ಆನೇಕಲ್: ಹೆಣ್ಣಿನ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಆದ ಮೂರು ಕೊಲೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಸರ್ಜಾಪುರ ಬಾಗಲೂರು ರಸ್ತೆಯ ಪೋರ್ ವಾಲ್ಸ್ ಅವೆನ್ಯೂ ಹೆಸರಿನ ನಿರ್ಮಾಣ ಹಂತದ ಅಪಾರ್ಟ್ಮೆಂಟ್‌ನಲ್ಲಿ ಮೂವರ ಬರ್ಬರ ಹತ್ಯೆಯಾಗಿತ್ತು. ಬಿಹಾರ ಮೂಲದ ಅನ್ಶು (20), ರಾಧೆಶ್ಯಾಮ್ (20), ದೀಪು (18) ಮೃತಪಟ್ಟಿದ್ದರು. ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳಾದ ಸೋನು ಮತ್ತು ಸುಧೀರ್ ಇಬ್ಬರನ್ನ ಸರ್ಜಾಪುರ ಪೊಲೀಸರು ಬಂಧಿಸಿದ್ದಾರೆ.
ಹೋಳಿ ಹಬ್ಬದ ಅಂಗವಾಗಿ ಬಿಹಾರ ಮೂಲದ ಕಟ್ಟಡ ಕಾರ್ಮಿಕರಿಗೆ ರಜೆ ಸಿಕ್ಕ ಖುಷಿಯಲ್ಲಿ ದೊಡ್ಡ ಕನ್ನಲ್ಲಿ ಬಳಿ ಅಪಾರ್ಟ್ಮೆಂಟ್‌ನಲ್ಲಿ ಕಟ್ಟಡ ಕಾರ್ಮಿಕರಾಗಿ ದುಡಿಯುತ್ತಿದ್ದ ತಮ್ಮದೇ ಊರಿನವರಾದ ಆರೋಪಿ ಸೋನು ಮತ್ತು ಸುಧೀರ್ನ ಎಣ್ಣೆ ಪಾರ್ಟಿಗೆ ಕರೆದಿದ್ದರು. ಪಾರ್ಟಿ ಏಂಜಾಯ್ ಮಾಡಲು ಆರೇಳು ಜನರು ಸರ್ಜಾಪುರದ ನಿರ್ಮಾಣ ಹಂತದ ಕಟ್ಟಡದಲ್ಲಿ ಸೇರಿದ್ದರು. ಎಣ್ಣೆ ಪಾರ್ಟಿ ಮಾಡುವಾಗ ನಡೆದ ಗಲಾಟೆ ಮೂವರ ಕೊಲೆಯಲ್ಲಿ ಅಂತ್ಯವಾಗಿತ್ತು. ಹೋಳಿ ಹಬ್ಬದ ದಿನ ರಕ್ತದೋಕುಳಿ ಹರಿಸಿ ಪರಾರಿಯಾಗಿದ್ದ ಆರೋಪಿಗಳಾದ ಸೋನು ಮತ್ತು ಸುಧೀರ್ನ ಬಂಧಿಸುವಲ್ಲಿ ಸರ್ಜಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಎಣ್ಣೆ ಪಾರ್ಟಿಯಲ್ಲಿ ನಶೆ ನೆತ್ತಿಗೇರುತ್ತಿದ್ದಂತೆ ಕೊಲೆಯಾದ ಅನ್ಶು ತನ್ನ ಸ್ನೇಹಿತ ಸುಧೀರ್ ತಂಗಿಗೆ ಫೋನ್ ಮಾಡಿ ಲೌಡ್‌ಸ್ಪೀಕರ್ ಇಟ್ಟು ಅಸಭ್ಯವಾಗಿ ಮಾತನಾಡೋದಕ್ಕೆ ಶುರು ಮಾಡಿದ್ದ. ಈ ಹಿಂದೆಯೂ ಸಹ ನನ್ನ ತಂಗಿಯ ಜೊತೆ ಈ ರೀತಿ ಎಲ್ಲಾ ಮಾತನಾಡಬೇಡ ಅಂತ ಸುಧೀರ್ ಸ್ನೇಹಿತ ಅನ್ಶುಗೆ ಹೇಳಿದ್ದ. ಆದರೂ ಸುಮ್ಮನಾಗದ ಅನ್ಶು ಎಣ್ಣೆ ಪಾರ್ಟಿಯಲ್ಲಿ ಪದೇ ಪದೇ ಫೋನ್ ಮಾಡುತ್ತಿದ್ದ. ಇದು ಸುಧೀರ್ ಕಣ್ಣು ಕೆಂಪಾಗಿಸಿತ್ತು. ಇದೇ ವಿಚಾರಕ್ಕೆ ಮಾತಿನ ಚಕಮಕಿ ನಡೆದು ವಿಕೋಪಕ್ಕೆ ತಿರುಗಿದೆ. ಈ ವೇಳೆ ಪಾರ್ಟಿ ಮಾಡಲು ಬಂದಿದ್ದ ನಾಲ್ವರ ಮೇಲೆ ಸೋನು, ಸುಧೀರ್ ಸೇರಿ ಕೈಗೆ ಸಿಕ್ಕ ದೊಣ್ಣೆ ಮತ್ತು ಕಬ್ಬಿಣದ ರಾಡ್‌ನಿಂದ ಅಟ್ಟಾಡಿಸಿ ಹಲ್ಲೆ ನಡೆಸಿದ್ದಾರೆ.
ನಶೆ ಏಟಿನ ದಾಳಿಗೆ ಇಬ್ಬರು ನಿರ್ಮಾಣ ಹಂತದ ಅಪಾರ್ಟ್ಮೆಂಟ್‌ನ ಮೂರನೇ ಮಹಡಿಯಲ್ಲಿ, ಮತ್ತೊಬ್ಬ ಅಪಾರ್ಟ್ಮೆಂಟ್ ಪಕ್ಕದ ಖಾಲಿ ಜಾಗದಲ್ಲಿ ರಕ್ತದ ಮಡುವಿನಲ್ಲಿ ವಿಲವಿಲ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ. ಘಟನೆಯಲ್ಲಿ ಅನ್ಶು, ದೀಪು, ರಾಧೆಶ್ಯಾಮ್ ಸಾವಿಗೀಡಾದ ಆರೋಪಿಗಳು ಕೃತ್ಯ ನಡೆಸಿ ಹೊರರಾಜ್ಯಕ್ಕೆ ಕಾಲ್ಕಿತ್ತಿದ್ದರು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಸರ್ಜಾಪುರ ಪೊಲೀಸರು ಹಲವು ಸಾಕ್ಷ್ಯಗಳನ್ನ ಕಲೆಹಾಕಿದ್ದರು. ಆರೋಪಿಗಳ ಬಂಧನಕ್ಕೆ ನಾಲ್ಕು ವಿಶೇಷ ತಂಡಗಳನ್ನ ರಚನೆ ಮಾಡಿ ಆರೋಪಿಗಳ ಬೆನ್ನು ಬಿದ್ದಿದ್ದ ಸರ್ಜಾಪುರ ಪೊಲೀಸರು, ಟ್ರೈನ್ ಮೂಲಕ ಹೊರರಾಜ್ಯಕ್ಕೆ ಎಸ್ಕೇಪ್ ಆಗುತ್ತಿದ್ದ ಆರೋಪಿಗಳ ಹೆಡೆಮುರಿ ಕಟ್ಟಿ ಪರಪ್ಪನ ಅಗ್ರಹಾರ ಜೈಲಿಗೆ ಬಿಟ್ಟಿದ್ದಾರೆ.