ಬೆಂಗಳೂರು: ಮಕ್ಕಳ ಉಜ್ವಲ ಭವಿಷ್ಯಕ್ಕೋಸ್ಕರ ತಂದೆ- ತಾಯಿ ಮಾಡುವಂತಹ ಯಾಗ ಮತ್ತು ತ್ಯಾಗದ ಬಗ್ಗೆ ಒಂದು ಲೈನ್‍ನಲ್ಲಿ ಹೇಳಿ ಮುಗಿಸೋದಕ್ಕೆ ಆಗೋದಿಲ್ಲ. ಅಂತೆಯೇ ನಿಖಿಲ್ ಕುಮಾರಸ್ವಾಮಿಗೋಸ್ಕರ ಅವರ ತಂದೆ ಕುಮಾರಸ್ವಾಮಿ ಹಾಗೂ ತಾಯಿ ಅನಿತಾ ಕುಮಾರಸ್ವಾಮಿ ಕಠಿಣ ಯಾಗವನ್ನೇ ಕೈಗೊಂಡಿದ್ದಾರೆ.
ಹೌದು. ಪುತ್ರನ ಉಜ್ವಲ ಭವಿಷ್ಯಕ್ಕಾಗಿ ಕುಮಾರ ದಂಪತಿ ಮನೆದೇವರಿಗೆ ಹರಕೆ ಕಟ್ಟಿಕೊಳ್ಳುವುದಲ್ಲದೇ, ಅದೇನೆ ಆಗಲಿ ಸುಪುತ್ರನಿಗಾಗಿ ನಾವು ಕೆಲಸ ಮಾಡಲೇಬೇಕು ಅಂತ ಪಣ ತೊಟ್ಟಿದ್ದಾರೆ. ಸದ್ಯಕ್ಕೆ ಸೀತಾರಾಮ ಕಲ್ಯಾಣ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಇದನ್ನ ಹೊರತುಪಡಿಸಿದರೆ ನಿಖಿಲ್ ಬೇರೆ ಯಾವ ಸಿನಿಮಾದಲ್ಲಿ ತೊಡಗಿಸಿಕೊಂಡಿಲ್ಲ. ಜಾಗ್ವಾರ್ ಬಾಯ್‍ನ ಅರಸಿಕೊಂಡು ಕೆಲವೊಂದು ಸಿನಿಮಾಗಳ ಆಫರ್ ಬಂದಿತ್ತಾದ್ರೂ ನಿಖಿಲ್ ಯಾವ ಸಿನಿಮಾವನ್ನ ಒಪ್ಪಿಕೊಂಡಿಲ್ಲ. ಹೀಗಾಗಿ ತಮ್ಮ ಬ್ಯಾನರ್‍ನಲ್ಲಿ ಸರಣಿ ಸಿನಿಮಾಗಳನ್ನ ಶುರುಮಾಡಬೇಕು ಅನ್ನೋದು ಕುಮಾರಣ್ಣನ ಮಹದಾಸೆ. ಅದಕ್ಕಾಗಿ ಅನಿತಾ ಕುಮಾರಸ್ವಾಮಿ ಅವರಿಗೆ 5 ಸಿನಿಮಾಗಳ ನಿರ್ಮಾಣದ ಜವಾಬ್ದಾರಿಯನ್ನ ಹೊರಿಸಿದ್ದಾರೆ. 5 ಸಿನಿಮಾಗಳನ್ನ ಏಕಕಾಲದಲ್ಲಿ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ತೆರೆಗೆ ತರೋದಕ್ಕೆ ಪ್ಲಾನ್ ಮಾಡಿದ್ದಾರೆ ಎಂಬ ಸುದ್ದಿಯೊಂದು ಚಂದನವನದಲ್ಲಿ ಹರಿದಾಡುತ್ತಿದೆ.
ನಿಖಿಲ್ ಲೈಫ್ ಸೆಟ್ಲ್ ಮಾಡಬೇಕು ಅನ್ನೋದು ಕುಮಾರ ದಂಪತಿಯ ಮುಂದಿರುವ ಮಹಾಕನಸು. ಒಳ್ಳೆಯ ಹುಡುಗಿ ಹುಡುಕಿ ಮದುವೆ ಮಾಡಬೇಕು ಅನ್ನೋದು ಒಂದು ಕನಸು ಆದ್ರೆ, ಗಂಧದ ಗುಡಿಯಲ್ಲಿ ನಮ್ಮ ಹುಡುಗ ಗಟ್ಟಿಯಾಗಿ ನಿಲ್ಲಬೇಕು ಅನ್ನೋದು ಮತ್ತೊಂದು ಮಹಾಬಯಕೆ. ಬಣ್ಣದ ಲೋಕದಲ್ಲಿ ಮಗನನ್ನ ಗಟ್ಟಿಯಾಗಿ ನಿಲ್ಲಿಸಲು ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಇಬ್ಬರು ಈ ಮಹಾನ್ ತೀರ್ಮಾನಕ್ಕೆ ಬಂದಿದ್ದಾರೆ.
ಪರಭಾಷೆಯಲ್ಲಿ ಇತ್ತೀಚೆಗೆ ಬಂದಿರುವ ಎಲ್ಲಾ ಹಿಟ್ ಸಿನಿಮಾಗಳನ್ನ ನೋಡು. ಅದರಲ್ಲಿ ಯಾವ ಸಿನಿಮಾ ನಿನಗೆ ಇಷ್ಟವಾಗುತ್ತೋ, ಆ ಸಿನಿಮಾದ ನಿರ್ದೇಶಕರಿಂದ ನಿಖಿಲ್‍ಗೆ ಆಕ್ಷನ್ ಕಟ್ ಹೇಳಿಸೋಣ ಎಂದಿದಾರಂತೆ ಕುಮಾರಣ್ಣ. ಸಮ್ಮಿಶ್ರ ಸರ್ಕಾರದಲ್ಲಿ ಅಧಿಕಾರ ನಡೆಸುತ್ತಿರುವ ಕುಮಾರಸ್ವಾಮಿಯವರು. ಅಷ್ಟೇ ವೇಗದಲ್ಲಿ ತಮ್ಮ ಮಗನ ಬಣ್ಣದ ಜಗತ್ತಿನ ಲೈಫ್‍ನ ಸೆಟಲ್ ಮಾಡೋದಕ್ಕೆ ಪಣ ತೊಟ್ಟಿರುವುದು ವಿಶೇಷ.
ಈಗಾಗಲೇ ಹುಡುಗಿ ಹುಡುಕಾಟದಲ್ಲಿ ದೊಡ್ಡಗೌಡ್ರ ಕುಟುಂಬ ನಿರತವಾಗಿದೆ. ತಮ್ಮ ಮನೆತನಕ್ಕೆ ಒಪ್ಪುವ ದೊಡ್ಡ ಮನೆತನದ ಹುಡುಗಿಯನ್ನ ಸೊಸೆಯಾಗಿ ಬರಮಾಡಿಕೊಳ್ಳೋದಕ್ಕೆ ತಯಾರಿ ನಡೆಸುತ್ತಿದೆ. ಇತ್ತ ಸೀತಾರಾಮ ಕಲ್ಯಾಣ ಸ್ಯಾಂಡಲ್‍ವುಡ್ ನಲ್ಲಿ ಹೊಸ ಭರವಸೆಯನ್ನು ಮೂಡಿಸಿದ್ದು, ಸದ್ಯದಲ್ಲೇ ಚಿತ್ರ ತೆರೆಕಾಣಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv