Connect with us

Bengaluru Rural

ಅಧಿಕಾರಕ್ಕಾಗಿ ಪೈಪೋಟಿ ಆನೇಕಲ್ ಬಿಜೆಪಿಯಲ್ಲಿ ಭಿನ್ನಮತ

Published

on

ಆನೇಕಲ್: ಅನರ್ಹ ಶಾಸಕರು ಅರ್ಹರಾಗಿ ಮಂತ್ರಿಯಾಗಲು ರೆಡಿಯಾಗಿದ್ದಾರೆ. ಆದರೆ ರಾಜ್ಯ ಬಿಜೆಪಿ ನಾಯಕರು ಮಂತ್ರಿ ಮಂಡಲ ವಿಸ್ತರಿಸುವ ಮೊದಲು ಪಕ್ಷದ ಕೆಲ ಕಾರ್ಯಕರ್ತರನ್ನು ನಿಗಮ ಮಂಡಳಿಗೆ ನೇಮಕ ಮಾಡಲು ಮುಂದಾಗಿದ್ದು, ಈ ವೇಳೆ ಅಧಿಕಾರ ಸಿಗದ ಕೆಲ ನಾಯಕರು ಪಕ್ಷದ ವಿರುದ್ಧ ಮುನಿಸಿಕೊಂಡು ಭಿನ್ನಮತ ಶುರು ಮಾಡಿದ್ದಾರೆ.

ಮಂತ್ರಿ ಮಂಡಲ ವಿಸ್ತರಣೆಯ ಮುಂಚೆಯೇ ಭಿನ್ನಮತ ಕಾಣಿಸಿಕೊಂಡಿದ್ದು, ಮಂತ್ರಿ ಮಂಡಲ ಪುನರಚನೆಯಾದರೆ ಬಿಜೆಪಿಯಲ್ಲಿ ಅದೆಷ್ಟು ಭಿನ್ನಮತ ಸೃಷ್ಟಿಯಾಗುತ್ತೋ ಎನ್ನುವಂತಾಗಿದೆ. ಇವತ್ತು ಆನೇಕಲ್ ಬಿಜೆಪಿ ತಾಲೂಕು ಘಟಕ ಆನೇಕಲ್ ಯೋಜನಾ ಪ್ರಾಧಿಕಾರದ ಅಧ್ಯಕ್ಷರ ಆಯ್ಕೆ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿದ್ದು, ರಾಜ್ಯ ಸರ್ಕಾರ ಎಡಿಎ ಅಧ್ಯಕ್ಷರನ್ನಾಗಿ ಜಯಣ್ಣರನ್ನು ಆಯ್ಕೆ ಮಾಡಿದೆ. ಈ ಆಯ್ಕೆ ಅದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಜೊತೆಗೆ ಅವರ ಆಯ್ಕೆಯನ್ನು ತಿರಸ್ಕರಿಸದಿದ್ದರೆ ತಾಲೂಕಿನ ಬಿಜೆಪಿಯ ಎಲ್ಲ ಚುನಾಯಿತ ಪ್ರತಿನಿಧಿಗಳು ಸಾಮೂಹಿಕ ರಾಜೀನಾಮೆ ನೀಡುವ ಎಚ್ಚರಿಕೆಯನ್ನು ನೀಡಿದ್ದು, ಈ ಮೂಲಕ ತಾಲೂಕು ಬಿಜೆಪಿಯಲ್ಲಿ ಭಿನ್ನಮತ ಬಾವುಟ ಹಾರಾಡಿದೆ.

ಇದೆ ತಿಂಗಳ 20 ರಂದು ಆನೇಕಲ್ ಯೋಜನಾ ಪ್ರಾಧಿಕಾರಕ್ಕೆ ಆನೇಕಲ್ ತಾಲೂಕಿನ ಬಿಜೆಪಿಯ ಹಿರಿಯ ನಾಯಕ ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಹಾಗೂ ಪ್ರಾಧಿಕಾರದ ಮಾಜಿ ಅಧ್ಯಕ್ಷರು ಆಗಿದ್ದ ಜಯಣ್ಣ ಎಂಬುವವರನ್ನು ಮತ್ತೊಂದು ಅವಧಿಗೆ ಎಡಿಎ ಅಧ್ಯಕ್ಷರನಾಗಿ ಆಯ್ಕೆ ಮಾಡಿ ಆದೇಶ ಹೊರಡಿಸಿತ್ತು. ಅದರಂತೆ ಜಯಣ್ಣ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. ಅಧಿಕಾರ ಸ್ವೀಕರಿಸುವ ವೇಳೆ ಬಿಜೆಪಿಯ ಕಾರ್ಯಕರ್ತರು ವಿರೋಧಿಸಿ ಪ್ರತಿಭಟನೆ ನಡೆಸಿದ್ದರು. ಇದ್ಯಾವುದಕ್ಕೂ ಜಗ್ಗದ ಜಯಣ್ಣ ಪದಗ್ರಹಣ ನಡೆಸಿದ್ರು.

ಇಂದು ಪತ್ರಿಕಾಗೋಷ್ಠಿ ನಡೆಸಿದ ತಾಲೂಕು ಬಿಜೆಪಿ ಅಧ್ಯಕ್ಷ ಕೆ.ವಿ.ಶಿವಪ್ಪ ಎಡಿಎ ಅಧ್ಯಕ್ಷರ ಆಯ್ಕೆಯನ್ನು ವಿರೋಧಿಸಿದ್ದು, ಜಯಣ್ಣ ತಾಲೂಕಿನ ಯಾವುದೇ ನಾಯಕರ ಅಥವಾ ಕೋರ್ ಕಮಿಟಿಯ ಗಮನಕ್ಕೆ ತರದೆ ತಮ್ಮ ಪ್ರಭಾವ ಬಳಸಿ ಏಕಾಏಕಿ ಅಧ್ಯಕ್ಷಗಾದಿಗೆ ಬಂದಿದ್ದು ಸರಿಯಲ್ಲ. ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಇವರನ್ನು ಯೋಜನಾ ಪ್ರಾಧಿಕಾರದ ಅಧ್ಯಕ್ಷರನಾಗಿ ಮಾಡಿದ್ದು, ಅಂದು ಎಲ್ಲ ನಾಯಕರು ಇವರ ಆಯ್ಕೆಯನ್ನು ಸ್ವಾಗತಿಸಿದ್ದರು.

ಆದರೆ ಇದೀಗ ಅಧಿಕಾರದ ಆಸೆಯಿಂದ ತಾಲೂಕು ನಾಯಕರ ಹಾಗೂ ಕಾರ್ಯಕರ್ತರ ಗಮನಕ್ಕೆ ತರದೆ ಅಧ್ಯಕ್ಷರಾಗಿದ್ದು ಮುಂದೆ ಪಕ್ಷ ಸಂಘಟನೆಗೆ ತೊಡಕಾಗುತ್ತೆದೆ. ಈ ಹಿನ್ನೆಲೆ ರಾಜ್ಯಘಟಕಕ್ಕೆ ಮನವಿ ಮಾಡಿದ್ದು ಕೂಡಲೇ ಜಯಣ್ಣ ಆಯ್ಕೆಯನ್ನು ರದ್ದುಗೊಳಿಸಬೇಕು. ಇಲ್ಲವಾದಲ್ಲಿ ತಾಲೂಕಿನ ಬಿಜೆಪಿಯ ಜನಪ್ರತಿನಿಧಿಗಳು ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎಂದು ಬಂಡಾಯದ ಬಾವುಟ ಹಾರಿಸಿದ್ದಾರೆ.

ಜಯಣ್ಣ ಎರಡನೇ ಭಾರಿ ಎಡಿಎ ಅಧ್ಯಕ್ಷರಾಗಿ ಆಯ್ಕೆಯಾಗಿರೋದು ಆನೇಕಲ್ ತಾಲೂಕಿನ ಬಿಜೆಪಿಯ ಯಾವ ಮುಖಂಡರಿಗೂ ಕಾರ್ಯಕರ್ತರಿಗೂ ಇಷ್ಟವಿಲ್ಲ. ಕಷ್ಟಪಟ್ಟು ಪಕ್ಷವನ್ನು ಸಂಘಟಿಸಿದವರಿಗೆ ಅಧಿಕಾರ ನೀಡದೆ ಒಬ್ಬರಿಗೆ ಎರಡೆರಡು ಭಾರಿ ಅಧಿಕಾರ ನೀಡೋದು ತಪ್ಪು ಎನ್ನುತ್ತಿದ್ದಾರೆ. ಇತ್ತ ಆನೇಕಲ್ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಪದವಿ ಸ್ವೀಕರಿಸಿದ ಜಯಣ್ಣ ಮಾತ್ರ ತಾವು ಪಕ್ಷಕ್ಕೆ ದುಡಿದ ಕೆಲಸವನ್ನು ನೋಡಿ ಗುರುತಿಸಿ ಅಧಿಕಾರ ನೀಡದೇ ತಾವು ಯಾವುದೇ ಒತ್ತಡ ತಂದು ಅಧ್ಯಕ್ಷ ಪಟ್ಟಕ್ಕೆ ಬಂದಿಲ್ಲ ಎನ್ನುತ್ತಿದ್ದಾರೆ.

ಬಿಜೆಪಿ ಸರ್ಕಾರ ರಾಜ್ಯದಲ್ಲಿ ಗಟ್ಟಿಗೊಳ್ಳುತ್ತಿದ್ದಂತೆ ಕಾರ್ಯಕರ್ತರಲ್ಲಿ ಅಧಿಕಾರದ ಆಸೆ ಹೆಚ್ಚಾಗಿದ್ದು, ಅಧಿಕಾರ ಸಿಗದ ಕಾರ್ಯಕರ್ತರು ಬಂಡಾಯ ಎದ್ದಿದ್ದು ಮುಂದೆ ಸಂಪುಟ ಪುನಾರಚನೆ ವೇಳೆ ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಭುಗಿಲೇಳುವ ಮುನ್ಸೂಚನೆಯ ಎನ್ನುವಂತಿದೆ.

Click to comment

Leave a Reply

Your email address will not be published. Required fields are marked *