ಜೊತೆ ಜೊತೆಯಲಿ (Jothe Jotheyali) ಧಾರಾವಾಹಿಯಲ್ಲಿ ಅನಿರುದ್ಧ ಅಸಹಕಾರ ತೋರಿದರು ಮತ್ತು ಧಾರಾವಾಹಿ ತಂಡಕ್ಕೆ ನಷ್ಟವನ್ನುಂಟು ಮಾಡಿದರು ಅನ್ನುವ ಕಾರಣಕ್ಕಾಗಿ ಕನ್ನಡ ಕಿರುತೆರೆ ನಿರ್ಮಾಪಕರ ಸಂಘವು ಅನಿರುದ್ಧ (Aniruddha) ಅವರಿಗೆ ಅಲಿಖಿತ ಬ್ಯಾನ್ ಘೋಷಣೆ ಮಾಡಿತ್ತು. ಇಂದು ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಸಭೆ ಮಾಡಿ, ಪ್ರಕರಣವನ್ನು ಸುಖಾಂತ್ಯಗೊಳಿಸಿದ್ದಾರೆ.
ಸಭೆಯಲ್ಲಿ ಹಿರಿಯ ನಿರ್ದೇಶಕರಾದ ಲಿಂಗದೇವರು, ಶೇಷಾದ್ರಿ ಹಾಗೂ ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷ ಎಸ್.ವಿ ಶಿವಕುಮಾರ್, ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್ ಸೇರಿದಂತೆ ಹಲವರು ಹಾಜರಿದ್ದರು. ಅನಿರುದ್ಧ ಮತ್ತು ನಿರ್ಮಾಪಕರ ಸಂಘದ ಅಹವಾಲನ್ನು ಕೇಳಿಸಿಕೊಂಡು, ಹೇರಿದ್ದ ನಿಷೇಧವನ್ನು ತೆರವುಗೊಳಿಸಲಾಗಿದೆ. ಇದನ್ನೂ ಓದಿ: Breaking News- ಅನಿರುದ್ಧ ಬ್ಯಾನ್ ವಿಚಾರ: ಫಿಲ್ಮ್ ಚೇಂಬರ್ ಗೆ ಬಾರದಿರಲು ನಿರ್ಮಾಪಕರ ಸಂಘ ನಿರ್ಧಾರ
ಅನಿರುದ್ಧ ಅವರು ಸೂರ್ಯವಂಶ ಧಾರಾವಾಹಿಯಲ್ಲಿ ನಾಯಕರಾಗಿ ನಟಿಸುವುದಕ್ಕೂ ಆಕ್ಷೇಪಣೆ ವ್ಯಕ್ತಪಡಿಸಲಾಗಿತ್ತು. ಹಾಗಾಗಿ ಸಮಸ್ಯೆ ಮತ್ತಷ್ಟು ಜಟಿಲಗೊಂಡಿತ್ತು. ಇದೀಗ ಆ ಧಾರಾವಾಹಿಯಲ್ಲೂ ನಟಿಸಲು ಅನಿರುದ್ಧ ಅವರಿಗೆ ಅವಕಾಶ ಸಿಕ್ಕಿದೆ. ಎಸ್.ನಾರಾಯಣ್ ನಿರ್ದೇಶನದಲ್ಲಿ ಈ ಧಾರಾವಾಹಿ ಯಾವುದೇ ಅಡೆತಡೆ ಇಲ್ಲದೇ ಮೂಡಿ ಬರಲಿದೆ.
ಅನಿರುದ್ಧ ಅವರಿಗೆ ಸಭೆಯಲ್ಲಿ ಹಲವು ಸಲಹೆಗಳನ್ನೂ ನೀಡಲಾಗಿದ್ದು, ನಿರ್ಮಾಪಕರ ಹಿತದೃಷ್ಟಿಯನ್ನೂ ಕಾಪಾಡುವಂತೆ ತಿಳಿಸಲಾಗಿದೆ. ಮುಂದೆ ಹೀಗೆ ಆಗದಂತೆ ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ. ಈ ಮೂಲಕ ಎಲ್ಲ ಸಮಸ್ಯೆಗಳಿಗೂ ಸಭೆಯಲ್ಲಿ ಪರಿಹಾರ ಕಂಡುಕೊಳ್ಳಲಾಗಿದೆ. ಇದನ್ನೂ ಓದಿ: ‘ಕಾಂತಾರ 2’ ಸಿನಿಮಾ ಮಾಡಲು ಪಂಜುರ್ಲಿ ದೈವದಿಂದ ಸಿಕ್ತು ಅನುಮತಿ