ಚಾಮರಾಜನಗರ: ಕಳೆದ ಎರಡು ತಿಂಗಳ ಹಿಂದೆ ಬೆಂಕಿಗೆ ಆಹುತಿಯಾಗಿದ್ದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇದೀಗ ವನ್ಯಜೀವಿಗಳ ಕಲರವ ಆರಂಭವಾಗಿದೆ.
ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅರಣ್ಯ ಪ್ರದೇಶಕ್ಕೆ ಎರಡು ತಿಂಗಳ ಹಿಂದೆ ಬೆಂಕಿ ಬಿದ್ದ ಕಾರಣ ಸಾವಿರಾರು ಹೆಕ್ಟರ್ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿತ್ತು. ಇದರಿಂದ ಇಲ್ಲಿದ್ದ ಪ್ರಾಣಿಗಳು ಬಂಡೀಪುರ ಉದ್ಯಾನವನ್ನು ಬಿಟ್ಟು ಬೇರೆ ಅರಣ್ಯ ಪ್ರದೇಶಕ್ಕೆ ವಲಸೆ ಹೋಗಿದ್ದವು. ಹೀಗಾಗಿ ಬಂಡಿಪುರ ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳು ಕಾಣದೇ ಅರಣ್ಯ ಪ್ರದೇಶ ಬಿಕೋ ಎನ್ನುತ್ತಿತ್ತು.
ಕಳೆದ 15 ದಿನಗಳಿಂದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ತಣ್ಣನೆಯ ಹಾಗೂ ಚಿಗುರೊಡೆಯುತ್ತಿರುವ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ತಮ್ಮ ಗೂಡನ್ನು ಬಿಟ್ಟು ಹೋಗಿದ್ದ ವನ್ಯಜೀವಿಗಳು ಮತ್ತೆ ತಮ್ಮ ಗೂಡನ್ನು ಸೇರಿಕೊಂಡಿವೆ. ಇದರಿಂದ ಪ್ರತಿ ನಿತ್ಯ ಪ್ರಾಣಿಗಳು ಸಫಾರಿಗೆ ಹೋದ ಪ್ರವಾಸಿಗರಿಗೆ ಕಾಣ ಸಿಗುತ್ತಿವೆ.
ಹುಲಿ, ಚಿರತೆ, ಚಿಂಕೆ, ಆನೆ, ಕಾಡೆಮ್ಮೆ ಸೇರಿದಂತೆ ಇತರೆ ಪ್ರಾಣಿಗಳು ಪ್ರವಾಸಿಗರ ಕ್ಯಾಮರಾಗಳಿಗೆ ಫೋಸ್ ನೀಡುತ್ತಿವೆ. ಇದರಿಂದ ಪ್ರವಾಸಿಗರು ಫುಲ್ ಖುಷ್ ಆಗಿದ್ದು, ವನ್ಯಜೀವಿ ಪ್ರಿಯರಲ್ಲೊಂತು ಸಂತಸ ಮನೆ ಮಾಡಿದೆ.