ಮುಂಬೈ: ಕೆಲ ವರ್ಷಗಳಿಂದ ಕಿರುಕುಳ ನೀಡುತ್ತಿದ್ದನೆಂದು ಹಾಗೂ ಅಕ್ರಮ ಸಂಬಂಧ ಹೊಂದಿರುವ ಬಗ್ಗೆ ಸಿಟ್ಟುಗೊಂಡ ಪತ್ನಿ ತನ್ನ 75 ವರ್ಷದ ಪತಿಯನ್ನು ನೆಲಕ್ಕೆ ಹಾಕುವ ಪೇವರ್ ಬ್ಲಾಕ್ ನಲ್ಲೇ ಹೊಡೆದು ಬರ್ಬರವಾಗಿ ಕೊಲೆಗೈದ ಘಟನೆ ನಡೆದಿದೆ.
ಈ ಘಟನೆ ಚೆಂಬೂರು ಸ್ಲಮ್ ನಲ್ಲಿ ನಡೆದಿದ್ದು, ಪತಿಯನ್ನು ಕೊಲೆಗೈದ ಬಳಿಕ 65 ವರ್ಷದ ಪತ್ನಿ ಯಾರಿಗೂ ಅನುಮಾನ ಬಾರದೆಂದು ಶವವದೊಂದಿಗೆ ರಾತ್ರಿಯಿಡಿ ಕಳೆದಿದ್ದಾಳೆ.
ಘಟನೆ ವಿವರ: ಕಳೆದ 40 ವರ್ಷದ ಹಿಂದೆ ಧನ್ನುದೇವಿ, ಛೋಟಾಲ್ ಮೌರ್ಯ ಎಂಬವರನ್ನು ವರಿಸಿದ್ದಳು. ಛೋಟಾಲ್ ಮೌರ್ಯ ಇಬ್ಬರು ಮಹಿಳೆಯರ ಜೊತೆ ಅನೈತಿಕ ಸಂಬಂಧ ಹೊಂದಿರುವುದಾಗಿ ಪತ್ನಿ ಧನ್ನುದೇವಿಗೆ ಸಂಶಯ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಆಕೆ ಪತಿಯನ್ನು ಕೊಲೆಗೈದಿದ್ದಾಳೆ.
ಚೆಂಬುರಿನ ಕೃಷ್ಣ ಮೆನನ್ ನಗರದಲ್ಲಿ ವೃದ್ಧರೊಬ್ಬರು ಗಂಭೀರಗಾಯಗೊಂಡು ಬಿದ್ದಿರುವುದರ ಮಾಹಿತಿ ಪಡೆದ ತಿಲಕ ನಗರ ಪೊಲೀಸರು ಮೌರ್ಯ ಅವರ ಪತ್ನಿ ಹಾಗೂ ಮೂವರು ಗಂಡುಮಕ್ಕಳೊಂದಿಗೆ ಸ್ಥಳಕ್ಕೆ ದೌಡಾಯಿಸಿ, ಕೂಡಲೇ ಮೌರ್ಯರನ್ನು ರಾಜವಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಮೌರ್ಯ ಅದಾಗಲೇ ಮೃತಪಟ್ಟಿದ್ದಾರೆಂದು ವೈದ್ಯರು ತಿಳಿಸಿದ್ದಾರೆ. ಇದೇ ವೇಳೆ ಪತಿ ಹೇಗೆ ಸಾವನ್ನಪ್ಪಿದ್ದಾರೆಂದು ನನಗೆ ತಿಳಿದಿಲ್ಲ ಅಂತ ಪತ್ನಿ ಪೊಲೀಸರಿಗೆ ತಿಳಿಸಿದ್ದಾಳೆ.
ಇತ್ತ ವೈದ್ಯರು ಮೌರ್ಯ ತಲೆಗೆ ಗಂಭೀರ ಗಾಯಗಳಾಗಿದ್ದರಿಂದ ಇದೊಂದು ಕೊಲೆ ಕೇಸಾಗಿದೆ ಅಂತ ರಾಜವಾಡಿ ವೈದ್ಯರು ಪೊಲೀಸರಿಗೆ ತಿಳಿಸಿದ್ದಾರೆ. ಹೀಗಾಗಿ ತಿಲಕನಗರ ಪೊಲೀಸರು ಕೂಡಲೇ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ಮೃತರ ಪತ್ನಿ ಹಾಗೂ ಮೂವರು ಮಕ್ಕಳನ್ನು ಕೂಡ ವಿಚಾರಣೆ ನಡೆಸಲಾಗಿದೆ ಅಂತ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ತನಿಖೆ ಚುರುಕುಗೊಳಿಸಿದ್ರು. ಈ ವೇಳೆ ಘಟನೆ ನಡೆದ ವೇಳೆ ಮೌರ್ಯ ಅವರ ಪತ್ನಿ ಬಿಟ್ಟರೆ ಬೇರೆ ಯಾರು ಅವರ ಮನೆಯಲ್ಲಿ ಇರಲಿಲ್ಲ. ಈ ವಿಚಾರನ್ನು ತಿಳಿದುಕೊಂಡ ಪೊಲೀಸರು ಮತ್ತಷ್ಟು ವಿಚಾರಣೆ ನಡೆಸಿದಾಗ ನಾನೇ ಕೊಲೆ ಮಾಡಿದ್ದೇನೆ ಎಂದು ಪತ್ನಿ ಬಾಯ್ಬಿಟ್ಟಿದ್ದಾಳೆ. ಕೂಡಲೇ ಆಕೆಯ ಮೇಲೆ ಕೇಸ್ ದಾಖಲಿಸಿಕೊಂಡು, ಬಂಧಿಸಲಾಗಿದೆ ಅಂತ ಅವರು ವಿವರಿಸಿದ್ದಾರೆ.
ಬಂಧಿತ ಮಹಿಳೆಯನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಿದಾಗ, ಪತಿ ಸಣ್ಣ ವಿಚಾರಕ್ಕೆ ಸಂಬಂಧಿಸಿದಂತೆ ಶನಿವಾರ ರಾತ್ರಿ ನನ್ನೊಂದಿಗೆ ಜಗಳವಾಡಿದ್ರು. ಅಲ್ಲದೇ ಕೆಲ ವರ್ಷಗಳಿಂದ ಕಿರುಕುಳ ಕೊಡುತ್ತಿದ್ದರು. ಇದರಿಂದ ಬೇಸತ್ತು ಕೊಲೆ ಮಾಡಲು ನಿರ್ಧರಿಸಿದೆ. ಹೀಗಾಗಿ ನಮಗಮಿಬ್ಬರಿಗೆ ಜಗಳವಾದ ಬಳಿಕ ಅವರು ಮನೆಯ ಹೊರಗಡೆ ಮಲಗಿದ್ದರು. ಈ ವೇಳೆ ನಾನು ಅಲ್ಲೇ ಇದ್ದ ಪೇವರ್ ಬ್ಲಾಕ್ ತೆಗೆದುಕೊಂಡು ಬಂದು ಅವರ ತಲೆಗೆ ಹೊಡೆದಿದ್ದೇನೆ. ಈ ಕುರಿತು ಯಾರಿಗೂ ನನ್ನ ಮೇಲೆ ಸಂಶಯ ಬರಬಾರದೆಂಬ ನಿಟ್ಟಿನಲ್ಲಿ ಬೆಳಗ್ಗಿನವರೆಗೆ ಶವದೊಂದಿಗೆ ಮಲಗಿದ್ದೆ ಎನ್ನುವುದನ್ನು ತಿಳಿಸಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.