– ಕಟ್ಟಡ ನಿರ್ಮಾಣವಾಗಿ 2 ವರ್ಷವಾದರೂ ವೈದ್ಯರಿಲ್ಲ
ರಾಮನಗರ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪತ್ನಿ, ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಅವರ ಕ್ಷೇತ್ರದಲ್ಲೇ ಆಸ್ಪತ್ರೆಯಲ್ಲಿ ಅವ್ಯವಸ್ಥೆ ತಾಂಡವಾಡುತ್ತಿದೆ. ವೈದ್ಯರು ಹಾಗೂ ಸಿಬ್ಬಂದಿ ಇಲ್ಲದೆ ಚಿಕಿತ್ಸೆ ಸಿಗದಂತಾಗಿದ್ದು, ಗ್ರಾಮಸ್ಥರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ರಾಮನಗರ ತಾಲೂಕಿನ ಅಕ್ಕೂರು ಗ್ರಾಮದಲ್ಲಿನ ಆರೋಗ್ಯ ಕೇಂದ್ರ ವೈದ್ಯರು ಹಾಗೂ ಸಿಬ್ಬಂದಿಗಳಿಲ್ಲದೆ ಹಾಳು ಕೊಂಪೆಯಾಗಿದೆ ಎಂದು ಗ್ರಾಮಸ್ಥರು ಆರೋಗ್ಯ ಕೇಂದ್ರಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ. ಈ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆಯಾಗಿ ಎರಡು ವರ್ಷ ಕಳೆದರೂ ಈವರೆಗೆ ಸೂಕ್ತ ಸಿಬ್ಬಂದಿಯನ್ನು ನಿಯೋಜಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
Advertisement
ಈ ಆಸ್ಪತ್ರೆಗೆ ವೈದ್ಯರು ಯಾರೂ ಬರುತ್ತಿಲ್ಲ, ಸಿಬ್ಬಂದಿ ಕೂಡ ಕಾಟಾಚಾರಕ್ಕೆ ಬಂದು ಹೋಗುತ್ತಾರೆ. ಸುತ್ತಮುತ್ತಲಿನ 4-5 ಗ್ರಾಮಗಳ ಜನರಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ಈ ಆರೋಗ್ಯ ಕೇಂದ್ರವನ್ನು ತೆರೆಯಲಾಗಿತ್ತು. ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಈ ಆರೋಗ್ಯ ಕೇಂದ್ರ ಇದ್ದರೂ ಇಲ್ಲದಂತಾಗಿದೆ. ರೋಗಿಗಳಿಗೆ ನೀಡುವ ಮಾತ್ರೆಗಳು ಕೂಡ ಅವಧಿ ಮುಗಿದು ಹೋಗಿದ್ದು, ಅಂತಹ ಮಾತ್ರೆಗಳನ್ನೆ ಇಟ್ಟುಕೊಂಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
Advertisement
Advertisement
ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ತಾಲೂಕು ವೈದ್ಯಾಧಿಕಾರಿಯನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದು, ತಾಲೂಕು ಅಧಿಕಾರಿಗಳ ಭರವಸೆ ಮೇರೆಗೆ ಗ್ರಾಮಸ್ಥರು ಪ್ರತಿಭಟನೆ ಕೈ ಬಿಟ್ಟಿದ್ದಾರೆ. ಲಕ್ಷಾಂತರ ರೂ. ವೆಚ್ಚ ಮಾಡಿ ಆಸ್ಪತ್ರೆ ಕಟ್ಟಡ ಕಟ್ಟಿದರೂ ಸಹ ವೈದ್ಯರು ಹಾಗೂ ಸಿಬ್ಬಂದಿಗಳಿಲ್ಲದೆ ಹಾಳು ಬಿದ್ದಿದೆ. ಈ ಕುರಿತು ಗಮನಹರಿಸಬೇಕು ಎಂಬುದು ಗ್ರಾಮಸ್ಥರ ಆಗ್ರವಾಗಿದೆ.