ಚಾಮರಾಜನಗರ: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ನಡೆಸಿರುವ ನಿಖಿಲ್ ಕುಮಾರಸ್ವಾಮಿ ಅವರ ಗೆಲುವಿಗೆ ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಇಂದು ಯಾವುದೇ ಭದ್ರತೆ ಇಲ್ಲದೇ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿದ ಅನಿತಾ ಕುಮಾರಸ್ವಾಮಿ ಅವರು ಪುತ್ರ ನಿಖಿಲ್ ಹೆಸರಿನಲ್ಲಿ ಮಾದಪ್ಪನಿಗೆ ವಿಶೇಷ ಪೂಜೆ ಮತ್ತು ಅಭಿಷೇಕ ಮಾಡಿಸಿದರು. ಜಿಲ್ಲೆಯ ಹನೂರು ತಾಲೂಕಿನ ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟದಲ್ಲಿ ಪುತ್ರನ ಗೆಲುವಿಗಾಗಿ ದೇವರಿಗೆ ಹರಕೆ ಸಲ್ಲಿಸಿದರು.
ಇತ್ತ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿರುವ ನಿಖಿಲ್ ಅವರು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ, ಚುನಾವಣೆಯನ್ನು ಚುನಾವಣೆ ರೀತಿ ಎದುರಿಸಬೇಕೇ ವಿನಾ: ವೈಯಕ್ತಿಕ ಟೀಕೆಗಳಿಂದ ಅಲ್ಲ. ನಾನು ಚುನಾವಣೆಯನ್ನು ಅತ್ಯಂತ ನ್ಯಾಯಯುತ ಹಾಗೂ ಶಾಂತಿಯುತವಾಗಿ ಮಾಡಲು ಬಂದಿದ್ದೇನೆ. ಹೀಗಾಗಿ ಯಾರು ಏನು ಬೇಕಾದರು ಮಾತನಾಡಲಿ ನಾನು ಆ ಬಗ್ಗೆ ಏನು ಮಾತನಾಡಲ್ಲ ಎಂದರು.
ಎದುರಾಳಿಗಳ ಟೀಕೆಗಳ ಬಗ್ಗೆ ಇದೇ 18 ರಂದು ಜನ ತೀರ್ಮಾನ ಮಾಡುತ್ತಾರೆ. ನನಗೆ ಕ್ಷೇತ್ರದ ಅಭಿವೃದ್ಧಿಯೇ ಮುಖ್ಯ. ಈ ಬಗ್ಗೆ ನನ್ನ ಚಿಂತನೆಗಳು ಇದ್ದು, 18ರ ವರೆಗೂ ನನ್ನನ್ನು ಏನು ಕೇಳಬೇಡಿ ಎಂದರು.