ಬೆಂಗಳೂರು: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ತಂಡಕ್ಕೆ ಮತ್ತೆ ವಾಪಾಸ್ ಆಗುತ್ತಾರಾ ಅಥವಾ ನಿವೃತ್ತಿ ಘೋಷಣೆ ಮಾಡುತ್ತಾರಾ ಎಂಬ ಗೊಂದಲ ಅಭಿಮಾನಿಗಳನ್ನು ಕಾಡುತ್ತಿದೆ. ಇದೇ ವೇಳೆ ಧೋನಿ ಕ್ರಿಕೆಟ್ ಭವಿಷ್ಯದ ಕುರಿತು ಮಾಜಿ ನಾಯಕ ಅನಿಲ್ ಕುಂಬ್ಳೆ ಪ್ರತಿಕ್ರಿಯೆ ನೀಡಿದ್ದು, ಐಪಿಎಲ್ ನಲ್ಲಿ ಧೋನಿ ಭವಿಷ್ಯ ನಿರ್ಧಾರವಾಗಲಿದೆ ಎಂದು ಹೇಳಿದ್ದಾರೆ.
ಮಾಧ್ಯಮ ಸಂದರ್ಶನವೊಂದರಲ್ಲಿ ಧೋನಿ ಕುರಿತು ಮಾತನಾಡಿರುವ ಅನಿಲ್ ಕುಂಬ್ಳೆ, 2020ರ ಐಪಿಎಲ್ ಧೋನಿ ವಾಪಸ್ಸಾಗುತ್ತಾರಾ ಎಂಬುವುದನ್ನು ನಿರ್ಧರಿಸಲಿದೆ. ಅಲ್ಲದೇ ಟಿ20 ವಿಶ್ವಕಪ್ ಟೂರ್ನಿಯಲ್ಲಿ ತಂಡಕ್ಕೆ ಧೋನಿ ಅವರ ಅಗತ್ಯವಿದ್ದರೆ ಖಂಡಿತಾ ತಂಡದಲ್ಲಿ ಸ್ಥಾನ ಪಡೆಯುತ್ತಾರೆ. ಆದರೆ ಇದಕ್ಕೆ ಸ್ವಲ್ಪ ಸಮಯಾವಕಾಶ ಬೇಕಾಗಿದ್ದು, ನಾವು ಕಾದು ನೋಡಬೇಕಿದೆ ಎಂದು ಹೇಳಿದ್ದಾರೆ.
Advertisement
Advertisement
ಇದೇ ವೇಳೆ ಟೀಂ ಇಂಡಿಯಾ ತಂಡದ ಬೌಲಿಂಗ್ ಬಗ್ಗೆಯೂ ಸಲಹೆ ನೀಡಿರುವ ಅನಿಲ್ ಕುಂಬ್ಳೆ, ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ಆಲ್‍ರೌಂಡರ್ ಆಟಗಾರರ ಬದಲು ವಿಕೆಟ್ ಪಡೆಯುವ ಸಾಮರ್ಥ್ಯವಿರುವ ಆಟಗಾರರನ್ನು ಆಯ್ಕೆ ಮಾಡಬೇಕಿದೆ. ಏಕೆಂದರೆ ವಿಶ್ವಕಪ್ ಟೂರ್ನಿ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ ಎಂದಿದ್ದಾರೆ.
Advertisement
ಕುಲ್ದೀಪ್ ಯಾದವ್, ಯಜುವೇಂದ್ರ ಚಹಲ್ ತಂಡದಲ್ಲಿ ಇರುವುದು ಅಗತ್ಯ ಎಂದು ಅನಿಲ್ ಕುಂಬ್ಳೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಟೂರ್ನಿಯ ಸಂದರ್ಭದಲ್ಲಿ ಆಸ್ಟ್ರೇಲಿಯಾದಲ್ಲಿರುವ ಮಂಜಿನ ಪರಿಣಾಮ ಮಣಿಕಟ್ಟಿನ ಸ್ಪಿನ್ ಬೌಲರ್ ಗಳು ವಿಕೆಟ್ ಪಡೆಯುವ ಅವಕಾಶವಿದೆ. ಆಲ್‍ರೌಂಡರ್ ಆಟಗಾರರ ಬದಲು ವಿಕೆಟ್ ಪಡೆಯವಂತಹ ವೇಗದ ಬೌಲರ್ ಗಳು ತಂಡದಲ್ಲಿದ್ದರೆ ಉತ್ತಮ. ಆಸೀಸ್ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ತಂಡದ ಆಯ್ಕೆ ಮಾಡಿದರೆ ಉತ್ತಮ ಎಂದು ಅನಿಲ್ ಕುಂಬ್ಳೆ ಹೇಳಿದ್ದಾರೆ.