ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರು ಸಂಬಳ ಏರಿಕೆಗೆ ಆಗ್ರಹಿಸಿ ಬೀದಿಯಲ್ಲಿ ನಿಂತು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದರೆ, ಸರ್ಕಾರ ಸಮಸ್ಯೆಯನ್ನು ಬಗೆ ಹರಿಸುವ ಬದಲು ಕೇಂದ್ರ ಸರ್ಕಾರ ಅನುದಾನ ಕೊಡುತ್ತಿಲ್ಲ ಎನ್ನುವ ವಾದವನ್ನು ಮುಂದಿಟ್ಟಿದೆ.
ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆ ಇಂದು ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು. ನಿಯಮ 69ರ ಅಡಿ ಚರ್ಚೆ ಆರಂಭವಾಯಿತು. ಪ್ರತಿಪಕ್ಷದ ನಾಯಕರು ಸರ್ಕಾರ ನಡೆಯನ್ನು ಟೀಕಿಸಿ ವಾಗ್ದಾಳಿ ನಡೆಸಿದರು. ಈ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಮಾತನಾಡಿ ಯುಪಿಎ ಸರ್ಕಾರ ಇದ್ದಾಗ ಕೇಂದ್ರ ಸರ್ಕಾರ ಶೇ.90ರಷ್ಟು, ರಾಜ್ಯ ಸರ್ಕಾರ ಶೇ.10 ಗೌರವ ಧನ ಕೊಡುತಿತ್ತು. ಆದರೆ ಕೇಂದ್ರ ಸರ್ಕಾರ ಈಗ ಶೇ. 60, ರಾಜ್ಯ ಸರ್ಕಾರ ಶೇ.40 ರಷ್ಟು ಅನುದಾನ ನೀಡುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ 5,200 ರೂ. ಸಹಾಯಧನ ಕೊಡ್ತಿದ್ರೆ, ಕೇಂದ್ರ ಸರ್ಕಾರದ ಪಾಲು 1,800 ರೂ. ಮಾತ್ರ. ಇದರಿಂದಾಗಿ ಒಟ್ಟು 7000 ರೂ ಸಂಬಳ ಸಿಗುತ್ತಿದೆ ಎಂದು ಕೇಂದ್ರದ ವಿರುದ್ಧ ಸಚಿವೆ ಉಮಾಶ್ರೀ ಅಸಮಾಧಾನ ವ್ಯಕ್ತಪಡಿಸಿದರು.
Advertisement
ಸಿಎಂ ಸಿದ್ದರಾಮಯ್ಯ ಮಾತನಾಡಿ, ಇಂದಿರಾಗಾಂಧಿ ಕಾಲದಲ್ಲಿ ಗೌರವ ಧನ ಕೊಡಲು ಆರಂಭವಾಗಿದ್ದು, ಅಂದಿನಿಂದಲೂ ಕೇಂದ್ರ ಸರ್ಕಾರ ಶೇ.90 ರಷ್ಟು ಗೌರವಧನ ನೀಡುತ್ತಿದೆ. ಆದರೆ ಕೇಂದ್ರ ಸರ್ಕಾರ ಪಾಲು ಕಡಿತಗೊಳಿಸಿದ ಕಾರಣ ರಾಜ್ಯ ಸರ್ಕಾರಕ್ಕೆ ಹೊರೆಯಾಗಿದೆ. ಪ್ರತಿ ವರ್ಷ ನಾವು 500 ರೂ ಹೆಚ್ಚಳ ಮಾಡಿದ್ದೇವೆ. ಆದ್ರೆ 2016-17ರಲ್ಲಿ ಹೆಚ್ಚಳ ಮಾಡಿಲ್ಲ, ಅದು ಕೇಂದ್ರ ಸರ್ಕಾರದ ಕ್ರಮದಿಂದ ಆಗಿಲ್ಲ. ಬರೀ ಮಾತನಾಡಬಹುದು, ಕಾಳಜಿ ತೋರಿಸಬಹುದು.ಆದ್ರೆ ಕೇಂದ್ರ ಸರ್ಕಾರ ಪಾಲು ಕಡಿಮೆ ಮಾಡಿದ್ದು ಯಾಕೆ? ಇದು ಮಹಿಳಾ ಪರ ಕಾಳಜಿನಾ ಎಂದು ಪ್ರಶ್ನಿಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು
Advertisement
ಸಿಎಂ ಈ ರೀತಿ ಮಾತನ್ನು ಆಡಿದಾಗ ಬಿಜೆಪಿ, ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಶಾಸಕ ಸಿಟಿ ರವಿ ಮಾತನಾಡಿ, ಹೆಚ್ಚಿನ ಹಣ ನೀಡಲು ನಿಮಗೇನು ಬಂದಿದೆ? ಗೋವಾ, ತಮಿಳುನಾಡಿನಲ್ಲಿ ಕೊಟ್ಟಿಲ್ವಾ ಎಂದು ಮರು ಪ್ರಶ್ನೆ ಹಾಕಿದರು.
Advertisement
ಈ ವೇಳೇ ಕೇಂದ್ರ ಸರ್ಕಾರ ವಿರುದ್ಧ ಘೋಷಣೆ ಕಾಂಗ್ರೆಸ್ ಶಾಸಕರು ‘ಶೇಮ್ ಶೇಮ್’ ಎಂದು ಘೋಷಣೆ ಕೂಗಿದರೆ, ಸದನದ ಬಾವಿಗಿಳಿದು ಬಿಜೆಪಿ, ಜೆಡಿಎಸ್ ಸದಸ್ಯರು ಪ್ರತಿಭಟನೆ ನಡೆಸಿದರು. ಬಿಜೆಪಿ ಅವರದ್ದು ಭಂಡತನದ ಪರಮಾವಧಿ ಎಂದು ಸಿಎಂ ಹೇಳುತ್ತಿದ್ದಂತೆ ಪ್ರತಿಭಟನೆ ಜೋರಾಗಿ ಕೊನೆಗೆ ಸ್ಪೀಕರ್ ಸದನವನ್ನು ಮಧ್ಯಾಹ್ನ 2.30ಕ್ಕೆ ಮುಂದೂಡಿದರು.
Advertisement
ಹೊರೆಯಾಗಲ್ಲ: ಜಗದೀಶ್ ಶೆಟ್ಟರ್ ಮಾತನಾಡಿ, ಹಿಂದೆ ನಾನು ಸಿಎಂ ಆಗಿದ್ದಾಗ ದಿನಗೂಲಿ ನೌಕರರ ಖಾಯಂ ಮಾಡಿದ್ದೇನೆ. ಕೆಳಹಂತದ ನೌಕರರ ಬಗ್ಗೆ ಸರ್ಕಾರ ಹೆಚ್ಚು ಕಾಳಜಿ ವಹಿಸಬೇಕು. ಪೌರ ಕಾರ್ಮಿಕರನ್ನು ಖಾಯಂ ಮಾಡಿ. ಅದಕ್ಕೆ ಸಂಬಂಧಿಸಿದ ಯಾವುದೇ ಬಿಲ್ ತಂದ್ರೂ ಬೆಂಬಲಿಸುತ್ತೇವೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಕನಿಷ್ಟ 10,000 ರೂ ವೇತನ ನಿಗದಿ ಪಡಿಸಿ. ಹೆಣ್ಣುಮಕ್ಕಳು ಕಣ್ಣೀರು ಹಾಕಿ ಶಾಪ ಹಾಕಿದ್ರೆ ಸರ್ಕಾರಕ್ಕೆ ಒಳ್ಳೆಯದಾಗುವುದಿಲ್ಲ. ನಿನ್ನೆ ಇಡೀ ರಾತ್ರಿ ಬೀದಿಯಲ್ಲಿ ಮಹಿಳೆಯರು ಮಲಗಿದ್ದಾರೆ. ಸಂಬಳ ಏರಿಕೆ ಮಾಡಿದರೆ ಸರ್ಕಾರಕ್ಕೆ ಹೆಚ್ಚಿನ ಹೊರೆಯಾಗುವುದಿಲ್ಲ ಎಂದರು.
ಶೀಘ್ರವೇ ಸ್ಪಂದಿಸಿ: ಯಾವುದೇ ಒಂದು ಸಮುದಾಯದವರು ಮಾತ್ರ ಕಾರ್ಯ ನಿರ್ವಹಿಸುತ್ತಿಲ್ಲ. ಎಲ್ಲ ಸಮುದಾಯಕ್ಕೆ ಸೇರಿದವರು ಅಂಗನವಾಡಿ ಕಾರ್ಯಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅಂಗನವಾಡಿ ಕಾರ್ಯಕರ್ತರ ಮನವಿಗೆ ಸರ್ಕಾರ ಸ್ಪಂದಿಸಲೇಬೇಕು. ಕನಿಷ್ಠ ವೇತನ ಹತ್ತು ಸಾವಿರ ಕೇಳ್ತಿದ್ದಾರೆ ಇದ್ರಲ್ಲಿ ನ್ಯಾಯ ಇದೆ ಎಂದು ಎಚ್‍ಡಿ ಕುಮಾರಸ್ವಾಮಿ ಹೇಳಿದರು.
ಕಾರ್ಯಕರ್ತೆಯರ ಬೇಡಿಕೆ ಏನು?
ರಾಜ್ಯದಲ್ಲಿ ಒಟ್ಟು 1.25 ಲಕ್ಷ ಅಂಗನವಾಡಿ ಸಿಬ್ಬಂದಿ ಇದ್ದು, ವೇತನ 7 ಸಾವಿರದಿಂದ 10 ಸಾವಿರ ರೂ. ಹೆಚ್ಚಳ ಮಾಡಬೇಕು. ಸಹಾಯಕಿಯರ ವೇತನ 3,500 ರಿಂದ 7,500 ರೂ. ಹೆಚ್ಚಳ ವಾಗಬೇಕು. ಸಹಾಯಕಿಯರಿಗೆ ಮುಂಬಡ್ತಿ, ಪಿಂಚಣಿ, ಪಿಎಫ್ ಸೌಲಭ್ಯ ನೀಡಬೇಕೆಂಬ ಬೇಡಿಕೆಯನ್ನು ಇಟ್ಟಿದ್ದಾರೆ.
ಪ್ರತಿಭಟನೆ ಯಾಕೆ?
ಇಲ್ಲಿಯವರೆಗೆ ಕಾರ್ಯಕರ್ತೆಯರಿಗೆ ಪ್ರತಿ ತಿಂಗಳು 6 ಸಾವಿರ ಮತ್ತು ಸಹಾಯಕಿಯರಿಗೆ 3 ಸಾವಿರ ರೂ. ಸಂಬಳ ಸಿಗುತಿತ್ತು. ಈ ವರ್ಷದ ಬಜೆಟ್‍ನಲ್ಲಿ ಸರ್ಕಾರ ಕಾರ್ಯಕರ್ತೆಯರಿಗೆ 1 ಸಾವಿರ ರೂ. ಮತ್ತು ಸಹಾಯಕಿಯರಿಗೆ 500 ರೂ. ಹೆಚ್ಚಳ ಮಾಡುವುದಾಗಿ ತಿಳಿಸಿದೆ. ಈ ಹೆಚ್ಚಳ ನಮಗೆ ಸಾಲುವುದಿಲ್ಲ. ಹತ್ತಿರ ರಾಜ್ಯಗಳಾದ ಕೇರಳ, ಮಹಾರಾಷ್ಟ್ರ, ತಮಿಳುನಾಡು, ಗೋವಾ ಸರ್ಕಾರಗಳು ಕಾರ್ಯಕರ್ತೆಯರಿಗೆ 10 ಸಾವಿರ ರೂ. ಸಹಾಯಕಿಯರಿಗೆ 7,500 ರೂ. ನೀಡುತ್ತಿದೆ. ಹೀಗಾಗಿ ಕರ್ನಾಟಕ ಸರ್ಕಾರವೂ ನಮಗೆ ಇಷ್ಟೇ ಸಂಬಳ ನೀಡಬೇಕೆಂದು ಆಗ್ರಹಿಸಿ ಆಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.