಲಿಯಾಸ್ ವಿಶ್ವ ಏಕಾಏಕಿ ಮನೆಗೆ ನುಗ್ಗಿದ್ದ. ಬಳಿಕ ಆಕೆಯ ಅಜ್ಜಿ ಮತ್ತು ಇಬ್ಬರು ಸಹೋದರಿಯರ ಮುಂದೆಯೇ ಅಂಜಲಿಯನ್ನ ಎಳೆದಾಡಿ ಚಾಕುವಿನಿಂದ ಚುಚ್ಚಿ ಭೀಕರವಾಗಿ ಹತ್ಯೆಗೈದಿದ್ದ. ಘಟನೆ ಸಂಬಂಧ ಶನಿವಾರ (ಮೇ 18) ಅಂಜಲಿ ಹತ್ಯೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅಂಜಲಿ ಸಹೋದರಿ ಯಶೋಧಾ, ಮನೆಗೆ ಮರಳಿದ ಬಳಿಕ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಅವರನ್ನು ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರತಿಭಟನೆ ವೇಳೆ ಸಹ ಯಶೋಧಾ ತೀವ್ರ ಅಸ್ವಸ್ಥಗೊಂಡಿದ್ದು, ಪ್ರಜ್ಞೆ ತಪ್ಪಿದ್ದರು ಎನ್ನಲಾಗಿತ್ತು.