ಕಿರುತೆರೆ ನಿರ್ಮಾಪಕರ ಸಂಘವು ನಟ ಅನಿರುದ್ಧ ಮೇಲೆ ತಗೆದುಕೊಂಡು ಕ್ರಮದ ಕುರಿತಾಗಿ ಇಂದು ಮಧ್ಯಾಹ್ನ 3.30ಕ್ಕೆ ಬೆಂಗಳೂರಿನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಅನಿರುದ್ಧ, ನಿರ್ದೇಶಕ ಎಸ್.ನಾರಾಯಣ್ ಹಾಗೂ ಕಿರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್ ಹಾಗೂ ಪದಾಧಿಕಾರಿಗಳು ಬರುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಈ ಸಭೆಯಲ್ಲಿ ತಾವು ಭಾಗಿ ಆಗುತ್ತಿಲ್ಲವೆಂದು ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್ ತಿಳಿಸಿದ್ದಾರೆ.
Advertisement
ಪಬ್ಲಿಕ್ ಟಿವಿ ಡಿಜಿಟಲ್ ನೊಂದಿಗೆ ಮಾತನಾಡಿದ ಭಾಸ್ಕರ್, ‘ಇದು ಕಿರುತೆರೆಗೆ ಸಂಬಂಧಿಸಿದ ವಿಚಾರ. ವಾಣಿಜ್ಯ ಮಂಡಳಿಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಈ ಸಮಸ್ಯೆ ಬಗೆಹರಿಯಬೇಕಾಗಿದ್ದು ನಮ್ಮಲ್ಲೇ. ಹಾಗಾಗಿ ವಾಣಿಜ್ಯ ಮಂಡಳಿಗೆ ಹೋಗದಿರಲು ನಿರ್ಧರಿಸಿದ್ದೇವೆ. ಚಿತ್ರೋದ್ಯಮದ ಮಾತೃಸಂಸ್ಥೆಯ ಅಧ್ಯಕ್ಷರಾದ ಭಾ.ಮಾ ಹರೀಶ್ ಅವರು ನಮಗೆ ಕರೆ ಮಾಡಿದ್ದರು. ಜೊತೆಗೆ ಅನಿರುದ್ಧ ಬರುತ್ತಾರೆ ಅಂದರು. ಅನಿರುದ್ಧ ಬರುತ್ತಾರೆ ಅಂದರೆ, ನಾವು ಬರುವುದಿಲ್ಲ ಎಂದು ಹೇಳಿದ್ದೇವೆ’ ಎಂದರು.
Advertisement
Advertisement
ಇಂದು ಸಂಜೆ ನಿರ್ಮಾಪಕರ ಸಂಘದಲ್ಲೇ ಮತ್ತೊಂದು ಸಭೆ ನಡೆಯಲಿದ್ದು, ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ನ ಮಾಜಿ ಅಧ್ಯಕ್ಷರು, ಹಾಲಿ ಅಧ್ಯಕ್ಷರು ಹಾಗೂ ಹಿರಿಯ ನಿರ್ದೇಶಕರು ಈ ವಿಷಯದ ಕುರಿತು ಚರ್ಚಿಸಿ ಒಂದು ತೀರ್ಮಾನಕ್ಕೆ ಬರುವುದಾಗಿಯೂ ಭಾಸ್ಕರ್ ತಿಳಿಸಿದ್ದಾರೆ. ಸಭೆಯಲ್ಲಿ ಬಿ.ಸುರೇಶ್, ಶೇಷಾದ್ರಿ, ಎಸ್.ವಿ. ಶಿವಕುಮಾರ್, ರವಿಕಿರಣ್, ರವಿ ಗರಣಿ ಸೇರಿದಂತೆ ಅನೇಕರು ಭಾಗಿಯಾಗಲಿದ್ದಾರೆ.
Advertisement
ಕರ್ನಾಟಕ ಟೆಲಿವಿಷನ್ ಅಸೋಷಿಯೇಷನ್ನ ಒಂದು ಅಂಗ ಸಂಸ್ಥೆಯಾಗಿರುವ ಕಿರುತೆರೆ ನಿರ್ಮಾಪಕರ ಸಂಘವು ಯಾವುದೇ ಕಾರಣಕ್ಕೂ ಅನಿರುದ್ಧ ಅವರ ಮಾತನ್ನು ಒಪ್ಪುತ್ತಿಲ್ಲ. ಎರಡು ವರ್ಷಗಳ ಕಾಲ ಯಾವುದೇ ನಿರ್ಮಾಪಕರು ಅನಿರುದ್ಧ ಅವರಿಗೆ ಅವಕಾಶ ಕೊಡುವುದು ಬೇಡ ಎಂದು ಹೊರಡಿಸಿರುವ ಆದೇಶವನ್ನು ವಾಪಸ್ಸು ಪಡೆಯುತ್ತಿಲ್ಲ. ಸಂಧಾನಕ್ಕೂ ಸಿದ್ಧರಾಗಿಲ್ಲ. ಹಾಗಾಗಿ ಅನಿರುದ್ಧ ವಾಣಿಜ್ಯ ಮಂಡಳಿಯ ಕದ ತಟ್ಟಿದ್ದಾರೆ.