ಮುಂಬೈ: ಜೆಟ್ ಏರ್‌ವೇಸ್ (Jet Airways) ಸಂಸ್ಥಾಪಕ ನರೇಶ್ ಗೋಯಲ್ (Naresh Goyal) ಅವರ ಪತ್ನಿ ಅನಿತಾ ಗೋಯಲ್ (Anita Goyal) ಅವರು ಮುಂಬೈನ (Mumbai) ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ.
ಅವರು ಸುಮಾರು ನಸುಕಿನ ಜಾವ 3 ಗಂಟೆಗೆ ನಿಧನರಾದರು. ಅವರ ಮೃತದೇಹವನ್ನು ಮನೆಗೆ ತರಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಅವರು ದೀರ್ಘಕಾಲದಿಂದ ಕ್ಯಾನ್ಸರ್‌ನೊಂದಿಗೆ (Cancer) ಹೋರಾಡುತ್ತಿದ್ದರು. ಚಿಕಿತ್ಸೆಯ ಹೊರತಾಗಿಯೂ ಕಳೆದ ಕೆಲವು ತಿಂಗಳುಗಳಿಂದ ಅನಿತಾ ಅವರ ಆರೋಗ್ಯ ತೀವ್ರ ಹದಗೆಟ್ಟಿತ್ತು. ಅವರು ಕ್ಯಾನ್ಸರ್ ಮೂರನೇ ಹಂತದಲ್ಲಿತ್ತು ಎಂದು ತಿಳಿದು ಬಂದಿದೆ. ನರೇಶ್ ಗೋಯಲ್ ಸಹ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಇದನ್ನೂ ಓದಿ: ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್‍ಗೆ ಮಧ್ಯಂತರ ಜಾಮೀನು
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿಯಿಂದ ಬಂಧನಕ್ಕೊಳಗಾಗಿದ್ದ ನರೇಶ್ ಗೋಯಲ್ ಅವರಿಗೆ ಬಾಂಬೆ ಹೈಕೋರ್ಟ್ ಇತ್ತೀಚೆಗೆ ಜಾಮೀನು ನೀಡಿತ್ತು. ಗೋಯಲ್ ಅವರು ತಮ್ಮ ಪತ್ನಿಯ ಗಂಭೀರ ಆರೋಗ್ಯ ಸ್ಥಿತಿ ಹಾಗೂ ತಮ್ಮ ಚಿಕಿತ್ಸೆಗಾಗಿ ಮಾನವೀಯ ಆಧಾರದ ಮೇಲೆ ಜಾಮೀನು ಕೋರಿದ್ದರು.
ಅನಿತಾ ಅವರ ಪತಿ ಮತ್ತು ಇಬ್ಬರು ಮಕ್ಕಳಾದ ನಮ್ರತಾ ಮತ್ತು ನಿವಾನ್ ಅವರನ್ನು ಅಗಲಿದ್ದಾರೆ. ಗುರುವಾರ ಮುಂಬೈನಲ್ಲಿ ಅಂತ್ಯಕ್ರಿಯೆ ನಡೆಯುವ ಸಾಧ್ಯತೆಯಿದೆ.
ಕೆನರಾ ಬ್ಯಾಂಕ್ (Canara Bank) ಜೆಟ್ ಏರ್‌ವೇಸ್ ನೀಡಿದ್ದ 538.62 ಕೋಟಿ ರೂ. ಮೊತ್ತದ ಸಾಲವನ್ನು ವಂಚಿಸಿದ್ದಾರೆ ಮತ್ತು ಹಣವನ್ನು ಅಕ್ರಮವಾಗಿ ವರ್ಗಾಯಿಸಿದ್ದಾರೆ ಎಂಬ ಆರೋಪದ ಮೇಲೆ ಗೋಯಲ್ ಅವರನ್ನು ಸೆಪ್ಟೆಂಬರ್ 2023 ರಲ್ಲಿ ಇಡಿ ಬಂಧಿಸಿತ್ತು. 2023ರ ನವೆಂಬರ್‌ನಲ್ಲಿ ಇಡಿ ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಸಿದಾಗ ಅವರ ಪತ್ನಿಯನ್ನು ಬಂಧಿಸಲಾಗಿತ್ತು. ಅವರ ವಯಸ್ಸು ಮತ್ತು ಆರೋಗ್ಯದ ಸ್ಥಿತಿಯನ್ನು ಪರಿಗಣಿಸಿ ಅದೇ ದಿನ ವಿಶೇಷ ನ್ಯಾಯಾಲಯ ಅವರಿಗೆ ಜಾಮೀನು ನೀಡಿತ್ತು. ಇದನ್ನೂ ಓದಿ: ಜೀವನದಲ್ಲಿ ಭರವಸೆಯಿಲ್ಲ, ಜೈಲಿನಲ್ಲೇ ಸಾಯೋದು ಉತ್ತಮ: ಜೆಟ್ ಏರ್‌ವೇಸ್ ಸಂಸ್ಥಾಪಕ ಗೋಯಲ್