ನೀರಿಗಾಗಿ ಹಾಹಾಕಾರ – ತೊಟ್ಟು ನೀರಿಲ್ಲದೇ ಒದ್ದಾಡುತ್ತಿರುವ ಜಾನುವಾರುಗಳು

Public TV
1 Min Read
dvg water

ದಾವಣಗೆರೆ: ಬೇಸಿಗೆ ಶುರುವಾಗುತ್ತಲೇ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ನೀರಿನ ಬವಣೆ ಉಂಟಾಗಿದ್ದು, ಕುಡಿಯಲು ನೀರು ಸಿಗದಿದ್ದಕ್ಕೆ ನೀರಿನ ತೊಟ್ಟಿಗೆ ಎಗರಿದ ಎಮ್ಮೆ ಬಳಿಕ ಒದ್ದಾಟ ನಡೆಸಿದ ಕರುಳು ಹಿಂಡುವಂತಹ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

dvg water 1

ಜಗಳೂರು ತಾಲೂಕಿನ ಹಾಲೇಕಲ್ಲು ಗ್ರಾಮದಲ್ಲಿ ನೀರಿನ ಸಮಸ್ಯೆ ಗಂಭೀರ ಸ್ವರೂಪ ತಾಳಿದೆ. ಗ್ರಾಮದಲ್ಲಿ ಜನರಿಗೆ ಕುಡಿಯುವ ನೀರನ್ನು ಕೇವಲ ಎರಡು ಟ್ಯಾಂಕ್ ಕಳಿಸಿ ಕೊಡಲಾಗುತ್ತದೆ. ಆದರೆ ಜಾನುವಾರುಗಳಿಗೆ ಕುಡಿಯಲು ನೀರಿನ ಸಮಸ್ಯೆ ಎದುರಾಗಿದೆ. ಕುಡಿಯಲು ನೀರಿಲ್ಲದೆ ಜಾನುವಾರುಗಳ ಸ್ಥಿತಿ ನೋಡಿ ಸಂಕಟ ಪಡುವಂತಾಗಿದೆ.

dvg water 2

ಗ್ರಾಮದಲ್ಲಿ ಜಾನುವಾರುಗಳು ನೀರು ಕುಡಿಯಲು ಎರಡು ತೊಟ್ಟಿಗಳಿದ್ದು ಸುಮಾರು ಮೂರು ತಿಂಗಳಿಂದ ಈ ತೊಟ್ಟಿಗೆ ನೀರು ಬಿಟ್ಟಿಲ್ಲ. ಈ ವೇಳೆ ಬಾಯಾರಿಕೆ ತಾಳಲಾರದೇ ಎಮ್ಮೆಯೊಂದು ನೀರು ಕುಡಿಯಲು ಆಗಮಿಸಿದೆ. ತಳದಲ್ಲಿದ್ದ ಅಳಿದುಳಿದ ನೀರು ಸಿಗದೇ ಇದ್ದಾಗ ಬಾಯಾರಿಕೆಯಿಂದ ಎಮ್ಮೆ ತೊಟ್ಟಿಗೆ ಜಿಗಿದು ತಳದಲ್ಲಿದ್ದ ನೀರನ್ನು ಕುಡಿದಿದೆ. ಆದ್ರೆ ಅಲ್ಲಿಂದ ಹೊರಗೆ ಬರಲು ದಾರಿ ತೋಚದೆ ಕಂಗಾಲಾಗಿ ಸಹಾಯಕ್ಕಾಗಿ ಎದುರು ನೋಡುತ್ತಿರುವ ದೃಶ್ಯವನ್ನು ಸ್ಥಳದಲ್ಲಿದ್ದವರು ವಿಡಿಯೋ ಮಾಡಿದ್ದಾರೆ.

DVG WATER PROBLEM

ಬಳಿಕ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ವಿಡಿಯೋ ಫುಲ್ ವೈರಲ್ ಆಗಿದೆ. ಅಷ್ಟೇ ಅಲ್ಲದೆ ಈ ವಿಡಿಯೋದಲ್ಲಿ ಇನ್ನೊಂದು ಎಮ್ಮೆಯೂ ಸಹ ನೀರು ಕುಡಿಯಲು ಬಂದಾಗ ಅದರ ಬಾಯಿಗೆ ನೀರು ಸಿಗುವುದಿಲ್ಲ, ಬಳಿಕ ಎಗರಿ ಎಗರಿ ನೀರು ಕುಡಿಯಲು ಪ್ರಯತ್ನ ಪಡುತ್ತಿರುವ ದೃಶ್ಯ ಕೂಡ ಸೆರೆಯಾಗಿದೆ. ಗ್ರಾಮದಲ್ಲಿ ಎಲ್ಲಾ ಬೋರ್ ವೆಲ್‍ಗಳು ಬತ್ತಿದ್ದು ಜನಗಳಿಗೂ ಸಹ ನೀರಿನ ಸಮಸ್ಯೆ ಎದುರಾಗಿದೆ. ಈ ಬಗ್ಗೆ ಪಿಡಿಓಗೆ ಹಲವು ಭಾರಿ ವಿಷಯ ತಿಳಿಸಿದ್ದರೂ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ, ಜನ ಜಾನುವಾರುಗಳ ಅಗತ್ಯಕ್ಕೆ ಅನುಗುಣವಾಗಿ ನೀರು ಪೂರೈಕೆ ಆಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *