– ಹೋರಾಟಕ್ಕೆ ಕೈಜೋಡಿಸಿದ ಸಹಸ್ರಾರು ಮಂದಿ
ಬೆಂಗಳೂರು: ನಗರದಲ್ಲಿ ಕಳೆದ ಮೂರು ದಿನಗಳಿಂದ ಅಂಗನವಾಡಿ ಕಾರ್ಯಕರ್ತೆಯರು ನಡೆಸುತ್ತಿರುವ ಅಹೋರಾತ್ರಿ ಧರಣಿ ಮಂಗಳವಾರ ರಾತ್ರಿಯೂ ಮುಂದುವರೆದಿದೆ.
ಪ್ರತಿಭಟನಾಕಾರರು ನಗರದ ಫ್ರೀಡಂಪಾರ್ಕ್‍ನ ಮುಖ್ಯರಸ್ತೆಯಲ್ಲಿ ಮಂಗಳವಾರ ರಾತ್ರಿ ಸಹ ಮಲಗಿ ಪ್ರತಿಭಟಿಸಿದ್ರು. ವೇತನ ಹೆಚ್ಚಳವಾಗುವ ತನಕ ನಾವು ಇಲ್ಲಿಂದ ಕದಲೋದಿಲ್ಲ ಎಂದು ಸರ್ಕಾರಕ್ಕೆ ಖಡಕ್ ಆಗಿ ತಿಳಿಸಿದ್ರು. ಗಾಳಿ ಚಳಿಯನ್ನ ಲೆಕ್ಕಿಸದೇ ಚಿಕ್ಕ ಮಕ್ಕಳನ್ನ ಕಟ್ಟಿಕೊಂಡು ಬೀದಿಯಲ್ಲಿ ಮಲಗಿದ್ರು. ಈ ದೃಶ್ಯಗಳು ಎಲ್ಲರ ಮನಕಲುಕುವಂತಿದ್ದವು.
Advertisement
Advertisement
ಇನ್ನು ಸರ್ಕಾರ ಬೀದಿಯಲ್ಲಿ ಮಲಗಿರೋರಿಗೆ ಅಂತಾ ನೂರಾರು ಜಮಾಖಾನಗಳನ್ನು ಕಳುಹಿಸಿಕೊಟ್ಟಿತ್ತು. ಆದ್ರೆ ಇವುಗಳನ್ನು ಸ್ವೀಕರಿಸಲು ಒಪ್ಪದ ಅಂಗನವಾಡಿ ಕಾರ್ಯಕರ್ತರು ನಾವು ರಸ್ತೆಯ ಮೇಲೆ ಮಲಗ್ತೀವಿ. ನಿಮ್ಮ ಜಮಖಾನ ಬೇಡ ಅಂತಾ ವಾಪಸ್ ಕಳುಹಿಸಿಕೊಟ್ಟರು. ಪೌರಕಾರ್ಮಿಕರು ರಸ್ತೆಯನ್ನ ಸ್ವಚ್ಛಗೊಳಿಸಿದ್ರು. ಆ ರಸ್ತೆಯ ಮೇಲೆಯೇ ಸಾವಿರಾರು ಜನ ಮಲಗಿ ರಾತ್ರಿ ಕಳೆದರು.
Advertisement
Advertisement
ಮಂಗಳವಾರದಂದು ಶೌಚಾಲಯ ಸಮಸ್ಯೆ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡುತ್ತಿದ್ದಂತೆ ಎಚ್ಚೆತ್ತ ಸರ್ಕಾರ ಫ್ರೀಡಂ ಪಾರ್ಕ್ ಬಳಿ 20ಕ್ಕೂ ಹೆಚ್ಚು ಇ ಟಾಯ್ಲೆಟ್‍ಗಳ ವ್ಯವಸ್ಥೆಯನ್ನ ಕಲ್ಪಿಸಿದೆ. ವಿಪರ್ಯಸ ಅಂದ್ರೆ ಇ ಟಾಯ್ಲೆಟ್‍ಗಳನ್ನು ಬಳಸೋದು ಹೇಗೆ ಅನ್ನೋದು ಪ್ರತಿಭಟನಾ ನಿರತರಾದ ಕೆಲವು ಹೆಣ್ಣುಮಕ್ಕಳಿಗೆ ಗೊತ್ತಿಲ್ಲದೆ ನಿತ್ಯ ಕರ್ಮಗಳನ್ನು ಪೂರೈಸಲು ನಾನಾ ಅವಸ್ಥೆ ಪಡ್ತಿದ್ದಾರೆ. ಅಹೋರಾತ್ರಿ ಧರಣಿಯಲ್ಲಿ ಇಲ್ಲಿಯತನಕ ಸುಮಾರು 12ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದವರಿಗೆ 108 ಅಂಬುಲೆನ್ಸ್‍ನಲ್ಲೇ ಪ್ರಥಮ ಚಿಕಿತ್ಸೆ ನೀಡಲಾಗ್ತಿದೆ. ಜೊತೆಗೆ ಅಗತ್ಯಕ್ಕೆ ತಕ್ಕಂತೆ ಕುಡಿಯೋ ನೀರನ್ನು ಪೂರೈಕೆ ಮಾಡಲಾಗ್ತಿದೆ.
ಹೋರಾಟ ಮತ್ತಷ್ಟು ತೀವ್ರಗೊಳಿಸಲು ಅಂಗನವಾಡಿ ಕಾರ್ಯಕರ್ತೆಯರು ನಿರ್ಧಾರ ಮಾಡಿದ್ದು, ಇದೀಗ ರಾಜ್ಯದ ಮೂಲೆ ಮೂಲೆಗಳಿಂದ ಸರಿಸುಮಾರು 20 ಸಾವಿರ ನೌಕರರು ಬೆಂಗಳೂರಿಗೆ ಧಾವಿಸ್ತಿದ್ದಾರೆ. ರೈಲು, ಬಸ್‍ಗಳ ಮೂಲಕ ಬೆಂಗಳೂರಿಗೆ ಕಾಲಿಟ್ಟಿದ್ದಾರೆ. ಇದ್ರಿಂದಾಗಿ ಇವತ್ತು ಮತ್ತಷ್ಟು ಟ್ರಾಫಿಕ್ ಸಮಸ್ಯೆ ಹಾಗೂ ಇನ್ನಿತರೆ ಸಮಸ್ಯೆಗಳು ಎದುರಾಗುವ ಸಾಧ್ಯತೆ ಹೆಚ್ಚಿದೆ.
ಇದೆಲ್ಲದರ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮತ್ತೊಮ್ಮೆ ಅಂಗನವಾಡಿ ಕಾರ್ಯಕರ್ತೆಯರ ಜೊತೆ ಮಾತನಾಡೋದಾಗಿ ಹೇಳಿದ್ದಾರೆ. ಆ ಮಾತುಕತೆಯಾದ್ರೂ ಸಫಲವಾಗುತ್ತಾ ಕಾದು ನೋಡಬೇಕಿದೆ.