ಬಾಲಿವುಡ್ ನ ಮತ್ತೊಂದು ಸಿನಿಮಾ ರಿಲೀಸ್ ಆದ ಒಂದೇ ದಿನಕ್ಕೆ ನೂರು ಕೋಟಿ ಕ್ಲಬ್ ಸೇರಿದೆ. ಜೊತೆಗೆ ರಿಲೀಸ್ ದಿನದಿಂದ ಈವರೆಗೂ ಬಾಕ್ಸ್ ಆಫೀಸ್ (Box Office) ಕಲೆಕ್ಷನ್ ಏರುತ್ತಲೇ ಇದೆ. ಮೂರು ದಿನದ ಒಟ್ಟು ಕಲೆಕ್ಷನ್ ಮುನ್ನೂರು ಕೋಟಿಗೂ ಅಧಿಕ ಎಂದು ಅಂದಾಜಿಸಲಾಗಿದೆ. ಈ ಮೂಲಕ ಜವಾನ್ ನಂತರ ಬಾಲಿವುಡ್ ನ ಮತ್ತೊಂದು ಚಿತ್ರ ಕೋಟಿ ಕೋಟಿ ಲೆಕ್ಕದಲ್ಲಿ ಕಲೆಕ್ಷನ್ ಮಾಡುತ್ತಿದೆ.
ಸಂದೀಪ್ ರೆಡ್ಡಿ ವಂಗ ನಿರ್ದೇಶನದ ಹಾಗೂ ರಣ್ ಬೀರ್ ಕಪೂರ್ (Ranbir Kapoor) , ಕನ್ನಡತಿ ರಶ್ಮಿಕಾ ಮಂದಣ್ಣ (Rashmika Mandanna), ಪ್ರಮುಖಪಾತ್ರದಲ್ಲಿ ನಟಿಸಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಅನಿಮಲ್ (Animal) ಡಿಸೆಂಬರ್ 1 ರಂದು ತೆರೆಗೆ ಬಂದಿದೆ. ಚಿತ್ರಕ್ಕೆ ಸೆನ್ಸಾರ್ (Censor) ಮಂಡಳಿಯು ‘ಎ’ ಪ್ರಮಾಣ ಪತ್ರ ನೀಡಿದ್ದರೂ, ಜೊತೆಗೆ ರಶ್ಮಿಕಾ ಮತ್ತು ರಣಬೀರ್ ಜೋಡಿಯ ಹಸಿಬಿಸಿ ದೃಶ್ಯಗಳನ್ನು ಸಿನಿಮಾ ಒಳಗೊಂಡಿದ್ದರೂ ಪ್ರೇಕ್ಷಕನಿಗೆ ಚಿತ್ರ ಹಿಡಿಸಿದೆ.
ಈ ಚಿತ್ರದ ಬಗ್ಗೆ ಚಿತ್ರತಂಡಕ್ಕೆ ಸಾಕಷ್ಟು ನಿರೀಕ್ಷೆ ಇತ್ತು. ನಟ ರಣಬೀರ್ ಕಪೂರ್ ಸಿನಿಮಾದ ಬಗ್ಗೆ ಮಾತನಾಡುತ್ತಾ, ‘ಇದು ವಿಭಿನ್ನವಾದ ಸಿನಿಮಾ. ತಂದೆ – ಮಗನ ಬಾಂಧವ್ಯದ ಜೊತೆ ಜೊತೆಗೆ ಹಿಂಸೆ ಮತ್ತು ಕ್ರೌರ್ಯಕ್ಕೆ ಒತ್ತು ನೀಡಿದ್ದಾರೆ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ. ಸೆಂಟೆಮೆಂಟ್ ಅಥವಾ ಹಿಂಸೆಗೆ ಎಷ್ಟು ಪ್ರಾಧಾನ್ಯತೆ ನೀಡಲಾಗಿದೆ ಎನ್ನುವುದನ್ನು ಚಿತ್ರದಲ್ಲಿ ನೋಡಬೇಕು. ಹಿರಿಯ ನಟರಾದ ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಅವರ ಜೊತೆ ನಟನೆ ಮಾಡಿದ್ದು ಒಳ್ಳೆಯ ಅನುಭವ. ಜೊತೆಗೆ ರಶ್ಮಿಕಾ ಮಂದಣ್ಣ ಪಾತ್ರಕ್ಕೆ ಜೀವ ತುಂಬಿದ್ದಾರೆ’ ಎಂದಿದ್ದರು.
ನಟಿ ರಶ್ಮಿಕಾ ಮಂದಣ್ಣ ಕೂಡ ಮಾತನಾಡಿ, ಚಿತ್ರದಲ್ಲಿ ರಣಬೀರ್ ಕಪೂರ್ ಹೆಂಡತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ವಿಭಿನ್ನವಾದ ಪಾತ್ರ. ನಿರ್ದೇಶಕರ ಕಲ್ಪನೆಗೆ ತಕ್ಕಂತೆ, ಅವರು ಹೇಳಿದಂತೆ ಕೆಲಸ ಮಾಡಿದ್ದೇನೆ ಎಂದಿದ್ದರು. ಹಿರಿಯ ನಟ ಬಾಬಿ ಡಿಯೋಲ್ ಮಾತನಾಡಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಚಿತ್ರಕ್ಕಾಗಿ ಸಾಕಷ್ಟು ಪ್ರಯತ್ನ ಮತ್ತು ಎಫರ್ಟ್ ಹಾಕಿದ್ದೇನೆ ಎಂದು ತಿಳಿಸಿದ್ದರು. ಈ ಎಲ್ಲರ ಎಫರ್ಟ್ ಇದೀಗ ಸಕ್ಸಸ್ ಕಂಡಿದೆ.